ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ತರ್ತಿದೆ. ಎಲ್ಲ ವಯಸ್ಸಿನ ಮಕ್ಕಳು ಒಂಟಿಯಾಗಿ ಇನ್ಮುಂದೆ ಲೈವ್ ಸ್ಟ್ರೀಮಿಂಗ್ ಮಾಡುವಂತಿಲ್ಲ.
ಸೋಶಿಯಲ್ ಮೀಡಿಯಾ (Social media )ಗಳು ಮನರಂಜನೆ ಜೊತೆ ಗಳಿಕೆಗೆ ದೊಡ್ಡ ವೇದಿಕೆಯಾಗಿವೆ. ಹಾಗಾಗಿಯೇ ಹಳ್ಳಿಯಿಂದ ನಗರಗಳವರೆಗೆ , ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಇದು ಅಚ್ಚುಮೆಚ್ಚು. ಅದ್ರಲ್ಲೂ ಯೂಟ್ಯೂಬ್ ಬಹುತೇಕ ಎಲ್ಲರ ಫೆವರೆಟ್. ಇದ್ರಲ್ಲಿ ಬರಿ ವಿಡಿಯೋ ಮಾತ್ರವಲ್ಲ ಲೈವ್ ಸ್ಟ್ರೀಮಿಂಗ್ (live streaming) ಪ್ರಸಿದ್ಧಿ ಪಡೆದಿದೆ. ಪ್ರತಿ ದಿನ ಏನು ಮಾಡ್ತಾರೆ ಅನ್ನೋದನ್ನೇ ಯೂಟ್ಯೂಬರ್ ಜನರಿಗೆ ತೋರಿಸ್ತಾರೆ. ಅದನ್ನು ಕುತೂಹಲದಿಂದ ನೋಡುವ ಕಣ್ಣುಗಳು ಸಾಕಷ್ಟಿವೆ. ಲೈವ್ ಸ್ಟ್ರೀಮಿಂಗ್ ಮಾಡಿ ಲಕ್ಷಾಂತರ ರೂಪಾಯಿ ಗಳಿಸುವ ಮಕ್ಕಳು ನಮ್ಮಲ್ಲಿದ್ದಾರೆ.
ಈಗ ಯೂಟ್ಯೂಬ್ (YouTube) ತನ್ನ ಲೈವ್ಸ್ಟ್ರೀಮಿಂಗ್ ರೂಲ್ಸ್ ನಲ್ಲಿ ದೊಡ್ಡ ಬದಲಾವಣೆ ಮಾಡಲು ಮುಂದಾಗಿದೆ. ಜುಲೈ 22 ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಅದರ ಪ್ರಕಾರ, ಎಲ್ಲ ಮಕ್ಕಳೂ ಒಂಟಿಯಾಗಿ ಲೈವ್ ಸ್ಟ್ರೀಮಿಂಗ್ ಮಾಡಲು ಸಾಧ್ಯವಿಲ್ಲ. ಲೈವ್ ಸ್ಟ್ರೀಮಿಂಗ್ ಗೆ ಯೂಟ್ಯೂಬ್ ಮೊದಲೇ ವಯಸ್ಸಿನ ಮಿತಿ ನಿಗದಿಪಡಿಸಿದೆ. ಆದ್ರೆ ಈಗ ಈ ವಯಸ್ಸಿನ ಮಿತಿಯನ್ನು ಹೆಚ್ಚಿಸಿದೆ. ಕನಿಷ್ಠ 16 ವರ್ಷ ವಯಸ್ಸಾದ ಮಕ್ಕಳು ಮಾತ್ರ ಯೂಟ್ಯೂಬ್ ಚಾನಲ್ನಿಂದ ಲೈವ್ಸ್ಟ್ರೀಮ್ ಮಾಡಲು ಸಾಧ್ಯ. ಈ ಮೊದಲು ಈ ವಯಸ್ಸಿನ ಮಿತಿ 13 ವರ್ಷವಾಗಿತ್ತು. ಯೂಟ್ಯೂಬ್ ಹೊಸ ನಿಯಮದ ನಂತ್ರ 13 ರಿಂದ 15 ವರ್ಷದೊಳಗಿನ ಮಕ್ಕಳು ಯೂಟ್ಯೂಬ್ ಲೈವ್ಸ್ಟ್ರೀಮ್ ಮಾಡಲು ವಯಸ್ಕರ ಸಹಾಯ ಪಡೆಯಬೇಕಾಗುತ್ತದೆ.
ಹೊಸ ನಿಯಮ ಏನು ಹೇಳುತ್ತದೆ? : ಯೂಟ್ಯೂಬ್ ನ ಮಾರ್ಗಸೂಚಿಗಳ ಪ್ರಕಾರ, 16 ವರ್ಷದೊಳಗಿನ ಯುಟ್ಯೂಬರ್ ಜೊತೆ ವಯಸ್ಕರು ಲೈವ್ಸ್ಟ್ರೀಮ್ ಮಾಡಲು ಸಿದ್ಧರಿದ್ದರೆ ಯಾವುದೇ ಅಡ್ಡಿಯಿಲ್ಲ. ಇಲ್ಲಿ ವಯಸ್ಕರೇ ಚಾನಲ್ನ ಸಂಪಾದಕ, ವ್ಯವಸ್ಥಾಪಕ ಅಥವಾ ಮಾಲೀಕರಾಗಿರಬೇಕು. ಅವರೇ ಯೂಟ್ಯೂಬ್ ಚಾನಲ್ನಿಂದ ಸ್ವತಃ ಲೈವ್ಸ್ಟ್ರೀಮ್ ಶುರು ಮಾಡ್ಬಹುದು. ಕಂಟೆಂಟನ್ನು ವೀಕ್ಷಕರ ಜೊತೆ ಹಂಚಿಕೊಳ್ಳಬಹುದು.
ಹೆಚ್ಚಾಗ್ಬಹುದು ಫ್ಯಾಮಿಲಿ ಲೈವ್ಸ್ಟ್ರೀಮಿಂಗ್ ಪ್ರವೃತ್ತಿ : ಯೂಟ್ಯೂಬ್ ನಲ್ಲಿ ಸದ್ಯ 13 ವರ್ಷ ಮೇಲ್ಪಟ್ಟ ಮಕ್ಕಳು ಒಂಟಿಯಾಗಿ ಲೈವ್ ಸ್ಟ್ರೀಮಿಂಗ್ ಮಾಡ್ತಿದ್ದರು. ಆದ್ರೆ ಇನ್ಮುಂದೆ ಫ್ಯಾಮಿಲಿ ಲೈವ್ ಸ್ಟ್ರೀಮಿಂಗ್ ಹೆಚ್ಚಾಗಲಿದೆ. ಪೋಷಕರು ಅಥವಾ ಸಂಬಂಧಿಕರು, ಮಕ್ಕಳ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಮಕ್ಕಳನ್ನು ಮೇಲ್ವಿಚಾರಣೆ ಮಾಡಲಿದ್ದಾರೆ. ಇದು ಮಕ್ಕಳು ಮತ್ತು ಪೋಷಕರ ನಡುವೆ ಹೊಸ ಡಿಜಿಟಲ್ ಬಾಂಧವ್ಯವನ್ನು ಸೃಷ್ಟಿಸಲಿದೆ.
ಯೂಟ್ಯೂಬ್ ಈ ನಿಯಮದಿಂದ ಪ್ರಯೋಜನ ಏನು? : ಕುಟುಂಬ ಸದಸ್ಯರು ಒಟ್ಟಿಗೆ ಲೈವ್ಸ್ಟ್ರೀಮ್ ಮಾಡಿದ್ರೆ, ಅದು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಕುಟುಂಬಸ್ಥರು ಒಟ್ಟಿಗೆ ಸಮಯ ಕಳೆಯಲು ಇದು ನೆರವಾಗಲಿದೆ. ಯೂಟ್ಯೂಬನ್ನು ಕ್ರಿಯೇಟಿವ್ ಆಗಿ ಬಳಸುವ ಕುಟುಂಬಗಳಿಗೆ ಪ್ರಯೋಜನಕಾರಿಯಾಗಬಹುದು. ಯೂಟ್ಯೂಬ್ ನ ಈ ಹೊಸ ನಿಯಮವು ಮಕ್ಕಳು ಸೈಬರ್ಬುಲ್ಲಿಂಗ್ ಗೆ ಒಳಗಾಗುವುದನ್ನು ತಪ್ಪಿಸಬಹುದು. ಅಪರಿಚಿತರೊಂದಿಗೆ ಮಕ್ಕಳು ನಡೆಸುವ ಲೈವ್ ಚಾಟ್ ತಪ್ಪಿಸಬಹುದು.
ಯೂಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೋಜಿನಂತೆ ತೋರಿದ್ರೂ ಅದರಲ್ಲಿ ಕೆಲ ಸಮಸ್ಯೆ ಇದೆ. ಅದು ಗೌಪ್ಯತೆಗೆ ಧಕ್ಕೆ ತರುತ್ತದೆ. ಮಕ್ಕಳ ಜೊತೆ ಪಾಲಕರು, ಮನೆಯ ಎಲ್ಲ ವಿಷ್ಯವನ್ನು ಲೈವ್ ನಲ್ಲಿ ಹೇಳಿದಾಗ ಗೌಪ್ಯತೆಯ ಪ್ರಶ್ನೆ ಉದ್ಭವಿಸುತ್ತದೆ. ಯಾವುದೇ ವಿಷ್ಯವನ್ನು ಸಾರ್ವಜನಿಕಗೊಳಿಸುವ ಮುನ್ನ ಪಾಲಕರು ಹಾಗೂ ಮಕ್ಕಳು ಚರ್ಚಿಸಿ, ಬುದ್ಧಿವಂತಿಕೆಯಿಂದ ಹೆಜ್ಜೆ ಇಡಬೇಕು. ಯಾವುದನ್ನು ತೋರಿಸ್ಬೇಕು, ಯಾವುದನ್ನು ಗೌಪ್ಯವಾಗಿಡಬೇಕು ಎಂಬುದು ಎಲ್ಲರಿಗೂ ತಿಳಿದಿರಬೇಕು. ಯೂಟ್ಯೂಬ್ ಮಾರ್ಗಸೂಚಿಗಳನ್ನು ಉಲ್ಲಂಘಿಸದೆ ಲೈವ್ ಬಂದಾಗ ಯಾವುದೇ ಸಮಸ್ಯೆ ಇರುವುದಿಲ್ಲ.