ಹಾಸನ ಹಾರ್ಟ್ಅಟ್ಯಾಕ್ ಕೇಸ್‌ಗೆ ಸರ್ಕಾರದ ನಿರ್ಲಕ್ಷ್ಯ ಕಾರಣ; ಲಸಿಕೆ ಮೇಲೆ ಗೂಬೆ ಕೂರಿಸಿದ ಸಿಎಂಗೆ ಅಶೋಕ್ ಟಾಂಗ್! | R Ashoka Blames On Govt And Siddaramaiah For Hassan Heart Attack Deaths Sat

ಹಾಸನ ಹಾರ್ಟ್ಅಟ್ಯಾಕ್ ಕೇಸ್‌ಗೆ ಸರ್ಕಾರದ ನಿರ್ಲಕ್ಷ್ಯ ಕಾರಣ; ಲಸಿಕೆ ಮೇಲೆ ಗೂಬೆ ಕೂರಿಸಿದ ಸಿಎಂಗೆ ಅಶೋಕ್ ಟಾಂಗ್! | R Ashoka Blames On Govt And Siddaramaiah For Hassan Heart Attack Deaths Sat



ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಸರ್ಕಾರದ ನಿರ್ಲಕ್ಷ್ಯ ಕಾರಣ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಕೋವಿಡ್ ಲಸಿಕೆಯನ್ನು ದೂಷಿಸುವ ಬದಲು ಸರ್ಕಾರ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಜು.01): ಹಾಸನ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಏನು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಜನರ ಆತಂಕಕ್ಕೆ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳದೇ, ಕೋವಿಡ್ ಲಸಿಕೆಗಳ ಮೇಲೆ ಹುಯಿಲೆಬ್ಬಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನೀಡಿದ್ದು ಕೋವಿಡ್ ಲಸಿಕೆ, ಬಿಜೆಪಿ ಲಸಿಕೆ ಅಲ್ಲ. ಇದು ಕೋಟ್ಯಂತರ ಭಾರತೀಯರನ್ನು ರಕ್ಷಿಸಿದ ಲಸಿಕೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಹಾಸನದ ಹೃದಯಾಘಾತದ ಸಾವಿಗೆ ಕೋವಿಡ್ ಲಸಿಕೆ ಕಾರಣವಿರಬಹುದು ಎಂದು ಆರೋಪಿಸಿದ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಹಠಾತ್ ಹೃದಯಾಘಾತಗಳಿಂದ ಇಪ್ಪತ್ತಕ್ಕೂ ಹೆಚ್ಚು ಅಮೂಲ್ಯ ಯುವ ಜೀವಗಳು ಬಲಿಯಾಗಿರುವುದು ಅತ್ಯಂತ ದುಃಖದ ವಿಷಯ ಮತ್ತು ಆತಂಕಕಾರಿ ಬೆಳವಣಿಗೆ. ಆದರೆ ಇದಕ್ಕಿಂತ ಹೆಚ್ಚು ಆತಂಕಕಾರಿ ಸಂಗತಿ ಎಂದರೆ, ಈ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ ಮತ್ತು ಸಂವೇದನಾ ರಹಿತ ಸ್ಪಂದನೆಯಾಗಿದೆ.

ಜನ ಸಾಮಾನ್ಯರಲ್ಲಿ ಮನೆಮಾಡಿರುವ ಆತಂಕಕ್ಕೆ ಸ್ಪಂದಿಸಿ ಪರಿಹಾರ ಹುಡುಕಬೇಕಾದ ಸರ್ಕಾರ, ಕೋವಿಡ್ ಲಸಿಕೆಗಳ ಮೇಲೆ ಹುಯಿಲೆಬ್ಬಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಕೋವಿಡ್ ಲಸಿಕೆಗೆ ಆತುರದಲ್ಲಿ ಅನುಮತಿ ಕೊಟ್ಟಿರುವುದು ಈ ಸಾವುಗಳಿಗೆ ಕಾರಣವಾಗಿರಬಹುದು ಎಂಬ ಸಿಎಂ ಸಿದ್ದರಾಮಯ್ಯ ಅವರ ಬೇಜವಾಬ್ದಾರಿ ಹೇಳಿಕೆ, ಯಾವುದೇ ವೈಜ್ಞಾನಿಕ ಆಧಾರವಿಲ್ಲದ, ಅಪಾಯಕಾರಿ ಹಾಗೂ ಜನ ಸಾಮಾನ್ಯರ ಮನಸ್ಸಿನಲ್ಲಿ ಅನಗತ್ಯ ಆತಂಕ ಹುಟ್ಟಿಸುವ ಹೇಳಿಕೆಯಾಗಿದೆ.

ಸಿಎಂ ಸಿದ್ದರಾಮಯ್ಯನವರೇ, ಒಂದು ವಿಷಯ ನೆನಪಿಟ್ಟುಕೊಳ್ಳಿ. ಕೋವಿಡ್ ಲಸಿಕೆ ಬಿಜೆಪಿ ಲಸಿಕೆ ಅಲ್ಲ, ಇದು ಕೋಟ್ಯಂತರ ಭಾರತೀಯರನ್ನು ರಕ್ಷಿಸಿದ ಲಸಿಕೆ. ಇದು ಭಾರತೀಯ ವಿಜ್ಞಾನಿಗಳ, ವೈದ್ಯಕೀಯ ತಜ್ಞರ ಪರಿಶ್ರಮದ ಫಲ. ಈ ಲಸಿಕೆ ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕೋಟ್ಯಂತರ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳು ಮಾನ್ಯತೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಲಸಿಕೆಯನ್ನು ಇಂದು ರಾಜಕೀಯ ಲಾಭಕ್ಕಾಗಿ ಅನುಮಾನಿಸುವುದು, ಅದರ ಬಗ್ಗೆ ಅಪಪ್ರಚಾರ ಮಾಡುವುದು ವಿಜ್ಞಾನಕ್ಕೆ, ವಿಜ್ಞಾನಿಗಳಿಗೆ, ವೈದ್ಯಕೀಯ ಲೋಕಕ್ಕೆ ಮಾಡುವ ಅಪಮಾನ.

ಕೈಲಾಗದವನು ಮೈಪರಚಿಕೊಂಡ ಎಂಬಂತೆ, ಕೋವಿಡ್ ಲಸಿಕೆಯನ್ನು ದೂಷಿಸುವ ಬದಲು, ಈ ಸಾವುಗಳನ್ನು ತಡೆಗಟ್ಟಲು ತಮ್ಮ ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವುದನ್ನ ತಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಪ್ರಶ್ನಿಸಿಕೊಳ್ಳಿ.

  • ಹಾಸನ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳನ್ನು ತಡೆಗಟ್ಟಲು ಸರ್ಕಾರ ಏನು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ?
  • ‘ಹೃದಯ ಜ್ಯೋತಿ’ ಮತ್ತು ‘ಗೃಹ ಆರೋಗ್ಯ’ ಯೋಜನೆಗಳು ಕೇವಲ ಘೋಷಣೆಗಳಿಗೆ, ಜಾಹೀರಾತುಗಳಿಗೆ ಸೀಮಿತವಾಗಿದೆಯೋ ಅಥವಾ ಏನಾದರೂ ಕಾರ್ಯರೂಪಕ್ಕೆ ಬಂದಿದೆಯೋ?
  • ಫೆಬ್ರವರಿಯಲ್ಲೇ ನೇಮಕವಾಗಿದ್ದ ಡಾ.ರವೀಂದ್ರನಾಥ್ ನೇತೃತ್ವದ ಸಮಿತಿಯ ಅಧ್ಯಯನದ ವರದಿ ಯಾವ ಹಂತದಲ್ಲಿದೆ?
  • ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಕೋವಿಡ್ ಲಸಿಕೆಯ ಮೇಲೆ ಗೂಬೆ ಕೂರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು, ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು ಯಾವ ಸೀಮೆ ಆತ್ಮಸಾಕ್ಷಿ?

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಹಾಸನದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತದ ಸಾವುಗಳ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, ಆತುರಾತುರದಲ್ಲಿ ಕೊರೊನಾ ಲಸಿಕೆಗೆ ಅಧಿಕೃತ ಅನುಮೋದನೆ ಕೊಟ್ಟು, ಜನರಿಗೆ ಹಂಚಿದ್ದು ಕೂಡ ಈ ಸಾವುಗಳಿಗೆ ಕಾರಣವಿರಬಹುದು ಎಂಬುದನ್ನು ಅಲ್ಲಗಳೆಯಲಾಗದ. ಈ ಕಾರಣ ವಿಶ್ವದ ಅನೇಕ ಅಧ್ಯಯನಗಳು ಇತ್ತೀಚೆಗೆ ಹೆಚ್ಚಾಗಿರುವ ಹೃದಯ ಸ್ತಂಭನಕ್ಕೆ ಕೊವಿಡ್ ಲಸಿಕೆ ಕಾರಣ ಎಂಬುದನ್ನು ಹೇಳಿವೆ. ಈ ವಿಚಾರದಲ್ಲಿ ಬಿಜೆಪಿಯವರು ನಮ್ಮನ್ನು ಟೀಕಿಸುವ ಮುನ್ನ ಆತ್ಮಸಾಕ್ಷಿಯನ್ನೊಮ್ಮೆ ಕೇಳಿಕೊಳ್ಳಲಿ ಎಂದು ಹೇಳಿದ್ದರು.



Source link

Leave a Reply

Your email address will not be published. Required fields are marked *