
ಹೊಸಕೋಟೆಯಲ್ಲಿ ಎದೆನೋವು ಎಂದು ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬರು ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಬ್ರೈನ್ಡೆಡ್ ಆಗಿರುವ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈದ್ಯರು ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ/ ಹೊಸಕೋಟೆ (ಜು. 02): ‘ಎದೆನೋವು’ ಎಂದು ಓಡಿಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬರಿಗೆ ಚಿಕಿತ್ಸೆ ನೀಡಲು ಹಾಸಿಗೆ ಮೇಲೆ ಮಲಗಿಸಿದ ಕೆಲವೇ ನಿಮಿಷಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ ಆಗುವ ಮೂಲಕ ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಆಗಿ ಸಾವನ್ನಪ್ಪಿದ ದುರ್ಘಟನೆ ಹೊಸಕೋಟೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಗೆ ಇಂದು ಬೆಳಿಗ್ಗೆ 52 ವರ್ಷದ ಕೋನಪ್ಪ ಎಂಬವರು ಎದೆ ನೋವಿನಿಂದ ಬಳಲುತ್ತಾ ಸ್ವತಃ ನಡೆದುಕೊಂಡು ಆಸ್ಪತ್ರೆಗೆ ಬಂದಿದ್ದರು. ಆದರೆ, ಆಸ್ಪತ್ರೆಯ ಭದ್ರತಾ ಕ್ಯಾಮೆರಾದ ದೃಶ್ಯಗಳ ಪ್ರಕಾರ, ಅವರು ಒಳಗೆ ಪ್ರವೇಶಿಸಿದ ಕೆಲವೇ ಕ್ಷಣಗಳಲ್ಲಿ ಕಾರ್ಡಿಯಾಕ್ ಅರೆಸ್ಟ್ (ಹೃದಯ ನಿಲ್ಲುವಿಕೆ) ಉಂಟಾಗಿ, ಅವರು ಕುಸಿದು ಬಿದ್ದರು. ವೈದ್ಯರು ತಕ್ಷಣವೇ ಚಿಕಿತ್ಸೆ ನೀಡಲು ಮುಂದಾದರೂ, ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ರವಾನಿಸಲು ಯತ್ನಿಸುವಷ್ಟರಲ್ಲಿ ಕೋನಪ್ಪ ಅವರ ಮೆದುಳು ನಿಷ್ಕ್ರಿಯವಾಗಿದ್ದು, ಬ್ರೈನ್ ಡೆಡ್ ಘೋಷಿಸಲಾಯಿತು.
ಈ ಘಟನೆ ಆತನ ಕುಟುಂಬಸ್ಥರಲ್ಲಿ ಆಘಾತ ಉಂಟುಮಾಡಿದ್ದು, ವೈದ್ಯರ ಪ್ರಕಾರ ಇತ್ತೀಚೆಗೆ ಇಂತಹ ತೀವ್ರ ಹೃದಯಾಘಾತದ (cardiac arrest) ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿದ್ದಾನೆ. ಇನ್ನು ಕೋನಪ್ಪ ಬೆಳಗ್ಗೆ ಲವಲವಿಕೆಯಿಂದ ಇದ್ದರು, ಕೆಲವು ನಿಮಿಷಗಳಲ್ಲಿ ಬ್ರೈನ್ ಡೆಡ್ ಆಗುವುದು ಎಂದರೆ ಅಪಾರ ದುಃಖದ ಸಂಗತಿ’ ಎಂದು ಮನೆಯವರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಗಳು ವೈದ್ಯಕೀಯ ತುರ್ತು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತಿದ್ದು, ಈ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಗೆ ಲಭ್ಯವಾಗಿದೆ.
ಇಂತಹ ಘಟನೆಗಳು ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶವನ್ನು ಪುನಃ ನೆನಪಿಸುತ್ತವೆ. ಎದೆನೋವು, ಉಸಿರಾಟದ ತೊಂದರೆ, ಅಥವಾ ಶರೀರದ ಎಡಭಾಗದಲ್ಲಿ ತೀವ್ರ ನೋವು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.