
ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ 22 ರನ್‌ಗಳಿಂದ ಸೋಲು ಕಂಡಿದೆ. ಮೊಹಮ್ಮದ್ ಸಿರಾಜ್ ಅವರ ಕೊನೆಯ ವಿಕೆಟ್ ಬೇಲ್ಸ್ ಉರುಳಿದ ರೀತಿ ನಿಜಕ್ಕೂ ಬೇಸರ ತರಿಸಿತು. ಇದರೊಂದಿಗೆ ಇಂಗ್ಲೆಂಡ್ ಆಂಡರ್ಸನ್-ತೆಂಡುಲ್ಕರ್ ಟ್ರೋಫಿಯಲ್ಲಿ 2-1 ಮುನ್ನಡೆ ಸಾಧಿಸಿದೆ.
ಲಂಡನ್ (ಜು.14): ಗೆಲುವಿನಿಂದ ಜಸ್ಟ್ 23 ರನ್ ದೂರವಿದ್ದಾಗ ಪಾಕ್ ಮೂಲದ ಬೌಲರ್ ಶೋಯೆಬ್ ಬಶೀರ್ ಎಸೆದ 5ನೇ ಎಸೆತವನ್ನು ಮೊಹಮದ್ ಸಿರಾಜ್ ಅದ್ಭುತವಾಗಿ ಡಿಫೆಂಡ್ ಮಾಡಿದ್ದರು. ಆದರೆ, ಬ್ಯಾಟ್‌ಗೆ ತಾಕಿ ನೆಲಕ್ಕೆ ಬಿದ್ದ ಚೆಂಡು ಲೆಗ್‌ಸ್ಟಂಪ್‌ಗೆ ಸುಮ್ಮನೆ ಮುತ್ತಿಕ್ಕಿದಂತೆ ಮಾಡಿತು. ಆದರೆ, ಚೆಂಡು ಕೊಂಚ ವೇಗ ಹೊಂದಿದ್ದರಿಂದ ಒಂದು ಬೇಲ್ಸ್ ಎಗರಿ ಕೆಳಕ್ಕೆ ಬಿದ್ದಿತು. ಅಲ್ಲಿಗೆ ಇಂಗ್ಲೆಂಡ್ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಚೆಂಡನ್ನು ಕಾಲಿನಿಂದ ನಡೆಯಬೇಕು ಎನ್ನುವಷ್ಟರಲ್ಲಿ ಸ್ಟಂಪ್‌ಗೆ ಮುತ್ತಿಕ್ಕಿ ಬೇಲ್ಸ್ ಉರುಳಿದ್ದನ್ನು ಕಂಡ ಮೊಹಮದ್ ಸಿರಾಜ್ ಅಲ್ಲಿಯೇ ಕುಸಿದು ಕುಳಿತರು. ಅದರೊಂದಿಗೆ ಲಾರ್ಡ್ಸ್ ಥ್ರಿಲ್ಲರ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 22 ರನ್‌ಗಳಿಂದ ಭಾರತವನ್ನು ಮಣಿಸುವ ಮೂಲಕ ಆಂಡರ್ಸನ್-ತೆಂಡುಲ್ಕರ್ ಟ್ರೋಫಿಯಲ್ಲಿ 2-1 ಮುನ್ನಡೆಗೇರಿತು.