ಬಂದಾ ಜಿಲ್ಲೆಯಲ್ಲಿ ಗಂಡನೊಂದಿಗಿನ ಜಗಳದ ನಂತರ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಸಾವಿಗೆ ಶರಣಾಗಿದ್ದಾರೆ.
ಬಂದಾ: ಗಂಡನೊಂದಿಗಿನ ಜಗಳದ ನಂತರ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಬಂದಾ ಜಿಲ್ಲೆಯ ರಿಸೌರಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಗಂಡ ಹೆಂಡತಿಯ ಕಾದಾಟಕ್ಕೆ ಏನೂ ಅರಿಯದ ಪುಟ್ಟ ಮಕ್ಕಳು ಉಸಿರು ಚೆಲ್ಲಿವೆ. ಮೃತರನ್ನು ತಾಯಿ ರೀನಾ ಆಕೆಯ ಮಕ್ಕಳಾದ 9 ವರ್ಷದ ಹಿಮಾಂಶು, 5 ವರ್ಷದ ಆನ್ಸಿ ಹಾಗೂ 3 ವರ್ಷದ ಪ್ರಿನ್ಸ್ ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹದ ನಂತರ ಮಕ್ಕಳೊಂದಿಗೆ ಮನೆಬಿಟ್ಟ ತಾಯಿ:
ರೀನಾ ಹಾಗೂ ಗಂಡ ಅಖಿಲೇಶ್ ಮಧ್ಯೆ ಶುಕ್ರವಾರ ರಾತ್ರಿ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಇದಾದ ನಂತರ ಈಕೆ ತನ್ನ ಗಂಡನಿಗೆ ತಿಳಿಸದೇ ಮೂವರು ಮಕ್ಕಳೊಂದಿಗೆ ಮನೆ ಬಿಟ್ಟಿದ್ದಾಳೆ. ಈ ವಿಚಾರ ಮರುದಿನ ಬೆಳಗ್ಗೆ ಆಕೆಯ ಅತ್ತೆ ಮಾವನವರಿಗೆ ಗೊತ್ತಾಗಿದ್ದು, ಹುಡುಕಲು ಆರಂಭಿಸಿದ್ದಾರೆ.ಈ ವೇಳೆ ಕಾಲುವೆಯೊಂದರ ದಡದಲ್ಲಿ ಇವರ ಬಟ್ಟೆಗಳು, ಬಳೆ, ಬ್ರಾಸ್ಲೇಟ್, ಚಪ್ಪಲಿಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿದ್ದು, ಕೂಡಲೇ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇವರ ವಸ್ತುಗಳು ದಡದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಇವರು ನೀರಿಗೆ ಹಾರಿರಬಹುದು ಎಂಬ ಶಂಕೆಯ ಮೇರೆಗೆ ಮುಳುಗುತಜ್ಞರನ್ನು ಕರೆಸಿ ಹುಡುಕಾಟಕ್ಕೆ ನಿಯೋಜಿಸಿದ್ದಾರೆ. ಈ ವೇಳೆ ಕೊನೆಗೂ ತಾಯಿ ಹಾಗೂ ಮೂವರು ಮಕ್ಕಳ ಶವ ಕಾಲುವೆಯಲ್ಲಿ ಪತ್ತೆಯಾಗಿದೆ. ನಂತರ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಮಕ್ಕಳನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಕಾಲುವೆಗೆ ಹಾರಿದ ತಾಯಿ
ನಾವು ಕಾಲುವೆಯ ನೀರಿನ ಮಟ್ಟವನ್ನು ಕಡಿಮೆ ಮಾಡಿ ಮುಳುಗುಗಾರರನ್ನು ನಿಯೋಜಿಸಿದ್ದೆವು. ಐದು ಆರು ಗಂಟೆಗಳ ನಂತರ, ಮಹಿಳೆ ಮತ್ತು ಅವರ ಮೂವರು ಮಕ್ಕಳ ಶವಗಳು ಪತ್ತೆಯಾಗಿವೆ. ಒಬ್ಬರನೊಬ್ಬರನ್ನು ಪರಸ್ಪರ ಬಟ್ಟೆಯಿಂದ ಒಟ್ಟಿಗೆ ಕಟ್ಟಲಾಗಿತ್ತು. ರಾತ್ರಿ ತನ್ನ ಪತಿಯೊಂದಿಗೆ ನಡೆದ ಜಗಳದ ನಂತರ ಮಹಿಳೆ ಹೊರಟು ಹೋಗಿರುವಂತೆ ತೋರುತ್ತದೆ ಎಂದು ಬಂದಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವ ರಾಜ್ ಹೇಳಿದರು.
ಪೊಲೀಸರು ಮಹಿಳೆಯ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು. ಒಟ್ಟಿನಲ್ಲಿ ಗಂಡ ಹೆಂಡತಿ ಜಗಳ ಮುಗ್ಧ ಮಕ್ಕಳ ಬಲಿ ಪಡೆದಿದೆ.
ವಿಶೇಷ ಮನವಿ:
ಆತ್ಮ8ತ್ಯೆ ಮಾಡಿಕೊಳ್ಳುವ ಮುನ್ನ ಒಮ್ಮೆ ಯೋಚಿಸಿ… ಆತ್ಮ8ತ್ಯೆ ಮಾಡಿಕೊಂಡ ನಂತ್ರ ಮುಂದೇನು? ಸಮಸ್ಯೆಗೆ ಪರಿಹಾರ ಸಿಗುತ್ತಾ? ಇಲ್ಲ, ಕಷ್ಟಗಳಿದ್ದರೆ ಆತ್ಮೀಯರಿಗೆ ಹೇಳಿಕೊಳ್ಳಿ, ಏನೇ ಕಷ್ಟಗಳಿದ್ದರೂ ಆ ಸಮಯ ಕಳೆದು ಹೋಗುತ್ತದೆ ಎಂಬುದು ನೆನಪಿರಲಿ. ನೀವು ಅಥವಾ ನಿಮಗೆ ಪರಿಚಿತರಾದ ಯಾರಾದರೂ ‘ಆತ್ಮ8ತ್ಯೆ’ ಯೋಚನೆಗಳನ್ನು ಹೊಂದಿದ್ದರೆ, ನಿಮಗಾಗಿ ನೆರವು ಲಭ್ಯವಿದೆ. ಜಗತ್ತಿನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ನೀವು ಒಬ್ಬರು ಮಾತ್ರವಲ್ಲ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ಕೆಲವೊಮ್ಮೆ ಜೀವನ ಬಹಳ ಬೇಡವೆಂದೇ ಅನಿಸುತ್ತಿರಬಹುದು, ಆದರೆ ನೆರವು ಯಾವಾಗಲೂ ಲಭ್ಯವಿರುತ್ತದೆ. ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ತಮ್ಮವರ ಅಥ್ವಾ ಯಾರಾದರ ಜೊತೆ ಮಾತನಾಡುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತಾ ಸಿಗುತ್ತೆ. ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಲು ಅಥವಾ ಸಹಾಯವಾಣಿಗೆ ಕರೆ ಮಾಡಿ:
Sahai Helpline – 080 2549 7777