Headlines

ಭೂಮಿಯ ಆಹಾರದಾಚೆ: ಬಾಹ್ಯಾಕಾಶದ ಜೀರ್ಣಕ್ರಿಯೆ ರಹಸ್ಯ ಅನಾವರಣಗೊಳಿಸಿದ ಶುಭಾಂಶು ಶುಕ್ಲಾ | Shubhanshu Shukla Reveals Space Digestion Secrets And Muscle Atrophy San

ಭೂಮಿಯ ಆಹಾರದಾಚೆ: ಬಾಹ್ಯಾಕಾಶದ ಜೀರ್ಣಕ್ರಿಯೆ ರಹಸ್ಯ ಅನಾವರಣಗೊಳಿಸಿದ ಶುಭಾಂಶು ಶುಕ್ಲಾ | Shubhanshu Shukla Reveals Space Digestion Secrets And Muscle Atrophy San



ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಜೀರ್ಣಕ್ರಿಯೆ ಮತ್ತು ಸ್ನಾಯುಗಳ ಆರೋಗ್ಯದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. 

ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತೀಯ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಆಕ್ಸಿಯಮ್-4 (ಎಎಕ್ಸ್-4) ಯೋಜನೆಯ ಭಾಗವಾಗಿ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಹಲವಾರು ವೈಜ್ಞಾನಿಕ ಕಾರ್ಯಗಳು ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಶುಕ್ಲಾ ಅವರು ಇತ್ತೀಚೆಗೆ ಭಾರತೀಯ ಶಾಲಾ ವಿದ್ಯಾರ್ಥಿಗಳಿಗಾಗಿ ವಿಶೇಷ ವೀಡಿಯೋ ಸಂದೇಶ ಒಂದನ್ನು ಹಂಚಿಕೊಂಡಿದ್ದು, ಬಾಹ್ಯಾಕಾಶದ ಅಸಹಜ ಪರಿಸ್ಥಿತಿಯಲ್ಲಿ ನಮ್ಮ ಜೀರ್ಣಾಂಗ ವ್ಯೂಹ ಹೇಗೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಸರಳವಾಗಿ ವಿವರಿಸಿದ್ದರು.

ಬಾಹ್ಯಾಕಾಶದಲ್ಲಿ ಭೂಮಿಯ ಗುರುತ್ವಾಕರ್ಷಣೆಯ ಕೊರತೆ ಇದ್ದು, ಅದು ನಮ್ಮ ಹೊಟ್ಟೆ ಮತ್ತು ಕರುಳಿನ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಭೂಮಿಯಲ್ಲಿ, ಗುರುತ್ವಾಕರ್ಷಣೆ ನಾವು ಸೇವಿಸಿದ ಆಹಾರ ಪೆರಿಸ್ಟಾಲ್ಸಿಸ್ ಎಂಬ ನೈಸರ್ಗಿಕ ಪ್ರಕ್ರಿಯೆಯ ಮೂಲಕ ಜೀರ್ಣಾಂಗ ವ್ಯೂಹದ ಮೂಲಕ ಸಾಗಲು ನೆರವಾಗುತ್ತದೆ. ಆದರೆ, ಗುರುತ್ವಾಕರ್ಷಣೆಯ ಕೊರತೆ ಇರುವ ಬಾಹ್ಯಾಕಾಶದಲ್ಲಿ, ಈ ಚಲನೆ ನಿಧಾನವಾಗುತ್ತದೆ. ಇದರ ಪರಿಣಾಮವಾಗಿ, ಜೀರ್ಣಕ್ರಿಯೆ ನಿಧಾನವಾಗಿ, ದೇಹ ಸೇವಿಸಿದ ಆಹಾರವನ್ನು ಸಂಸ್ಕರಿಸುವ ವಿಧಾನವೂ ಬದಲಾಗುತ್ತದೆ.

ಪೆರಿಸ್ಟಲ್ಸಿಸ್ ಎನ್ನುವುದು ಜೀರ್ಣಾಂಗವ್ಯೂಹದ ಸ್ನಾಯುಗಳ ಒಂದು ಅಲೆಯಂತಹ ಚಲನೆಯಾಗಿದ್ದು, ಆಹಾರವನ್ನು ಹೊಟ್ಟೆ ಮತ್ತು ಕರುಳಿನ ಮೂಲಕ ತಳ್ಳಿ, ಆಹಾರ ದೇಹದೊಳಗೆ ಸಮರ್ಪಕವಾಗಿ ಜೀರ್ಣವಾಗುವಂತೆ ಮಾಡುತ್ತದೆ.

ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯ ಕೊರತೆಯ ಕಾರಣದಿಂದ ದೇಹದ ದ್ರವಗಳು ಎದೆ ಮತ್ತು ತಲೆಯೆಡೆಗೆ ಮೇಲ್ಮುಖವಾಗಿ ಚಲಿಸುತ್ತವೆ. ಇದು ಹೊಟ್ಟೆ ಹೇಗೆ ಕಾರ್ಯಾಚರಿಸುತ್ತದೆ ಎನ್ನುವುದರ ಮೇಲೆ ಪರಿಣಾಮ ಬೀರಿ, ಕೆಲವೊಮ್ಮೆ ಅಸ್ವಸ್ಥತೆ ಉಂಟುಮಾಡಿ, ದೇಹ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ವಿಧಾನವನ್ನು ಬದಲಿಸುತ್ತದೆ.

ಬಾಹ್ಯಾಕಾಶದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆ ಹೊಟ್ಟೆ ಮತ್ತು ಕರುಳಿನಲ್ಲಿರುವ ಗಟ್ ಮೈಕ್ರೋಬಿಯಮ್ ಎನ್ನುವ ಒಳ್ಳೆಯ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಬದಲಿಸಬಲ್ಲದು. ಇದು ಆಹಾರ ವಿಭಜನೆಗೊಂಡು, ದೇಹ ಪೋಷಕಾಂಶಗಳನ್ನು ಹೀರಿಕೊಳ್ಳುವುದರ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ, ಇದು ಅವಶ್ಯಕ ಜೀವಸತ್ವಗಳು ಮತ್ತು ಖನಿಜಗಳ ಕೊರತೆ ಉಂಟಾಗುವಂತೆ ಮಾಡಬಹುದು.

ಗಗನಯಾತ್ರಿಗಳು ಹೇಗೆ ಬಾಹ್ಯಾಕಾಶದಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳುತ್ತಾರೆ?

ಬಾಹ್ಯಾಕಾಶದಲ್ಲಿ ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲನ ಬದಲಾಗುವ ಸಾಧ್ಯತೆಗಳಿವೆ. ಇದಕ್ಕಾಗಿ ಗಗನಯಾತ್ರಿಗಳು ಆರೋಗ್ಯವಂತರಾಗಿರಲು ವಿಶೇಷ ಹೆಜ್ಜೆಗಳನ್ನು ಅನುಸರಿಸುತ್ತಾರೆ:

ಪ್ರೊಬಯೋಟಿಕ್ಸ್ ಮತ್ತು ಪ್ರಿಬಯೋಟಿಕ್ಸ್: ಗಗನಯಾತ್ರಿಗಳು ಉತ್ತಮ ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಪೂರಕ ಆಹಾರಗಳು (ಪ್ರೊಬಯೋಟಿಕ್ಸ್) ಮತ್ತು ಉತ್ತಮ ಬ್ಯಾಕ್ಟೀರಿಯಾಗಳು ಬೆಳೆಯಲು ನೆರವಾಗುವ ಆಹಾರಗಳನ್ನು (ಪ್ರಿಬಯೋಟಿಕ್ಸ್) ಸೇವಿಸುತ್ತಾರೆ.

ವಿಶೇಷ ಆಹಾರ: ಗಗನಯಾತ್ರಿಗಳ ಆಹಾರ ನಾರು ಪದಾರ್ಥ ಮತ್ತು ಹುದುಗು ಬರಿಸಿದ ಉತ್ಪನ್ನಗಳನ್ನು ಒಳಗೊಂಡಿದ್ದು, ಇದು ಹೊಟ್ಟೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ದೇಹಕ್ಕೆ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ.

ಹೊಟ್ಟೆಯ ಪರೀಕ್ಷೆಗಳು: ವಿಜ್ಞಾನಿಗಳು ಕಾಲಕಾಲಕ್ಕೆ ಗಗನಯಾತ್ರಿಗಳ ಹೊಟ್ಟೆಯ ಬ್ಯಾಕ್ಟೀರಿಯಾಗಳ ಪರೀಕ್ಷೆ ನಡೆಸಿ, ಅವಶ್ಯಕತೆ ಎದುರಾದರೆ ಬದಲಾವಣೆಗಳನ್ನು ಕೈಗೊಳ್ಳುತ್ತಾರೆ.

ವ್ಯಾಯಾಮ: ದೈನಂದಿನ ವ್ಯಾಯಾಮಗಳು ಗಗನಯಾತ್ರಿಗಳ ಸ್ನಾಯುಗಳನ್ನು ಬಲವಾಗಿಡುವುದು ಮಾತ್ರವಲ್ಲದೆ, ಅವರ ಜೀರ್ಣಕ್ರಿಯೆಗೂ ನೆರವಾಗುತ್ತದೆ.

ಹೆಚ್ಚುವರಿ ಪೋಷಕಾಂಶಗಳು: ಬಾಹ್ಯಾಕಾಶದಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಷ್ಟಕರವಾಗುವುದರಿಂದ, ಗಗನಯಾತ್ರಿಗಳು ಆರೋಗ್ಯಕ್ಕಾಗಿ ಹೆಚ್ಚುವರಿ ಪೋಷಕಾಂಶಗಳು ಮತ್ತು ಖನಿಜಗಳನ್ನು ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳುತ್ತಾರೆ.

ಉಡಾವಣಾ ಪೂರ್ವ ಸಿದ್ಧತೆ:  ಗಗನಯಾತ್ರಿಗಳು ಭವಿಷ್ಯದ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ, ಉಡಾವಣೆಗೂ ಮುನ್ನವೇ ತಮ್ಮ ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಸಿದ್ಧತೆ ನಡೆಸುತ್ತಾರೆ.

ಇಂತಹ ಕ್ರಮಗಳು ಗಗನಯಾತ್ರಿಗಳಿಗೆ ಮಂಗಳ ಗ್ರಹ ಪ್ರಯಾಣದಂತಹ ಸುದೀರ್ಘ ಬಾಹ್ಯಾಕಾಶ ಯೋಜನೆಗಳಲ್ಲೂ ಗಟ್ಟಿಯಾಗಿರಲು ನೆರವಾಗುತ್ತವೆ!

ಸ್ನಾಯುಗಳ ಸವೆತ (ಮಸಲ್ ಅಟ್ರಫಿ)

ತನ್ನ ಶೈಕ್ಷಣಿಕ ಪ್ರಯತ್ನಗಳ ಜೊತೆಗೆ, ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಜಪಾನ್ ನಿರ್ಮಿಸಿರುವ ‘ಕಿಬೋ’ ಪ್ರಯೋಗಾಲಯದಲ್ಲಿ ಸ್ನಾಯುಗಳ ಆರೋಗ್ಯಕ್ಕೆ ಸಂಬಂಧಿಸಿದ ಅತ್ಯಂತ ಮುಖ್ಯವಾದ ಪ್ರಯೋಗವನ್ನು ನಡೆಸಲಿದ್ದಾರೆ. ಜಪಾನಿ ಭಾಷೆಯಲ್ಲಿ ಕಿಬೋ ಎಂದರೆ ‘ಭರವಸೆ’ ಎಂಬ ಅರ್ಥವಿದೆ. ಈ ಪ್ರಯೋಗಾಲಯವನ್ನು ಜೀವ ವಿಜ್ಞಾನ, ವೈದ್ಯಕೀಯ ಮತ್ತು ಬಾಹ್ಯಾಕಾಶ ಪ್ರಯೋಗಗಳಿಗೆ ಬಳಸಲಾಗುತ್ತದೆ.

ಶುಭಾಂಶು ಶುಕ್ಲಾ ಅವರು ಸ್ನಾಯು ಕಾಂಡ ಕೋಶಗಳ (ಮಸಲ್ ಸ್ಟೆಮ್ ಸೆಲ್ಸ್) ಕುರಿತು ಸಂಶೋಧನೆ ನಡೆಸಲಿದ್ದು, ದೇಹದಲ್ಲಿರುವ ಈ ಕೋಶಗಳು ಸ್ನಾಯುಗಳನ್ನು ದುರಸ್ತಿಗೊಳಿಸಲು ಮತ್ತು ಮರು ನಿರ್ಮಿಸಲು ನೆರವಾಗುವ ಮಹತ್ವದ ಕೋಶಗಳಾಗಿವೆ. ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆಯ ಕೊರತೆ ಇರುವುದರಿಂದ, ಗಗನಯಾತ್ರಿಗಳ ಸ್ನಾಯುಗಳು ಭೂಮಿಯಲ್ಲಿ ಕಾರ್ಯಾಚರಿಸಿದಂತೆ ಕಾರ್ಯಾಚರಿಸುವುದಿಲ್ಲ. ಇಂತಹ ಚಟುವಟಿಕೆಗಳ ಕೊರತೆ ಸ್ನಾಯುಗಳು ದುರ್ಬಲಗೊಳ್ಳುವಂತೆ, ಕುಗ್ಗುವಂತೆ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಮಸಲ್ ಅಟ್ರೊಫಿ ಎಂದು ಕರೆಯಲಾಗುತ್ತದೆ.

ಶುಭಾಂಶು ಶುಕ್ಲಾ ಅಧ್ಯಯನ ಈ ಸ್ಟೆಮ್ ಕೋಶಗಳು ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಹೇಗೆ ಕಾರ್ಯಾಚರಿಸುತ್ತವೆ, ಮತ್ತು ದೀರ್ಘಾವಧಿಯ ಬಾಹ್ಯಾಕಾಶ ಯಾತ್ರೆಯ ಸಂದರ್ಭದಲ್ಲಿ ಸ್ನಾಯುಗಳ ಶಕ್ತಿ ಕಾಪಾಡಿಕೊಳ್ಳಲು ಯಾವುದಾದರೂ ಪೂರಕ ಔಷಧ ಅಥವಾ ಚಿಕಿತ್ಸೆಗಳು ನೆರವಾಗಬಹುದೇ ಎಂದು ಅನ್ವೇಷಿಸಲಿದೆ. ಇದರ ಫಲಿತಾಂಶಗಳು ಭೂಮಿಯಲ್ಲೂ ಪ್ರಯೋಜನಕಾರಿಯಾಗಲಿದ್ದು, ವಿಶೇಷವಾಗಿ ವಯಸ್ಸಿನ ಕಾರಣದಿಂದ ಅಥವಾ ದೀರ್ಘಕಾಲದ ಚಲನೆಯ ಕೊರತೆಯಿಂದ ಸ್ನಾಯು ದುರ್ಬಲತೆಯಿಂದ ಬಳಲುವವರಿಗೆ ಸಹಾಯಕವಾಗಲಿದೆ.

ಲೈಫ್ ಸೈನ್ಸಸ್ ಗ್ಲೊವ್ ಬಾಕ್ಸ್ ಎನ್ನುವುದು ಬಾಹ್ಯಾಕಾಶ ನಿಲ್ದಾಣದಲ್ಲಿ ಒಂದು ವಿಶೇಷವಾದ, ಮುಚ್ಚಿರುವ ಕಾರ್ಯ ಸ್ಥಳವಾಗಿದ್ದು, ನಿಲ್ದಾಣವನ್ನು ಸ್ವಚ್ಛವಾಗಿಯೂ, ರೋಗಾಣುಗಳಿಂದ ಮುಕ್ತವಾಗಿಯೂ ಇಡುತ್ತದೆ. ಇದು ಗಗನಯಾತ್ರಿಗಳಿಗೆ ಬಾಹ್ಯಾಕಾಶದಲ್ಲಿ ಜೀವಕೋಶಗಳು ಅಥವಾ ಅಂಗಾಂಶಗಳಂತಹ ಜೈವಿಕ ಮಾದರಿಗಳನ್ನು ಅಧ್ಯಯನ ಮಾಡಲು ಮತ್ತು ಸುರಕ್ಷಿತವಾಗಿ ನಿರ್ವಹಿಸಲು ಸೂಕ್ತವಾಗಿದೆ. ಇದೊಂದು ಮುಚ್ಚಿಟ್ಟ, ನಿಯಂತ್ರಿತ ವಾತಾವರಣವಾಗಿದ್ದು, ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲೂ ವಿಜ್ಞಾನಿಗಳಿಗೆ ಮಾಲಿನ್ಯದ ಭಯವಿಲ್ಲದೆ, ಜೀವಕೋಶಗಳ ಹಂತದ ವಿಸ್ತೃತ ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ಅನುಕೂಲ ಕಲ್ಪಿಸುತ್ತದೆ.

ಗ್ಲೋವ್ ಬಾಕ್ಸ್ ಎಂದರೇನು?

ಗ್ಲೋವ್ ಬಾಕ್ಸ್ ಎನ್ನುವುದು ಒಂದು ಮುಚ್ಚಿಟ್ಟ ಸಂಗ್ರಾಹಕವಾಗಿದ್ದು, ಅದು ಹೊರಭಾಗದಲ್ಲಿ ಅಂತರ್ಗತವಾದ ಗವಸುಗಳನ್ನು ಹೊಂದಿದೆ. ಗಗನಯಾತ್ರಿಗಳು ತಮ್ಮ ಕೈಗಳನ್ನು ಈ ಗವಸುಗಳೊಳಗೆ ತೂರಿಸಿ, ಬಳಿಕ ಸಂಗ್ರಾಹಕದ ಒಳಗಿರುವ ಮಾದರಿಗಳನ್ನು ನೇರವಾಗಿ ಬರಿಗೈಯಿಂದ ಮುಟ್ಟದೆ ನಿರ್ವಹಿಸುತ್ತಾರೆ. ಇದರಿಂದ ಗಗನಯಾತ್ರಿಗಳು ಮತ್ತು ಮಾದರಿಗಳು ಸುರಕ್ಷಿತವಾಗಿರುತ್ತವೆ.

ಶುಭಾಂಶು ಶುಕ್ಲಾ ಅವರ ಸಂಶೋಧನೆಗಳು ಐಎಸ್ಎಸ್‌ನಲ್ಲಿ ಇತರ ಗಗನಯಾತ್ರಿಗಳು ನಡೆಸುವ ಪ್ರಯೋಗಗಳ ಜೊತೆ ಜೊತೆಗೇ ಸಾಗಲಿವೆ. ಇದರಲ್ಲಿ ಮೆದುಳು – ಕಂಪ್ಯೂಟರ್ ಸಂಪರ್ಕ, ಮತ್ತು ಬಾಹ್ಯಾಕಾಶದಲ್ಲಿ ಮಾನಸಿಕ ಆರೋಗ್ಯಗಳ ಕುರಿತ ಅಧ್ಯಯನವೂ ಸೇರಿದ್ದು, ಇದಕ್ಕೆ ಸರ್ಕಾರಗಳು ಮತ್ತು ಖಾಸಗಿ ಗುಂಪುಗಳು ಬೆಂಬಲ ನೀಡುತ್ತವೆ.

ತನ್ನ ವೈಜ್ಞಾನಿಕ ಕಾರ್ಯಗಳ ಜೊತೆಗೆ, ಶುಕ್ಲಾ ಯುವ ಭಾರತೀಯ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ಮತ್ತು ಜೀವಶಾಸ್ತ್ರದ ಕುರಿತು ಆಸಕ್ತಿ ಮೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನಗಳು ನಮಗೆ ಬಾಹ್ಯಾಕಾಶ ಪ್ರಯಾಣದ ಕುರಿತು ಮುಂದಿನ ತಲೆಮಾರುಗಳಿಗೆ ಆಸಕ್ತಿ, ಸ್ಫೂರ್ತಿ ಮೂಡಿಸಲು ಪ್ರಯತ್ನ ನಡೆಸಲಿವೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

 



Source link

Leave a Reply

Your email address will not be published. Required fields are marked *