ಬೌದ್ಧ ಧರ್ಮಗುರು ದಲೈಲಾಮಾರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಸ್ವತಃ ದಲೈಲಾಮಾ ಅವರಿಗೆ ಹಾಗೂ ಅವರು ಸ್ಥಾಪಿಸಿದ ಸಂಸ್ಥೆಗೆ ಇದೆಯೇ ಹೊರತು ಬೇರಾರಿಗೂ ಇಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ನವದೆಹಲಿ: ಬೌದ್ಧ ಧರ್ಮಗುರು ದಲೈಲಾಮಾರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅಧಿಕಾರ ಸ್ವತಃ ದಲೈಲಾಮಾ ಅವರಿಗೆ ಹಾಗೂ ಅವರು ಸ್ಥಾಪಿಸಿದ ಸಂಸ್ಥೆಗೆ ಇದೆಯೇ ಹೊರತು ಬೇರಾರಿಗೂ ಇಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಈ ಮೂಲಕ ದಲೈ ಲಾಮಾ ಉತ್ತರಾಧಿಕಾರಿ ನೇಮಕದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಚೀನಾಕ್ಕೆ ಚಾಟಿ ಬೀಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದಲೈಲಾಮಾರ ಉತ್ತರಾಧಿಕಾರಿ ನೇಮಕ ಅವರ ಇಚ್ಛೆಯಂತೆ, ಅವರೇ ಸ್ಥಾಪಿಸಿದ ಸಂಸ್ಥೆಯಿಂದ ನಡೆಯಬೇಕು ಎಂಬುದು ಅವರ ಅನುಯಾಯಿಗಳ ಅಭಿಮತ. ಅವರು ಮತ್ತು ಜಾರಿಯಲ್ಲಿರುವ ಸಂಪ್ರದಾಯಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಅದನ್ನುನಿರ್ಧರಿಸುವ ಹಕ್ಕಿಲ್ಲ’ ಎಂದಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ನೇಮಿಸುವ ಹೊಣೆಯನ್ನು 2015ರಲ್ಲಿ ತಾವೇ ರಚಿಸಿದ್ದ ಗಾಡೆನ್ ಪೋಡ್ರಾಂಗ್ ಟ್ರಸ್ಟ್ ನೀಡುತ್ತಿರುವುದಾಗಿ ದಲೈಲಾಮಾ ಘೋಷಿಸಿದ್ದರು. ಇದನ್ನು ವಿರೋಧಿಸಿದ ಚೀನಾ, ಸರ್ಕಾರವೇ ನೇಮಿಸುವುದಾಗಿ ಕಿರಿಕ್ ಮಾಡಿತ್ತು. ಅದರ ಬೆನ್ನಲ್ಲೆ, ಸ್ವತಃ ಬೌದ್ಧರಾಗಿರುವ ಕಿರಣ್ ರಿಜಿಜು ಈ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನಿಂದ ರಷ್ಯಾದ ನೌಕಾಪಡೆ ಉಪ ಮುಖ್ಯಸ್ಥ ಹತ್ಯೆ
ಮಾಸ್ಕೋ: ಕಳೆದ 3 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಕುರ್ಸ್ಕ್‌ನಲ್ಲಿ ಉಕ್ರೇನ್ ಪಡೆಗಳ ದಾಳಿಗೆ ರಷ್ಯಾ ನೌಕಾ ಪಡೆಯ ಉಪ ಮುಖ್ಯಸ್ಥ ಮೇ। ಜ। ಮಿಖೈಲ್ ಗುಡ್ಕೋವ್ ಹತರಾಗಿದ್ದಾರೆ.ಗುಡ್ಕೋವ್ ಅವರು ಕುರ್ಸ್ಕ್ ಪ್ರಾಂತ್ಯದಲ್ಲಿ ಉಕ್ರೇನ್ ವಿರುದ್ಧ ಹೋರಾಡುತ್ತಿದ್ದರು. ಇವರು ಗುರುವಾರ ಉಕ್ರೇನ್ ದಾಳಿಗೆ ಹತರಾಗಿದ್ದಾರೆ ಎಂದು ರಷ್ಯಾದ ಫಾರ್ ಈಸ್ಟರ್ನ್ ಪ್ರಾಂತ್ಯದ ಮುಖ್ಯಸ್ಥ ಒಲೆಗ್ ಕೊಝೆಮ್ಯಾಕೋ ತಿಳಿಸಿದ್ದಾರೆ. ಇವರೊಂದಿಗೆ ಕುರ್ಸ್ಕ್‌ನ ಕೊರೆನೆವೋ ಎಂಬಲ್ಲಿ 10 ಸೈನಿಕರು ಉಕ್ರೇನ್ ವಿರುದ್ಧದ ಕಾಳಗದಲ್ಲಿ ಹತರಾಗಿದ್ದಾರೆ.
ಕೊರಿಯರ್ ಕೊಡುವ ನೆಪದಲ್ಲಿ ಬಂದು ಟೆಕ್ಕಿ ಮೇಲೆ ರೇಪ್
ಪುಣೆ: ಮಹಿಳಾ ಟೆಕ್ಕಿಯೊಬ್ಬರು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಕೋರಿಯರ್ ಕೊಡುವ ನೆಪದಲ್ಲಿ ಬಂದಾತ, ಆಕೆಯ ಮೇಲೆ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ಇಲ್ಲಿನ ಕೊಂಢವಾದಲ್ಲಿ ನಡೆದಿದೆ.ಕುಕೃತ್ಯದ ಬಳಿಕ ಸಂತ್ರಸ್ತೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು, ‘ಈ ಘಟನೆಯನ್ನು ಯಾರಿಗೂ ಹೇಳಬೇಡ. ಮತ್ತೆ ಬರುವೆ’ ಎಂದು ಮೊಬೈಲ್‌ನಲ್ಲಿ ಸಂದೇಶವನ್ನೂ ಬಿಟ್ಟು ಹೋಗಿದ್ದ. ಆದರೆ ಘಟನೆ ನಡೆದ ಕೆಲವೇ ಗಂಟೆಯಲ್ಲಿ ಕಿರಾತಕನನ್ನು ಬಂಧಿಸಲಾಗಿದೆ.
ನಡೆದದ್ದೇನು?:
ಬುಧವಾರ ಸಂಜೆ 7.30ರ ಸುಮಾರಿಗೆ, ಖಾಸಗಿ ಕಂಪನಿಯ ಟೆಕಿಯೊಬ್ಬರ ಮನೆಗೆ ಕೊರಿಯರ್ ಡೆಲಿವರಿ ಏಜೆಂಟ್‌ನ ಸೋಗಿನಲ್ಲಿ ವ್ಯಕ್ತಿಯೊಬ್ಬ ಬಂದಿದ್ದ ಹಾಗೂ ಬ್ಯಾಂಕ್ ಸಂಬಂಧಿತ ಕಡತಗಳನ್ನು ಕೊಡುವ ನೆಪದಲ್ಲಿ ಪೆನ್ ಕೊಡುವಂತೆ ಕೇಳಿದ್ದ. ಅದನ್ನು ತರಲು ಮಹಿಳೆ ತಿರುಗುತ್ತಿದ್ದಂತೆ ಅನಾಮತ್ತಾಗಿ ಮನೆಯನ್ನು ಪ್ರವೇಶಿಸಿದ ಆತ, ಬಾಗಿಲಿಗೆ ಚಿಲಕ ಹಾಕಿ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಘಟನೆ ವೇಳೆ ಪ್ರಜ್ಞಾಹೀನಳಾಗಿದ್ದ ಮಹಿಳೆಗೆ ರಾತ್ರಿ 8.30ರ ಸುಮಾರಿಗೆ ಎಚ್ಚರವಾಗಿದೆ. ಬಳಿಕ ಅವರು ತಮ್ಮ ಮೊಬೈಲ್ ನೋಡಿದಾಗ, ಅದರಲ್ಲಿ ಸಂತ್ರಸ್ತೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಆರೋಪಿ, ‘ಮತ್ತೆ ಬರುತ್ತೇನೆ’ ಎಂಬ ಸಂದೇಶವನ್ನೂ ಬಿಟ್ಟು ಹೋಗಿದ್ದ. ಕೂಡಲೇ ಸಂಬಂಧಿಕರಿಗೆ ಕರೆ ಮಾಡಿದ ಮಹಿಳೆ, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ರೇಪ್ ಮಾಡುವ ಮುನ್ನ ಆರೋಪಿ ಸಂತ್ರಸ್ತೆಯ ಮುಖಕ್ಕೇ ಏನನ್ನೋ ಸ್ಪ್ರೇ ಮಾಡಿ ಆಕೆಯ ಪ್ರಜ್ಞೆ ತಪ್ಪಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದರ ತನಿಖೆಯನ್ನು 5 ಕ್ರೈಂ ಬ್ರಾಂಚ್ ಮತ್ತು 5 ಝೋನಲ್ ಸೇರಿದಂತೆ 10 ತಂಡಗಳು ನಡೆಸುತ್ತಿರುವುದಾಗಿ ಉಪ ಪೊಲೀಸ್ ಆಯುಕ್ತ ರಾಜ್‌ಕುಮಾರ್ ಶಿಂಧೆ ಹೇಳಿದ್ದಾರೆ.
ಆಹಾರಕ್ಕಾಗಿ ಕಾಯುತ್ತಿದ್ದವರ ಮೇಲೆ ಇಸ್ರೇಲ್ ದಾಳಿ : 82 ಸಾವು
ಟೆಲ್ ಅವಿವ್: ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್ ಹಮಾಸ್ ಯುದ್ಧಕ್ಕೆ ಕದನವಿರಾಮ ಬೀಳುವ ಹೊಸ್ತಿಲಿನಲ್ಲಿಯೇ ಇಸ್ರೇಲಿ ಪಡೆಗಳು ಗಾಜಾ ಪಟ್ಟಿಯಲ್ಲಿ ಭೀಕರ ದಾಳಿ ನಡೆಸಿದೆ. ಇದರಿಂದಾಗಿ 82 ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ಹೇಳಿದೆ.ಅಮೆರಿಕ ಬೆಂಬಲಿತ ಗಾಜಾ ಪರಿಹಾರ ಫೌಂಡೇಷನ್‌ನಿಂದ ಬರುವ ಆಹಾರ ಪದಾರ್ಥಗಳಿಗಾಗಿ ಗಾಜಾದಲ್ಲಿ ಜನರು ಕಾಯುತ್ತಿದ್ದರು. ಈ ವೇಳೆ ಇಸ್ರೇಲ್ ವಾಯುದಾಳಿ ಮತ್ತು ಗುಂಡಿನ ದಾಳಿ ನಡೆಸಿದೆ. ಇದರಿಂದಾಗಿ 82 ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ಹೇಳಿದೆ.
ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಮಾಸ್‌ಗೆ ಕದನವಿರಾಮಕ್ಕೆ ಒಪ್ಪುವಂತೆ ಬೆದರಿಕೆ ಹಾಕಿದ್ದರು.