ಮಧ್ಯಪ್ರದೇಶದಲ್ಲಿ ಆತಂಕಕಾರಿ ಘಟನೆ ನಡೆದಿದೆ. ಬಾಲ್ಯ ಸ್ನೇಹಿತೆ ಮೇಲೆ ಆಸಿಡ್ ದಾಳಿ ನಡೆಸಿದ ಯುವತಿ ಈಗ ಜೈಲು ಸೇರಿದ್ದಾಳೆ. ಅಷ್ಟಕ್ಕೂ ಇಬ್ಬರ ಮಧ್ಯೆ ದ್ವೇಷ ಬೆಳೆಯಲು ಕಾರಣ ಏನು ಗೊತ್ತಾ?
ಅವರಿಬ್ಬರು ಬಾಲ್ಯ ಸ್ನೇಹಿತೆ (Friend)ಯರು. 2014ರಿಂದ ಒಟ್ಟಿಗೆ ಆಡಿ ಬೆಳೆದವರು. ಈಗ ಇಬ್ಬರಿಗೂ 20 -21 ವರ್ಷ ವಯಸ್ಸು. ಒಬ್ಬಳು ಶ್ರೀಮಂತೆ, ಓದಿನಲ್ಲಿ ಬುದ್ಧಿವಂತೆ. ಸೌಂದರ್ಯವತಿ. ಇನ್ನೊಬ್ಬಳು ಇದಕ್ಕೆ ತದ್ವಿರುದ್ಧ. ಮನೆಯಲ್ಲಿ ಬಡತನ, ಓದು ಅಷ್ಟಕ್ಕಷ್ಟೆ. ಸೌಂದರ್ಯದಲ್ಲೂ ಮುಂದಿಲ್ಲ. ಸ್ನೇಹಕ್ಕೆ ಇದ್ಯಾವುದೂ ಅಡ್ಡಿ ಬರೋದಿಲ್ಲ. ಸ್ನೇಹಕ್ಕೆ ಜಾತಿ, ಮತ, ಸೌಂದರ್ಯದ ಮಿತಿ ಇಲ್ಲ ಅಂತ ನಾವು ಭಾವಿಸ್ತೇವೆ. ಎಲ್ಲ ಸ್ನೇಹ, ಎಲ್ಲ ಸ್ನೇಹಿತರು ಹಾಗಲ್ಲ. ಆಪ್ತ ಸ್ನೇಹಿತರು ಅಂತ ಬಾಯಲ್ಲಿ ಬಂದ್ರೂ ಮನಸ್ಸಿನಲ್ಲೊಂದು ಅಸೂಯೆ ಇದ್ದೇ ಇರುತ್ತೆ. ಇವರಿಬ್ಬರ ಮಧ್ಯೆಯೂ ಈ ಅಸೂಯೆ ಮನೆ ಮಾಡಿತ್ತು. ಶ್ರದ್ಧಾ ದಾಸ್ ನೋಡಿ ಇಶಿತಾ ಅದೆಷ್ಟೋ ಬಾರಿ ಕೈ ಕೈ ಹಿಸುಕಿಕೊಂಡಿದ್ದಳು. ಆದ್ರೆ ಇಶಿತಾ ಅಷ್ಟೊಂದು ಕ್ರೂರಿ ಎಂಬ ಕಲ್ಪನೆಯೂ ಶ್ರದ್ಧಾ ಹಾಗೂ ಆಕೆ ಮನೆಯವರಿಗೆ ಇರ್ಲಿಲ್ಲ.
ಸ್ನೇಹಿತೆ ವಿಚಿತ್ರವಾಗಿ ವರ್ತಿಸಲು ಶುರು ಮಾಡ್ತಿದ್ದಂತೆ ಅವಳಿಂದ ದೂರವಾಗಿದ್ದಳು ಶ್ರದ್ಧಾ ದಾಸ್. ಇಬ್ಬರ ಮಧ್ಯೆ ಮಾತುಕತೆ ಇರ್ಲಿಲ್ಲ. ಶ್ರದ್ಧಾ, ಇಶಿತಾ ಫೋನ್ ನಂಬರ್ ಬ್ಲಾಕ್ ಕೂಡ ಮಾಡಿದ್ದಳು. ಆದ್ರೆ ಇಶಿತಾ ದ್ವೇಷ ಇದ್ರಿಂದ ದುಪ್ಪಟ್ಟಾಗಿತ್ತು. ಮನಸ್ಸಿನಲ್ಲಿಯೇ ಕುದಿಯುತ್ತಿದ್ದ ಇಶಿತಾ, ಶ್ರದ್ಧಾ ಮೇಲೆ ಸೇಡು ತೀರಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸ್ತಿದ್ದಳು. ಇಶಿತಾ ದ್ವೇಷಕ್ಕೆ ಶ್ರದ್ಧಾ ಶ್ರೀಮಂತಿಕೆ, ಸೌಂದರ್ಯ ಮಾತ್ರ ಕಾರಣವಾಗಿರಲಿಲ್ಲ. ಇಶಿತಾ ಹಾಗೂ ಆಕೆ ಬಾಯ್ ಫ್ರೆಂಡ್ ಖಾಸಗಿ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ಶ್ರದ್ಧಾ ಕಾರಣ, ಈ ಘಟನೆಯಲ್ಲಿ ಶ್ರದ್ಧಾ ಕೈವಾಡವಿದೆ ಅಂತ ಇಶಿತಾ ನಂಬಿದ್ದಳು. ಅದೇ ಆಕೆ ಇಷ್ಟೊಂದು ಕಟು ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.
ಆ ರಾತ್ರಿ ಆಗಿದ್ದೇನು? : ಇಶಿತಾ ಹಾಗೂ ಶ್ರದ್ಧಾ ಅಕ್ಕಪಕ್ಕದ ಮನೆಯವರು. ಘಟನೆ ನಡೆದ ದಿನ ಅಂದ್ರೆ ಭಾನುವಾರ ರಾತ್ರಿ ಇಶಿತಾ, ಸರ್ಪ್ರೈಸ್ ನೀಡುವ ನೆಪದಲ್ಲಿ ಶ್ರದ್ಧಾಳನ್ನು ಮನೆಯಿಂದ ಹೊರಗೆ ಕರೆದಿದ್ದಾಳೆ. ಆರಂಭದಲ್ಲಿ ಶ್ರದ್ಧಾ ಇದನ್ನು ವಿರೋಧಿಸಿದ್ದಾಳೆ. ಆದ್ರೆ ಇಶಿತಾ ಬಿಡ್ಲಿಲ್ಲ. ಒತ್ತಾಯಕ್ಕೆ ಮಣಿದು, ಇಶಿತಾ ಬಳಿ ಹೋಗಿದ್ದೇ ತಪ್ಪಾಗಿದೆ. ಇಶಿತಾ ಹಾಗೂ ಶ್ರದ್ಧಾ ಮಧ್ಯೆ ಮಾತುಕತೆ ನಡೆದಿದೆ. ಇನ್ನೇನು ಮಾತು ಮುಗಿತು ಎನ್ನುವ ಟೈಂನಲ್ಲಿ ಇಶಿತಾ, ಶ್ರದ್ಧಾ ಮುಖಕ್ಕೆ ಏನೋ ಎರಚಿದ್ದಾಳೆ. ಮುಖ ಉರಿಯಲು ಶುರುವಾಗಿದೆ. ಭಯಗೊಂಡ ಶ್ರದ್ಧಾ ಅಮ್ಮನಿಗೆ ಫೋನ್ ಮಾಡಿದ್ದಾಳೆ. ಅಲ್ಲಿಗೆ ಬಂದ ಅಮ್ಮನಿಗೆ ಶ್ರದ್ಧಾ ಮುಖ ಸುಡುತ್ತಿರೋದು ಕಾಣಿಸಿದೆ. ತಕ್ಷಣ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರದ್ಧಾ ಮುಖ ಹಾಗೂ ದೇಹ ಶೇಕಡಾ 50ರಷ್ಟು ಸುಟ್ಟಿದೆ ಅಂತ ವೈದ್ಯರು ಹೇಳಿದ್ದಾರೆ. ತುರ್ತು ನಿಗಾ ಘಟಕದಲ್ಲಿ ಶ್ರದ್ಧಾಗೆ ಚಿಕಿತ್ಸೆ ಮುಂದುವರೆದಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನ್ನ ಬಾಲ್ಯ ಸ್ನೇಹಿತೆ ಮೇಲೆ ಆಸಿಡ್ (Acid) ಹಾಕಿದ ಇಶಿತಾಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸಹಾಯ ಮಾಡಿದ್ದ ಅಂಶ್ ಹುಡುಕಾಟ ಮುಂದುವರೆದಿದೆ. ಇಶಿತಾ, ಆಸಿಡ್ ದಾಳಿಗೆ ಅನೇಕ ದಿನಗಳಿಂದ ಪ್ರಯತ್ನ ನಡೆಸ್ತಾನೆ ಇದ್ಲು. ಆದ್ರೆ ಅವಳಿಗೆ ಆಸಿಡ್ ಸಿಕ್ಕಿರಲಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಆಸಿಡ್ ಖರೀದಿಗೆ ಮುಂದಾಗಿದ್ದಳು. ಅನುಮಾನಗೊಂಡ ಅಂಗಡಿಯವರು ಆಸಿಡ್ ನೀಡಲು ನಿರಾಕರಿಸಿದ್ದರು. ಆದ್ರೆ ಅಂಶ್ ಪರಿಚಯಿಸಿ, ಕಾಲೇಜು ಅಧ್ಯಾಪಕ ಅಂತ ಸುಳ್ಳು ಹೇಳಿ ಆಸಿಡ್ ಖರೀದಿ ಮಾಡಿದ್ದಳು ಇಶಿತಾ. ಈ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.