ರ್ಯಾಶ್ ಡ್ರೈವಿಂಗ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ವಿಮಾ ಕಂಪನಿಗಳು ಯಾವುದೇ ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ನವದೆಹಲಿ (ಜು.03) ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಮೋಟಾರು ವಾಹನ ಕಾಯ್ದೆಯಡಿ ವಿಮೆ ಮೂಲಕ ಪರಿಹಾರ ಮೊತ್ತ ಸಿಗಲಿದೆ. ಆದರೆ ಇದೀಗ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ರ‍್ಯಾಶ್ ಡ್ರೈವಿಂಗ್ ಅಥವಾ ತನ್ನದೇ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತದಲ್ಲಿ ಯಾರಾದರು ಮೃತಪಟ್ಟರೆ, ಅಂತವರ ಕುಟುಂಬಕ್ಕೆ ವಿಮಾ ಕಂಪನಿಗಳು ಪರಿಹಾರ ಮೊತ್ತ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಆದೇಶ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ವಾಹನ ಚಲಾಯಿಸುವಾಗ ಒಂದು ನಿಯಮ ಉಲ್ಲಂಘಿಸಿದರೂ ಇಡೀ ಕುಟುಂಬ ಪರಿತಪಿಸಬೇಕಾಗುತ್ತದೆ.
ಸುಪ್ರೀಂ ಕೋರ್ಟ್‌ನಲ್ಲಿ ದಾಖಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಪಿಎಸ್ ನರಸಿಂಹ ಹಾಗೂ ಆರ್ ಮಹಾದೇವನ್ ಅವರಿದ್ದ ಪೀಠ ಈ ಕುರಿತು ಆದೇಶ ನೀಡಿದೆ. ಅತೀ ವೇಗದ ಚಾಲನೆಯಿಂದ ವ್ಯಕ್ತಿಯೊಬ್ಬರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ವಿಮಾ ಪರಿಹಾರ ಮೊತ್ತಕ್ಕಾಗಿ ಮೃತ ವ್ಯಕ್ತಿಯ ಪತ್ನಿ, ಪುತ್ರ ಹಾಗೂ ಪೋಷಕರು 80 ಲಕ್ಷ ರೂಪಾಯಿ ವಿಮಾ ಪರಿಹಾರ ಮೊತ್ತಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ವ್ಯಕ್ತಿಯೊಬ್ಬ ತನ್ನ ರ‍್ಯಾಶ್ ಡ್ರೈವಿಂಗ್, ಅತೀ ವೇಗದ ಚಾಲನೆ ಸೇರಿದಂತೆ ಸ್ವಯಂ ನಿರ್ಲಕ್ಷ್ಯದಿಂದ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟರೆ, ಆತನ ಕುಟುಂಬಕ್ಕೆ ಮೋಟಾರು ವಾಹನ ಕಾಯ್ದೆಯಡಿಯಲ್ಲಿರುವಂತೆ ವಿಮಾ ಪರಿಹಾರ ನೀಡಬೇಕಾದ ಭಾದ್ಯತೆ ವಿಮಾನ ಕಂಪನಿಗಿಲ್ಲ. ಸ್ವಯಂ ನಿರ್ಲಕ್ಷ್ಯದಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ವಿಮಾ ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2014ರ ಪ್ರಕರಣ ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
2014ರ ಜೂನ್ ತಿಂಗಳಲ್ಲಿ ವ್ಯಕ್ತಿ ಫಿಯೆಟ್ ಲಿನಾ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಕುಟುಂಬ ಸದಸ್ಯರ ಜೊತೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಚಾಲನೆ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟಿದ್ದರು. ಕುಟುಂಬಸ್ಥರು ಕಾರಿನ ಟೈಯರ್ ಸ್ಫೋಟಗೊಂಡು ಅಪಘಾತ ಸಂಭವಿಸಿತ್ತು ಎಂದಿದ್ದರು. ಆದರೆ ಪೊಲೀಸ್ ತನಿಖೆಯಲ್ಲಿ ಚಾಲಕನ ಅತೀವೇಗದ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿತ್ತು ಎಂದಿತ್ತು. ತಿಂಗಳು 3 ಲಕ್ಷ ರೂಪಾಯಿ ವೇತನದಲ್ಲಿದ್ದ ಈ ವ್ಯಕ್ತಿಯ ವಿಮಾ ಪರಿಹಾರ ಮೊತ್ತ 80 ಲಕ್ಷ ರೂಪಾಯಿ ನೀಡಬೇಕು ಎಂದು ಕುಟುಂಬಸ್ಥರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕುಟುಂಬಕ್ಕೆ ತೀವ್ರ ಹಿನ್ನಡೆಯಾಗಿದೆ.
ಅಪಘಾತದಲ್ಲಿ ಪೊಲೀಸ್ ತನಿಖೆ ಪ್ರಮುಖವಾಗಿದೆ. ಅಪಘಾತದ ಕಾರಣಗಳು ಅತೀವ ಮುಖ್ಯ. ವ್ಯಕ್ತಿ ತನ್ನದೇ ಸ್ವಯಂಕೃತ ಅಪರಾಧದಿಂದ ಮೃತಪಟ್ಟರೆ ಅದಕ್ಕೆ ಹೊಣೆ ಯಾರು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹಲವು ದಾಖಲೆ ಪರಿಶೀಲಿಸಿದ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದಿಂದ ಇದೀಗ ವಾಹನ ಚಾಲನೆಯಲ್ಲಿ ರ್ಯಾಶ್ ಡ್ರೈವಿಂಗ್ ಅಥವಾ ಅತೀ ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದರೆ ವಿಮೆ ಕ್ಲೈಮ್ ಅಸಾಧ್ಯವಾಗಿದೆ.