ಜುಲೈ 7ರ ವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇತ್ತ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ 2 ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಬೆಂಗಳೂರು (ಜು.03) ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದೀಗ ಹವಾಮಾನ ಇಲಾಖೆ ಮತ್ತೊಂದು ಸುತ್ತಿನ ಅಲರ್ಟ್ ನೀಡಿದೆ. ಜುಲೈ 7ರ ವರೆಗೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಆದರೆ ಬೆಂಗಳೂರಿಗೆ ಸದ್ಯಕ್ಕೆ ಯಾವುದೇ ಮಳೆ ಅಲರ್ಟ್ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಹಗುರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ ಭಾರಿ ಮಳೆಯಿಂದ ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಕೆಲ ತಾಲೂಕುಗಳ ಶಾಲೆಗಳಿಗೆ ನಾಳೆ (ಜು.04) ರಜೆ ಘೋಷಿಸಲಾಗಿದೆ.
ಚಿಕ್ಕಮಗಳೂರಿನ 6 ತಾಲೂಕುಗಳಿಗೆ ರಜೆ ಘೋಷಣೆ
ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಇದರ ಪರಿಣಾಮ ನಾಳೆ (ಜು.04) ಕೆಲ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ಹಾಗೂ ಮೂಡಿಗೆರೆ ಸೇರಿದಂತೆ 6 ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ. ನಾಳೆ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಲೆಗೆ ರಜೆ
ಉತ್ತರ ಕನ್ನಡದ ಜಿಲ್ಲೆಯಲ್ಲೂ ಮಳೆ ಅಬ್ಬರ ಮುಂದುವರಿದಿದೆ. ತೀವ್ರ ಮಳೆಯಿಂದ ಸಂಕಷ್ಟ ಸಿಲುಕಿರುವ ನಾಲ್ಕು ತಾಲೂಕಿನ ಶಾಲೆಗಳಿಗೆ ನಾಳೆ (ಜು.04) ರಜೆ ನೀಡಲಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆ ಅಲರ್ಟ್
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಮಳೆಯಾಗಲಿದೆ.ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಕೊಡಗು, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಎಲ್ಲೋ ಅರ್ಲಟ್ ನೀಡಲಾಗಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ಯಾವುದೇ ಅಲರ್ಟ್ ಭೀತಿ ಇಲ್ಲ ಎಂದು ಹವಾಮಾನ ತಜ್ಞ ಸಿ ಎಸ್ ಪಾಟೀಲ್ ಹೇಳಿದ್ದಾರೆ.
ಕೊಡುಗು ಜಿಲ್ಲೆಯಲ್ಲಿ ರೆಡ್ ಅಲರ್ಟ್
ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಕೊಂಚ ಬ್ರೇಕ್ ಬಿದ್ದಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಮುನ್ಸೂಚನೆ ನೀಡಿದೆ. ಕೊಡುಗ ಜಿಲ್ಲೆಯಲ್ಲಿ 204.5 ಮಿಲಿ ಮೀಟರ್‌ಗಿಂತಲೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ರೆಡ್ ಅಲರ್ಟ್ ನೀಡಲಾಗಿದೆ.