
ರಾಯಚೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯೊಬ್ಬರು ರಮ್ಮಿ ಆಟವಾಡುತ್ತಿದ್ದ ದೃಶ್ಯ ಸೆರೆಯಾಗಿದೆ. ಈ ಘಟನೆ ಸಚಿವರು ಮತ್ತು ಶಾಸಕರ ಗಮನಕ್ಕೆ ಬಂದಿದ್ದು, ಅಧಿಕಾರಿಯನ್ನು ಸಭೆಯಿಂದ ಹೊರಹಾಕಲಾಗಿದೆ. ಟೋಲ್ ಗೇಟ್ ವಿಚಾರವಾಗಿ ಶಾಸಕಿ ಕರೆಮ್ಮ ನಾಯಕ ಪ್ರತಿಭಟನೆ ನಡೆಸಿದರು.
ರಮ್ಮಿ ಆಟದಿಂದ ಹಣ ನಷ್ಟ!!
ರಮ್ಮಿ ಆಟವು ಆನ್ಲೈನ್ ಗೇಮ್ ಆಗಿದ್ದು, ಇದೊಂದು ಆರ್ಥಿಕವಾಗಿ ಅಪಾಯಕಾರಿ ಆಟವಾಗಿದೆ. ಇದರಿಂದ ಹಲವು ಯುವಜನರು ಆರ್ಥಿಕ ನಷ್ಟದಿಂದ ಸಾವಿಗೂ ಶರಣಾಗಿದ್ದಾರೆ.
ರಾಯಚೂರು (ಜು.18): ಜಿಲ್ಲಾ ಮಟ್ಟದಲ್ಲಿ ಅಭಿವೃದ್ಧಿ ವಿಚಾರಗಳಿಗೆ ಮಹತ್ವದ ಕೆಡಿಪಿ (ಜಿಲ್ಲಾ ಯೋಜನೆ ಸಮಿತಿ) ಸಭೆಯೇ ಗಮನಸೆಳೆಯುವ ಅಂಶವಾಯಿತು. ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಒಂದು ಕಡೆ ಸಚಿವರು ಹಾಗೂ ಶಾಸಕರು ಪರಸ್ಪರ ವಾಗ್ವಾದ ನಡೆಸುತ್ತಿದ್ದರೆ, ಮತ್ತೊಂದೆಡೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿ ರಮ್ಮಿ ಆಟದಲ್ಲಿ ತಲ್ಲೀನರಾಗಿದ್ದ ದೃಶ್ಯ ಮಾಧ್ಯಮದ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಇಂದು ಗಂಭೀರವಾಗಿ ನಡೆಯುತ್ತಿದ್ದ ಕೆಡಿಪಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಸಭೆಯ ಗಂಭೀರತೆಯ ಬಗ್ಗೆ ಕನಿಷ್ಟ ಮನಸ್ಸು ಇರಿಸಿಕೊಳ್ಳದೆ, ಮೊಬೈಲ್ನಲ್ಲಿ ರಮ್ಮಿ ಆಟವಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ಸಭೆಯ ವಿಷಯಗಳು ಚರ್ಚೆ ಆಗುತ್ತಿದ್ದಾಗಲೇ ಅಧಿಕಾರಿ ರಮ್ಮಿ ಆಟದಲ್ಲಿ ತೊಡಗಿಸಿಕೊಂಡಿದ್ದು, ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಈ ಬಗ್ಗೆ ಕೂಡಲೇ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಅಧಿಕಾರಿಯ ನಿರ್ಲಕ್ಷ್ಯದ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ಈ ವಿಡಿಯೋ ತಕ್ಷಣವೇ ಸಭೆಯಲ್ಲಿ ಹಾಜರಿದ್ದ ಸಚಿವರು ಮತ್ತು ಶಾಸಕರ ಕಣ್ಣಿಗೆ ಬಿದ್ದಿದೆ.
ಸುವರ್ಣ ನ್ಯೂಸ್ ಇಂಪ್ಯಾಕ್ಟ್:
ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮ ವರದಿ ಹಾಗೂ ದೃಶ್ಯ ಪ್ರಸಾದರ ಹಿನ್ನೆಲೆಯಲ್ಲಿ ಸಭೆಯು ತಕ್ಷಣವೇ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಗರಂ ಆಗಿದ್ದು, ಅಧಿಕಾರಿಯ ನಿರ್ಲಕ್ಷ್ಯ ವರ್ತನೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ತಕ್ಷಣವೇ ಅಧಿಕಾರಿ ಪ್ರವೀಣ್ ಅವರನ್ನು ಸಭೆಯಿಂದ ಹೊರಹಾಕಿ, ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಸಭೆಯ ಗಂಭೀರತೆಗೆ ಧಕ್ಕೆ:
ಅಧಿಕಾರಿ ರಮ್ಮಿ ಆಟವಾಡಿದ ಘಟನೆ ಜಿಲ್ಲಾಡಳಿತದ ಶಿಸ್ತು ಮತ್ತು ಸಭೆಗಳ ಗೌರವಕ್ಕೆ ಧಕ್ಕೆಯಾಯಿತು. ಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ, ಯೋಜನೆಗಳ ಅನುಷ್ಠಾನ ಹಾಗೂ ಜನಪರ ವಿಚಾರಗಳು ಚರ್ಚೆಯಾಗಬೇಕಿತ್ತು. ಆದರೆ, ಕೆಲವರು ಗಂಭೀರತೆಯನ್ನುಯ ಅಸಡ್ಡೆಯಾಗಿ ತೋರಿಸಿರುವ ಅಸಂಯಮಿತ ನಡೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದು, ಸರ್ಕಾರದ ಶಿಸ್ತಿಗೆ ಚುಕ್ಕಾಣಿ ಬೇಕೆಂಬ ಪ್ರಶ್ನೆ ಎಬ್ಬಿಸಿದೆ. ‘ಸಭೆ ಸಮಯದಲ್ಲಿ ಇಂತಹ ಆಟವಾಡುವುದು ಎಚ್ಚರಿಕೆ ಸಿಗಲೇಬೇಕಾದ ಸಂಗತಿ. ಸರ್ಕಾರದ ಪ್ರಾಮಾಣಿಕತೆಗೆ ಬದ್ಧರಾಗದ ಅಧಿಕಾರಿಗಳಿಗೆ ಯಾವುದೇ ಸಹಿಷ್ಣುತೆ ಇಲ್ಲ. ಮುಂದಿನ ಸಭೆಗಳಲ್ಲಿ ಇಂತಹ ಘಟನೆ ಪುನರಾವರ್ತನೆ ಆಗಬಾರದು’ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ತೀವ್ರ ಎಚ್ಚರಿಕೆ ನೀಡಿದರು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ಸಭೆಯಲ್ಲಿ ಶಾಸಕಿ ಜಿ. ಕರೆಮ್ಮ ನಾಯಕ ಗರಂ ಆಗಿದ್ದಾರೆ. ಟೋಲ್ ಗೇಟ್ ವಿಚಾರವಾಗಿ ಶಾಸಕಿ ಜಿ.ಕರೆಮ್ಮ ನಾಯಕ ಪಟ್ಟು. ಟೋಲ್ ಗೇಟ್ ಕೂಡಲೇ ಸ್ಥಗಿತಗೊಳಿಸಲು ಆಗ್ರಹ. ದೇವದುರ್ಗ ಶಾಸಕಿ ಕರೆಮ್ಮಾ ಜಿ. ನಾಯಕ್ ಅವರು ಕೆಡಿಪಿ ಸಭೆಯಲ್ಲಿ ಪ್ರತಿಭಟನೆ ಮಾಡಿದರು. ಚೇರಿನಿಂದ ಎದ್ದು ನೆಲದ ಮೇಲೆ ಕುಳಿತು ಪ್ರತಿಭಟನೆ ಮಾಡಿದರು. ಒಂದೇ ಕ್ಷೇತ್ರದಲ್ಲಿ ಎರಡು ಟೋಲ್ಗಳ ಸ್ಥಾಪನೆ ಮಾಡಲಾಗಿದೆ. ಸಚಿವರು, ಉಳಿದ ಶಾಸಕ ಮನವಿಗೂ ಶಾಸಕಿ ಡೋಂಟ್ ಕೇರ್ ಮಾಡಿದರು. ಕೇಂದ್ರ ಸರ್ಕಾರದ ನಿಯಮದಂತೆ 60 ಕಿ.ಮಿ.ಗೆ ಒಂದು ಟೋಲ್ ಇರಬೇಕು. ಆದರೆ ಇಲ್ಲಿ 60 ಕಿಮಿ ಒಳಗೆ ಎರಡು ಟೋಲ್ ಇವೆ. ಕೂಡಲೇ ಟೋಲ್ ಬಂದ್ ಮಾಡಿಸುವಂತೆ ಶಾಸಕಿ ಕರೆಮ್ಮಾ ನಾಯಕ್ ಪಟ್ಟು ಹಿಡಿದರು.
ಈ ಅನಧಿಕೃತ ಟೋಲ್ ತೆಗೆಯುವರೆಗೂ ನಾನು ಶಾಸಕರ ಚೇರಿನಲ್ಲಿ ಕೂರಲ್ಲ. ನನಗೆ ಸಭೆಯಿಂದ ಹೊರಗೆ ಹಾಕಿದರೂ ಪರವಾಗಿಲ್ಲ. ಟೋಲ್ ವಿಚಾರವಾಗಿ ನನ್ನ ಕ್ಷೇತ್ರದ ಜನರು ನನ್ನ ನೋಡಿ ನಗುತ್ತಿದ್ದಾರೆ. ನಾನು ದೇವದುರ್ಗಕ್ಕೆ ಹೋಗುವರೆಗೆ ಟೋಲ್ ಮುಚ್ಚಿರಬೇಕು. ತಾತ್ಕಾಲಿಕವಾಗಿ ಟೋಲ್ ಮುಚ್ಚಲು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದರು. ಸಚಿವರ ಭರವಸೆ ಬಳಿಕ ಶಾಸಕಿ ಜಿ.ಕರೆಮ್ಮ ನಾಯಕ ಪ್ರತಿಭಟನೆ ಕೈಬಿಟ್ಟರು.