ಚಾಮರಾಜನಗರದಲ್ಲಿ 5 ಹುಲಿಗಳ ಸಾವಿನ ಒಂದು ವಾರದ ಬಳಿಕ 25ಕ್ಕೂ ಹೆಚ್ಚು ಕೋತಿಗಳ ಶವಗಳು ಪತ್ತೆಯಾಗಿವೆ. ವಿಷಪ್ರಾಶನದ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ. ಮಾನವ ನಿರ್ಮಿತ ದುಷ್ಕೃತ್ಯದ ಶಂಕೆಯೂ ಇದೆ.
ಚಾಮರಾಜನಗರ (ಜು.02): ರಾಜ್ಯದ ಗಡಿಜಿಲ್ಲೆ ಚಾಮರಾಜನಗರದಲ್ಲಿ ಕಳೆದೊಂದು ವಾರದ ಹಿಂದಷ್ಟೇ 5 ಹುಲಿಗಳು ಸಾವನ್ನಪ್ಪಿದ ಸುದ್ದಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಬಗ್ಗೆ ರಾಜ್ಯ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಡ್ಡಾಯ ರಜೆ ಕೊಟ್ಟು ಕಳುಹಿಸಿದೆ. ಇದರ ಬೆನ್ನಲ್ಲಿಯೇ ಇದೀಗ 25ಕ್ಕೂ ಹೆಚ್ಚು ಕೋತಿಗಳ ಶವಗಳು ಪತ್ತೆಯಾಗಿವೆ. ಇಲ್ಲಿ ಸತ್ತು ಬಿದ್ದಿರುವ ಎಲ್ಲ ಕೋತಿಗಳಿಗೆ ವಿಷಪ್ರಾಶನ ಮಾಡಿರುವ ಶಂಕೆಯಿದೆ.
ಚಾಮರಾಜನಗರ ಜಿಲ್ಲೆಯ ಕಂದೇಗಾಲ ಹಾಗೂ ಪಾರ್ವತಿ ಬೆಟ್ಟದ ಸುತ್ತಮುತ್ತ 25ಕ್ಕೂ ಹೆಚ್ಚು ಕೋತಿಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಸುದ್ದಿ ಇಡೀ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಪ್ರಾಣಿಗಳನ್ನು ವಿಷಪ್ರಾಶನ ಮಾಡಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಹಾಗೂ ಪಶುಪಾಲನಾ ಇಲಾಖೆಗಳು ತೀವ್ರ ಪರಿಶೀಲನೆ ನಡೆಸುತ್ತಿವೆ.
ಗ್ರಾಮಸ್ಥರ ಪ್ರಕಾರ, ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕೋತಿ ಹಾವಳಿ ಕಂಡುಬರದೆ ಇದ್ದರೂ ಸಹ, ಈ ರೀತಿ ದೊಡ್ಡ ಪ್ರಮಾಣದಲ್ಲಿ ಕೋತಿಗಳ ಶವಗಳು ಪತ್ತೆಯಾಗಿರುವುದು ಆಶ್ಚರ್ಯ ಹುಟ್ಟಿಸಿದೆ. ಇದೊಂದು ಮಾನವ ನಿರ್ಮಿತ ದುಷ್ಕೃತ್ಯ ಎಂಬ ಶಂಕೆ ವ್ಯಕ್ತವಾಗಿದ್ದು, ‘ಯಾರೋ ಕಿಡಿಗೇಡಿಗಳು ಚೀಲದಲ್ಲಿ ಕೋತಿಗಳನ್ನು ತುಂಬಿಕೊಂಡು ಬಂದು ಬಿಸಾಡಿದ್ದಾರೆ’ ಎಂಬ ಅನುಮಾನ ಕೇಳಿಬರುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದಿದ್ದಾರೆ. ಪಶುಪಾಲನಾ ಇಲಾಖೆ ಸಹಾಯ ನಿರ್ದೇಶಕ ಡಾ. ಮಾದೇಶ್ ಅವರು ಮಾತನಾಡುತ್ತಾ, ಕೋತಿಗಳ ಶವಗಳನ್ನು ಗುಂಡ್ಲುಪೇಟೆ ಪಶು ವೈದ್ಯಕೀಯ ಆಸ್ಪತ್ರೆಗೆ ತರಲಾಗಿದೆ. ಎರಡು ಕೋತಿಗಳು ಇನ್ನೂ ಜೀವಂತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವು ಚೇತರಿಸಿಕೊಳ್ಳಲು ಸುಮಾರು 6 ಗಂಟೆಗಳ ಸಮಯ ಬೇಕಾಗಬಹುದು’ ಎಂದು ತಿಳಿಸಿದ್ದಾರೆ.
ಇನ್ನು ಎಲ್ಲ ಕೋತಿಗಳು ವಿಷಾಹಾರ ಸೇವನೆ ಮಾಡಿರುವ ಶಂಕೆಯಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ತನಿಖೆ ಮುಂದುವರೆದಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ. ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ, ‘ದೇವರೇ ಅಂತಹವರಿಗೆ ಶಿಕ್ಷೆ ಕೊಡ್ತಾನೆ. ಯಾರೇ ಈ ಅಮಾಯಕರ ಮೇಲೆ ಕ್ರೂರತನವೆಸಗಿದರೂ ಅದು ಕ್ಷಮೆಯೋಗ್ಯವಲ್ಲ’ ಎಂದು ಕಿಡಿಕಾರಿದ್ದಾರೆ.