
ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳದ್ದೇ ಅಂತಿಮ ತೀರ್ಮಾನ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ತುಮಕೂರು: ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳದ್ದೇ ತೀರ್ಮಾನ. ಅದು ಅವರಿಗೆ ಬಿಟ್ಟ ವಿಚಾರ. ಯಾರನ್ನ ಎಲ್ಲಿಗೆ ಹಾಕಬೇಕು ಅನ್ನೋ ತಿರ್ಮಾನ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.
ತುಮಕೂರಿನಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಎರಡು ತಿಂಗಳ ಹಿಂದೆಯೇ ಈ ಕುರಿತು ಮನವಿ ಮಾಡಿದ್ದೆ. ತಮ್ಮ ಮನವಿಯನ್ನು ಸಿಎಂ ಪುರಸ್ಕರಿಸಿದ್ದಾರೆ ಎಂದರು. ಇನ್ನು ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದ್ಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ ಅವರು, ವೋಟರ್ ಲಿಸ್ಟ್‌ನಲ್ಲಿ ಅಕ್ರಮಗಳು ನಡೆದಿರುವುದು ಸತ್ಯ. ಒಬ್ಬ ವ್ಯಕ್ತಿ ಮೂರು ಕಡೆಗಳಲ್ಲಿ ವೋಟರ್ ಲಿಸ್ಟ್‌ಗೆ ಸೇರಿದ್ದು, 10-15 ಜನರಿರುವ ಕಡೆ 60 ಜನರನ್ನು ಸೇರಿಸಿರುವುದು, ಅಡ್ರೆಸ್, ತಂದೆಯ ಹೆಸರು ಇಲ್ಲದಿರುವುದು ನಮ್ಮ ಕಣ್ಮುಂದೆಯೇ ನಡೆದಿದೆ. ಇದಕ್ಕೆ ನಾವೇ ಕಾರಣ, ಏಕೆಂದರೆ ಡ್ರಾಫ್ಟ್ ಎಲೆಕ್ಟೊರಲ್ ರೋಲ್ ಸಂದರ್ಭದಲ್ಲಿ ಎಚ್ಚರಿಕೆಯಿಂದ ಇರಲಿಲ್ಲ ಎಂದು ಒಪ್ಪಿಕೊಂಡರು. ಮುಂದೆ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಲು ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ತಿಳಿಸಿದರು.
ಪ್ರಜ್ವಲ್ ರೇವಣ್ಣ ಶಿಕ್ಷೆಯ ನಂತರ ಹಾಸನ ಉಸ್ತುವಾರಿ ಬದಲಾವಣೆ ಮಾಡಿದ್ರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜಕೀಯ ಯಾರಿಗೂ ಶಾಶ್ವತವಲ್ಲ. ಸಂದರ್ಭಕ್ಕೆ ತಕ್ಕಂತೆ ಸಿಎಂ ಒಳ್ಳೆಯ ಸಮಯದಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು.
ಸ್ವಾಮೀಜಿ ಹೇಳಿದಂತೆ ಎಲ್ಲವೂ ನಡೆಯುವುದಾದರೆ ರಾಜಕಾರಣ ಏಕೆ ಬೇಕು?
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಬೇಕೆಂಬ ಸ್ವಾಮೀಜಿಗಳ ಒತ್ತಾಯದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸ್ವಾಮೀಜಿಗಳು ಹೇಳಿದಂತೆ ಎಲ್ಲವೂ ನಡೆಯುವುದಾದರೆ ರಾಜಕಾರಣ ಏಕೆ ಬೇಕು? ಪರಮೇಶ್ವರ್ ಅವರಿಗೆ ಅವಕಾಶ ಬಂದಾಗ ಸಿಎಂ ಆಗಬೇಕು ಎಂದು ನಾನೂ ಹೇಳುತ್ತೇನೆ. ಸ್ವಾಮೀಜಿಗಳ ಒತ್ತಾಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಮಾಷೆಯ ರೀತಿಯಲ್ಲಿ ಪ್ರತಿಕ್ರಿಯಿಸಿದರು.
ನಿನ್ನೆಯ ರಾಹುಲ್ ಗಾಂಧಿ ಭೇಟಿಯ ಬಗ್ಗೆರಾಹುಲ್ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಭೇಟಿ ನೀಡಿದ ವಿಚಾರಕ್ಕೆ, ‘ನನಗೆ ಆ ವಿಷಯದ ಬಗ್ಗೆ ಗೊತ್ತಿಲ್ಲ. ಕಾರ್ಯಕ್ರಮ ಮುಗಿದ ಬಳಿಕ ನೇರವಾಗಿ ತುಮಕೂರಿಗೆ ಬಂದೆ. ಆ ಬಗ್ಗೆ ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಹೇಳುತ್ತೇನೆ ಎಂದು ರಾಜಣ್ಣ ತಿಳಿಸಿದರು.