ಮಧ್ಯಮ ವರ್ಗ, ಬಡವರು 10 ವರ್ಷ ಅಥವಾ 15 ವರ್ಷ ವಾಹನ ಬಳಸುವುದು ನಿಯಮ ಬಾಹಿರ. ಆದರೆ 40 ವರ್ಷ ಹಳೇ ವಿಮಾನಗಳನ್ನು ಈಗಲೂ ಬಳಸುತ್ತಿದ್ದೇವೆ. ಇದ್ಯಾವ ನಿಯಮ ಎಂದು ನಿವೃತ್ತ ಏರ್‌ಪೋರ್ಸ್ ಅಧಿಕಾರಿ ಪ್ರಶ್ನಿಸಿದ್ದಾರೆ.
ನವದೆಹಲಿ (ಜು.01) ಹಳೇ ವಾಹನಗಳ ಬಳಕೆಯಿಂದ ಅದರಲ್ಲೂ 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನ ಹಾಗೂ 15 ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನ ಮಾಲಿನ್ಯ ಹೆಚ್ಚಿಸುತ್ತಿದೆ ಅನ್ನೋ ಕಾರಣಕ್ಕೆ ಸಂಪೂರ್ಣ ಬ್ಯಾನ್ ಮಾಡಲಾಗಿದೆ. ದೆಹಲಿ ಸರ್ಕಾರ ಈ ನಿಯವನ್ನು ಕಟ್ಟು ನಿಟ್ಟಾಗಿ ಇಂದಿನಿಂದ (ಜು.01) ಜಾರಿಗೊಳಿಸಿದೆ. ಇದು ಪರ ವಿರೋಧಕ್ಕೆ ಕಾರಣವಾಗಿದೆ. ಜಾರಿಗೆ ತಂದಿರುವ ಈ ನಿಯಮವನ್ನು ನಿವೃತ್ತ ಏರ್‌ಪೋರ್ಸ್ ಅಧಿಕಾರಿ ಸಂಜೀವ್ ಕಪೂರ್ ಪ್ರಶ್ನಿಸಿದ್ದಾರೆ. ನಾವು ಈಗಲೂ 40 ವರ್ಷಹಳೇ ವಿಮಾನಗಳನ್ನು ಬಳಸುತ್ತಿದ್ದೇವೆ. ಇದು ಯಾರಿಗೂ ಸಮಸ್ಯೆ ಇಲ್ಲ. ಆದರೆ 15 ವರ್ಷ ಹಳೇ ವಾಹನ ಮಾತ್ರ ಎಲ್ಲರಿಗೂ ವಾಯು ಮಾಲಿನ್ಯ ತರುತ್ತಿದೆ. ಇದು ಯಾವ ರೀತಿಯ ನಿಯಮ ಎಂದು ಸಂಜೀವ್ ಕಪೂರ್ ಪ್ರಶ್ನಿಸಿದ್ದಾರೆ.
ಪರ್ಸನಲ್ ವಾಹನ ಮಾತ್ರ ಬ್ಯಾನ್ ಯಾಕೆ
ಭಾರತ ಬಳಸುತ್ತಿರುವ ಬಹುತೇಕ ಏರ್‌ಕ್ರಾಫ್ಟ್ 40 ವರ್ಷ ಹಳೇದು. ನಮ್ಮ ರೈಲು, ಬಸ್, ಬೋಟ್, ಹಡಗು, ವಾಣಿಜ್ಯ ಬಳಕೆಯಲ್ಲಿರುವ ವಿಮಾನಗಳು ಸೇರಿದಂತೆ ಹಲವು ಸಾರಿಗೆ ವಾಹನಗಳು ಸರಿಸುಮಾರು 3 ದಶಕಗಳಷ್ಟು ಹಳೇದಾಗಿದೆ. ಸರ್ಕಾರ ಅಧಿನದಲ್ಲಿರುವ ಹಾಗೂ ಸರ್ಕಾರ ನೇರವಾಗಿ ನಡೆಸುತ್ತಿರುವ ಹಲವು ವಾಹನಗಳು 30 ರಿಂದ 40 ವರ್ಷ ಹಳೆಯದಾಗಿದೆ. ಆದರೆ ವೈಯುಕ್ತಿಕವಾಗಿ ಬಳಸುವ ವಾಹನ 15 ವರ್ಷಕ್ಕಿಂತ ಮೇಲ್ಪಟ್ಟಿರಬಾರದು ಎಂದರ ಯಾವ ನಿಯಮ ಇದು ಎಂದು ಸಂಜೀವ್ ಕಪೂರ್ ಪ್ರಶ್ನಿಸಿದ್ದಾರೆ.
ನಿರ್ಬಂಧ, ಬ್ಯಾನ್ ಕೇವಲ ಪರ್ಸನಲ್ ವಾಹನಕ್ಕೆ ಮಾತ್ರ ಯಾಕೆ ಎಂದು ಸಂಜೀವ್ ಕಪೂರ್ ಪ್ರಶ್ನಿಸಿದ್ದಾರೆ. ನಿಯಮ ಎಲ್ಲರಿಗೂ ಅನ್ವಯವಾಗಬೇಕು. ಎಷ್ಟು ಸರ್ಕಾರಿ ವಾಹನಗಳು 15 ವರ್ಷದ ಒಳಗಿದೆ. ನಿಯಮ ಎಲ್ಲರಿಗೂ ಒಂದೇ ರೀತಿ ಇರಬೇಕು. ಅಲ್ಲದೆ ಪರ್ಸನಲ್ ವಾಹನಗಳಿಗೆ ಒಂದು ನಿಮಯ ಸರ್ಕಾರಕ್ಕೆ ಒಂದು ನಿಯಮ ಸಾಧ್ಯವಿಲ್ಲ ಎಂದು ಸಂಜೀಪ್ ಕಪೂರ್ ಹೇಳಿದ್ದಾರೆ.
ದೆಹಲಿಯಲ್ಲಿ ಕಟ್ಟು ನಿಟ್ಟಾಗಿ ನಿಯಮ ಜಾರಿ
ದೆಹಲಿಯಲ್ಲಿ ಇಂದಿನಿಂದ 10 ವರ್ಷ ಹಳೇ ಡೀಸೆಲ್ ವಾಹನ, 15 ವರ್ಷ ಹಳೇ ಪೆಟ್ರೋಲ್ ವಾಹನ ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಹಳೇ ವಾಹನಗಳಿಗೆ ಇಂಧನ ನೀಡುವಂತಿಲ್ಲ. ಪೆಟ್ರೋಲ್ ಬಂಕ್‌ಗಳಲ್ಲಿ ಹಳೇ ವಾಹನಗಳಿಗೆ ಇಂಧನವಿಲ್ಲ. ಜುಲೈ 1 ರಿಂದ ಈ ನಿಯಮ ಜಾರಿಯಾಗಿದೆ. ಪೆಟ್ರೋಲ್ ಸ್ಟೇಶನ್‌ಗಳಲ್ಲಿ ಪೊಲೀಸ್ ನಿಯೋಜಿಸಲಾಗಿದೆ.
ದೆಹಲಿಯಲ್ಲಿ ಮಾಲಿನ್ಯ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಈಗಾಗಲೇ ಹಲವು ವಾರ್ನಿಂಗ್ ನೀಡಿದೆ. ಇದರ ಬೆನ್ನಲ್ಲೇ ಇದೀಗ ಸರ್ಕಾರ ಕೇಂದ್ರದ ಮಹತ್ವಾಕಾಂಕ್ಷಿ ನಿಯಮ ಹಾಗೂ ಯೋಜನೆಯಂತೆ ದೆಹಲಿ ಹಾಗೂ ರಾಜಧಾನಿ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಗೆ ತಂದಿದೆ. ಈ ಮೂಲಕ ಮಾಲಿನ್ಯ ನಿಯಂತ್ರಿಸಲು ಮುಂದಾಗಿದೆ. ಹಳೇ ವಾಹನಗಳು ಹೆಚ್ಚಿನ ಹೊಗೆ ಉಗುಳುತ್ತದೆ. ಇದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತದೆ. ಹೊಸ ವಾಹನಗಳು ಬಿಎಸ್ 6 ಅಥವಾ ಅದಕ್ಕಿಂತ ಹಿಂದಿನ ಎಮಿಶನ್ ನಿಯಮಕ್ಕೆ ಒಳಪಟ್ಟಿದೆ. ಹೀಗಾಗಿ ಮಾಲಿನ್ಯದ ಪ್ರಮಾಣ ಕಡಿಮೆ ಮಾಡಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ.
ಆಟೋಮೊಬೈಲ್ ಇಂಡಸ್ಟ್ರಿ ಲಾಭಿಗೆ ಮಣಿದಿದೆ ಎಂಬ ಆರೋಪ
ಹಳೇ ವಾಹನ ಬಳಕೆ ನಿಷೇಧ ಮಾಡಿರುವುದರ ಹಿಂದೆ ಆಟೋಮೊಬೈಲ್ ಇಂಡಸ್ಟ್ರೀಯ ಲಾಬಿ ಇದೆ ಎಂಬ ಆರೋಪವೂ ಕೇಳಿಬಂದಿದೆ. ಆಟೋಮೊಬೈಲ್ ಕ್ಷೇತ್ರ ಹೊಸ ವಾಹನ ಮಾರಾಟ ಕುಸಿತಗೊಂಡಿದೆ. ಇದೀಗ ಹಳೇ ವಾಹನ ಕಡ್ಡಾಯವಾಗಿ ಬ್ಯಾನ್ ಮಾಡಿದರೆ ಅನಿವಾರ್ಯವಾಗಿ ಜನರು ಹೊಸ ವಾಹನದ ಮೊರೆ ಹೋಗುತ್ತಾರೆ. ಇದರಿಂದ ಆಟೋಮೊಬೈಲ್ ಕ್ಷೇತ್ರ ಭರ್ಜರಿ ಲಾಭಗಳಿಸಲಿದೆ. ಈಗಾಗಲೇ ಹಲವು ವಿದೇಶಿ ಆಟೋಮೊಬೈಲ್ ಕಂಪನಿಗಳು ಭಾರತದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇವೆಲ್ಲಾ ದೃಷ್ಟಿಯಿಂದ ಮಾಡಿದ ಯೋಜನೆ ಇದು ಎಂಬ ಆರೋಪವೂ ಕೇಳಿಬಂದಿದೆ.