ಕರ್ನಾಟಕ ತನ್ನ ಸತ್ವ ಕಳೆದುಕೊಳ್ಳುತ್ತಿದೆಯಾ? ಮಕ್ಕಳಿಗೆ ಇದೀಗ ವಯಸ್ಸಾದ ಪೋಷಕರು ಬೇಡವಾಗುತ್ತಿದ್ದಾರೆ. ಆಸ್ಪತ್ರೆ ಸೇರಿಸಿ ಒಂದಷ್ಟು ಹಣ ಕಟ್ಟಿ ಮತ್ತೆ ತಿರುಗಿ ನೋಡುತ್ತಿಲ್ಲ. ಮನೆಯಿಂದ ಹೊರಗೆ ಹಾಕುತ್ತಿರುವುದು. ನಯವಾಗಿ ಅನಾಥಾಶ್ರಮ ಸೇರಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.
ಬೆಂಗಳೂರು (ಜು.03) ತಂತ್ರಜ್ಞಾನ, ಫ್ಯಾಶನ್, ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಹಾಗೂ ಕರ್ನಾಟಕ ಜನತೆ ಮುಂದಿದ್ದಾರೆ. ಆದರೆ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದಲ್ಲಿ ಸಂಬಂಧಗಳ ಅರ್ಥ ಕಳೆದುಕೊಳ್ಳುತ್ತಿದೆ. ಮಕ್ಕಳಿಗೆ ವಯಸ್ಸಾದ ಪೋಕಷಕರು ಬೇಡವಾಗುತ್ತಿದ್ದಾರೆ. ಮನೆಯಿಂದ ಹೇಗಾದರೂ ಮಾಡಿ ಪೋಷಕರನ್ನು ದಾರಿಗೆ ತಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಸಾಲು ಸಾಲು ಪ್ರಕರಣಗಳು ವರದಿಯಾಗುತ್ತಿದೆ. ಕರ್ನಾಟಕದಲ್ಲಿ ಇದೀಗ ಪೋಷಕರನ್ನು ಬೀದಿಗೆ ತಳ್ಳುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ರೀತಿ ಮಾಡಿದ 3,000 ಮಕ್ಕಳ ವಿರುದ್ದ ಪ್ರಕರಣ ದಾಖಲಾಗಿದೆ. ಮೂಲಗಳ ಪ್ರಕಾರ ಪೊಲೀಸ್ ಮೆಟ್ಟಿಲೇರದೆ ಬೀದಿಯಲ್ಲಿ ಅಲೆದಾಡುತ್ತಿರುವ ಪೋಷಕರ ಸಂಖ್ಯೆ ಇದಕ್ಕೂ ಹೆಚ್ಚಿದೆ ಎನ್ನಲಾಗುತ್ತಿದೆ.
ಮಕ್ಕಳು ತಮ್ಮ ಆಸ್ತಿಯನ್ನು ಬರೆದು ಪಡೆದುಕೊಂಡಿದ್ದಾರೆ. ತಮ್ಮ ಬಳಿ ಏನೂ ಇಲ್ಲ. ಮನೆಯಿಂದ ಹೊರಗೆ ಹಾಕಿದ್ದಾರೆ. ಮಕ್ಕಳು ಹೊರಗೆ ಹಾಕಿದ ಕಾರಣ ಬೀದಿಯಲ್ಲಿದ್ದೇವೆ. ಆಸ್ಪತ್ರೆ ದಾಖಲಿಸಿದ ಬಳಿಕ ಮಕ್ಕಳು ತಿರುಗಿ ನೋಡಿಲ್ಲ. ಹೀಗೆ ಒಂದಲ್ಲ ಎರಡಲ್ಲ ಬರೋಬ್ಬರಿ 3000ಕ್ಕೂ ಅಧಿಕ ಪ್ರಕರಣಗಳು ರಾಜ್ಯದ್ಯಂತ ದಾಖಲಾಗಿದೆ. ಪೋಷಕರೇ ತಮ್ಮ ಮಕ್ಕಳ ವಿರುದ್ಧ ನೀಡಿದ ಪ್ರಕರಣಗಳು. ಇನ್ನು ಪೋಷಕರು ಕೇಸ್, ಕೋರ್ಟ್ ಅಂತಾ ಯಾಕೆ ಬೇಕು ಎಂದು ಬೀದಿಯಲ್ಲಿ ಭಿಕ್ಷೆ ಬೇಡುತ್ತಾ, ಮಾರಾಟ ಮಾಡುತ್ತಾ ದಿನ ದೂಡುತ್ತಿರುವವ ಸಂಖ್ಯೆಯೂ ಕಡಿಮೆ ಏನಿಲ್ಲ. ಈ ಕುರಿತು ಸಚವಿ ಶರಣ್ ಪ್ರಕಾಶ್ ಪಾಟೀಲ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ರಾಜ್ಯದಂತ ಅಸಿಸ್ಟೆಂಟ್ ಕಮಿಷನರ್ ಕೋರ್ಟ್‌ನಲ್ಲಿ 3,010 ಪ್ರಕರಣಗಳು ದಾಖಲಾಗಿದೆ. ಈ ಪೈಕಿ 2000 ಪ್ರಕರಣಗಳನ್ನು ಅಂತ್ಯಗೊಂಡಿದೆ. 1,000ಕ್ಕೂ ಹೆಚ್ಚು ಪ್ರಕರಣಗಳು ಹಾಗೇ ಉಳಿದುಕೊಂಡಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣ
ಮಕ್ಕಳು ತಮ್ಮ ಪೋಷಕರನ್ನು ಬೀದಿಗೆ ತಳ್ಳುತ್ತಿರುವ ಪೈಕಿ ರಾಜ್ಯದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 827 ಪ್ರಕರಣ ದಾಖಲಾಗಿದೆ. ಈ ಮೂಲಕ ಗರಿಷ್ಠ ಏನಿಸಿಕೊಂಡಿದೆ. ಈ ಪೈಕಿ ಕೇವಲ 274 ಪ್ರಕರಣಗಳು ಮಾತ್ರ ಇತ್ಯರ್ಥವಾಗಿದೆ ಎಂದು ಶರಣ್ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ನನ್ನ ತಾಯಿ ಅಲ್ಲ ಎಂದು ಫೋನ್ ಕಟ್
ಧಾರವಾಡ ಬಾಡಿಗೆ ಮನೆಯಲ್ಲಿರುವ ತಾಯಿಯೊಬ್ಬರು ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾರೆ. ಇಬ್ಬರು ಮಕ್ಕಳು ಅವರ ಪತ್ನಿಯರು, ಕುಟುಂಬ ಸಮೇತೆ ಬೇಸಿಗೆ ರಜೆಯಲ್ಲಿ ಧಾರವಾಡಕ್ಕೆ ಆಗಮಿಸಿದ್ರು. ಈ ವೇಳೆ ಸೊಸೆಯಂದಿರಿಬ್ಬರು ಅತ್ತೆಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಇತ್ತ ಇಬ್ಬರು ಮಕ್ಕಳ ಪೈಕಿ ಒಬ್ಬ ಬೆಂಗಳೂರಿನಲ್ಲಿ ನೆಲೆಸಿದ್ದರೆ, ಮತ್ತೊಬ್ಬ ಮುಂಬೈನಲ್ಲಿ ನಲೆಸಿದ್ದಾನೆ. ಇಬ್ಬರು ತವರಿಗೆ ಆಗಮಿಸಿದ ಬೆನ್ನಲ್ಲೇ ತಾಯಿ ಆಸ್ಪತ್ರೆ ದಾಖಲಾಗಿದ್ದಾರೆ. ಮರು ದಿನವೇ ಒಂದಷ್ಟು ಹಣ ಕಟ್ಟಿ ಇಬ್ಬರು ಜಾಗ ಖಾಲಿ ಮಾಡಿದ್ದಾರೆ. ತಾಯಿಗೆ ಸಣ್ಣ ಆಪರೇಶನ್ ಮಾಡಲಾಗಿದೆ. ಕೆಲ ದಿನಗಳ ವಿಶ್ರಾಂತಿ ಬಳಿಕ ತಾಯಿ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಮಾಡುಲು ಸಿಬ್ಬಂದಿಗಳು ಮುಂದಾಗಿದ್ದಾರೆ. ಆದರೆ ತಾಯಿ ಸಂಬಂಧಿಕರು, ಮಕ್ಕಳು ಯಾರೂ ಇಲ್ಲ. ವಯಸ್ಸು ಹಾಗೂ ಆರೋಗ್ಯದ ದೃಷ್ಟಿಯಿಂದ ಯಾರಾದರೂ ಜೊತೆಗೆ ಬೇಕು ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿದ್ದಾರೆ. ಸಿಬ್ಬಂದಿಗಳು ಮಕ್ಕಳಿಬ್ಬರಿಗೂ ಕರೆ ಮಾಡಿದರೆ ತಮ್ಮ ತಾಯಿ ಅಲ್ಲ ಎಂದು ಕರೆ ಕಟ್ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸರು ದಾಖಲೆ ಪರಿಶೀಲಿಸಿ, ತಾಯಿಯಿಂದ ಆಸ್ತಿ ತಮ್ಮ ಹೆಸರಿಗೆ ಬರೆಯಿಸಿಕೊಂಡಿರುವ ಈ ಮಕ್ಕಳು, ಬಳಿಕ ತಾಯಿಯನ್ನು ನಿರ್ಲಕ್ಷಿಸಿದ್ದಾರೆ. ಪೊಲೀಸರು ಗದರಿದಾಗ ತಮ್ಮ ತಾಯಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ತಾಯಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಇದೇ ರೀತಿ ಹಲವು ಪ್ರಕರಣಗಳು ರಾಜ್ಯದ್ಯಂತ ನಡೆಯುತ್ತಿದೆ. ಇಂತಹ ಪೋಷಕಕರನ್ನು ಅನಾಥಾಶ್ರಮಕ್ಕೆ ಸೇರಿಸಲಾಗುತ್ತಿದೆ. ಈ ಟ್ರೆಂಡ್ ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಅನ್ನೋದು ಅಂಕಿ ಅಂಶಗಳು ಹೇಳುತ್ತಿದೆ.