
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ NIA ಬಲೆಗೆ ಬಿದ್ದಿದ್ದಾನೆ. ಕತಾರ್‌ನಿಂದ ಕೇರಳಕ್ಕೆ ಬಂದ ತಕ್ಷಣವೇ ಬಂಧನವಾಗಿದೆ. ಈ ಹತ್ಯೆಯಲ್ಲಿ ಒಟ್ಟು 28 ಜನರ ವಿರುದ್ಧ ಆರೋಪಪತ್ರ ಸಲ್ಲಿಸಲಾಗಿದೆ.
ಮಂಗಳೂರು (ಜು. 4): ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ಕೊನೆಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಲೆಗೆ ಬಿದ್ದಿದ್ದಾನೆ. ಕತಾರ್‌ನ ಕೊಲ್ಲಿ ರಾಷ್ಟ್ರದಿಂದ ಕೇರಳದ ಕಣ್ಣೂರಿಗೆ ಬಂದ ತಕ್ಷಣವೇ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣವನ್ನು ಸಾಮಾಜಿಕ ಶಾಂತಿಕೆ ಧಕ್ಕೆ ನೀಡುವ ಗಂಭೀರ ಕೃತ್ಯವೆಂದು ಪರಿಗಣಿಸಿ ಎನ್‌ಐಎ ತನಿಖೆ ಕೈಗೊಂಡಿತ್ತು. ಅಂದಿನಿಂದಲೇ ತಲೆಮರೆಸಿಕೊಂಡಿದ್ದ ಅಬ್ದುಲ್ ರಹಿಮಾನ್ ವಿರುದ್ಧ ಇತ್ತೀಚೆಗಷ್ಟೇ NIA ಏಪ್ರಿಲ್‌ನಲ್ಲಿ ನಾಲ್ವರು ಪ್ರಮುಖ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಈಗಾಗಲೇ ಈ ಪ್ರಕರಣದಲ್ಲಿ ಒಟ್ಟು 28 ಮಂದಿ ವಿರುದ್ಧ ಆರೋಪಪತ್ರ ಸಲ್ಲಿಸಲಾಗಿದ್ದು, ಆರೋಪಿಗಳಲ್ಲಿ 6 ಮಂದಿ ಪರಾರಿಯಾಗಿದ್ದರು. ಅಬ್ದುಲ್ ರಹಿಮಾನ್ ಸೇರಿದಂತೆ ಈ ಆರು ಮಂದಿ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿತ್ತು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಪ್ರಮುಖರ ಸೂಚನೆಯ ಮೇರೆಗೆ ಅಬ್ದುಲ್ ರಹಿಮಾನ್ ಸೇರಿದಂತೆ ಇತರರು ಈ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕೊಲೆ ಸಮಾಜದಲ್ಲಿ ಭಯ ಸೃಷ್ಟಿಸುವ ಉದ್ದೇಶದಿಂದ ನಡೆಸಲಾಯಿತು ಎಂದು ಎನ್‌ಐಎ ತಿಳಿಸಿದೆ.
ಅಬ್ದುಲ್ ರಹಿಮಾನ್ ಬಂಧನದೊಂದಿಗೆ ಪ್ರಮುಖ ಸುಳಿವುಗಳನ್ನು ಪಡೆಯುವ ನಿರೀಕ್ಷೆಯಲ್ಲಿರುವ ಎನ್‌ಐಎ, ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಪಿಗಳನ್ನು ಪತ್ತೆಹಚ್ಚಲು ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ. ಈ ಪ್ರಕರಣದ ಎಫ್‌ಐಆರ್ ಎನ್‌ಐಎ ದೆಹಲಿ ಕಚೇರಿಯಲ್ಲಿ ದಾಖಲಾಗಿದ್ದು, ರಾಷ್ಟ್ರವ್ಯಾಪಿ ಗಮನ ಸೆಳೆದಿರುವ ಈ ಪ್ರಕರಣದಲ್ಲಿ ಶೀಘ್ರದಲ್ಲೇ ಅಂತಿಮ ವರದಿ ಹೊರಬೀಳುವ ಸಾಧ್ಯತೆ ಇದೆ.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಕಳೆದ 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿತ್ತು. ಇಬ್ಬರು ಅಧಿಕಾರಿಗಳನ್ನು ಒಳಗೊಂಡ ತಂಡವು ಪುತ್ತೂರು, ಬೆಳ್ಳಾರೆ ಮತ್ತಿತರ ಕಡೆಗಳಿಗೆ ತೆರಳಿ ಹತ್ಯೆ ಘಟನೆಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಿತ್ತು. ಪ್ರವೀಣ್ ಹತ್ಯೆ ಘಟನೆಗೆ ಕೇರಳದ ಸಂಘಟನೆಗಳ ಸಂಪರ್ಕ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎನ್‌ಐಎ ತನಿಖೆಗೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಿಫಾರಸು ಮಾಡಿದ ಎರಡೇ ದಿನದಲ್ಲಿ ತನಿಖಾ ತಂಡ ಆಗಮಿಸಿ, ಪ್ರಾಥಮಿಕ ತನಿಖೆ ಶುರು ಮಾಡಿತ್ತು. ತನಿಖಾ ತಂಡ ಪ್ರವೀಣ್ ಹತ್ಯೆಯಾದ ಸ್ಥಳ, ಆತನ ಅಂಗಡಿ ವ್ಯವಹಾರ, ಸ್ನೇಹಿತರ ಸಂಪರ್ಕ, ಹಿಂದು- ಮುಸ್ಲಿಂ ಸಂಘಟನೆಗಳು ಹಾಗೂ ಆತನ ಕುಟುಂಬದ ಜತೆ ಮಾತನಾಡಿ ವಿವರವಾದ ಮಾಹಿತಿ ಸಂಗ್ರಹಿಸಿತ್ತು. ಅಲ್ಲದೆ ಪೊಲೀಸ್ ತನಿಖಾ ತಂಡದ ಜತೆ ಮಾತನಾಡಿ ಬಂಧಿತ ಆರೋಪಿಗಳನ್ನೂ ವಿಚಾರಣೆಗೆ ಒಳಪಡಿಸಿತ್ತು. ಈ ಎಲ್ಲ ಪ್ರಾಥಮಿಕ ಮಾಹಿತಿ ಸಂಗ್ರಹ ಪ್ರಕ್ರಿಯೆ ಮುಕ್ತಾಯಗೊಳಿಸಿದ ಬಳಿಕವೇ ಕ್ರಮ ಕೈಗೊಂಡು 6 ಆರೋಪಿಗಳನ್ನು ಗುರುತಿಸಿತ್ತು.