
ತಮಿಳುನಾಡಿನಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಕಾರ್ಪೊರೇಟರ್ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಸಾರ್ವಜನಿಕ ಸ್ಥಳದಲ್ಲೇ ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅನೈತಿಕ ಸಂಬಂಧದ ಶಂಕೆಯ ಮೇರೆಗೆ ಮಹಿಳಾ ಕಾರ್ಪೋರೇಟರ್ ಒಬ್ಬರನ್ನು ಪತಿಯೇ ಬರ್ಬರವಾಗಿ ಹತ್ಯೆ ಮಾಡಿದ ಭಯಾನಕ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗಂಡನಿಂದಲೇ ಹತ್ಯೆಯಾದ ಮಹಿಳೆಯನ್ನು ಗೋಮತಿ ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧದ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಜಗಳವಾಗಿದ್ದು, ನಂತರ ಪತಿಯೇ ಆಕೆಯನ್ನು ಕಡಿದು ಕೊಲೆ ಮಾಡಿದ್ದಾನೆ. ತಮಿಳುನಾಡಿನ ಅವಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಕೊಲೆಯಾದ ಮಹಿಳೆ ಗೋಮತಿ ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕಿಯಾಗಿದ್ದು, ಕಾರ್ಪೋರೇಟರ್ ಆಗಿ ಆಯ್ಕೆಯಾಗಿದ್ದರು. ಆದರೆ ಪತಿಗೆ ಈಕೆಯ ಮೇಲೆ ಅನುಮಾನವಿತ್ತು. ಗುರುವಾರ ಆಕೆ ತಿರುನಿರವುರ್ ಪ್ರದೇಶದ ಜಯರಾಮ್ ನಗರದಲ್ಲಿ ಮತ್ತೊಬ್ಬ ವ್ಯಕ್ತಿಯ ಜೊತೆ ಮಾತನಾಡುತ್ತಾ ನಿಂತಿದ್ದಾಗ ಆಕೆ ಅಲ್ಲಿದ್ದಾಳೆ ಎಂಬ ವಿಚಾರ ತಿಳಿದು ಅಲ್ಲಿಗೆ ಆಗಮಿಸಿದ ಆಕೆಯ ಪತಿ ಸ್ಟೀಫನ್ ರಾಜ್ ಸಾರ್ವಜನಿಕ ಸ್ಥಳದಲ್ಲೇ ಜಗಳ ಮಾಡಲು ಶುರು ಮಾಡಿದ್ದಾನೆ.
ಇದು ನಂತರ ವಿಕೋಪಕ್ಕೆ ತಿರುಗಿದ್ದು, ಸ್ಟೀಫನ್ ರಾಜ್ ತಾನು ತಂದಿದ್ದ ಚಾಕುವನ್ನು ಹೊರ ತೆಗೆದು ಗೋಮತಿ ಮೇಲೆ ಚಾಕುವಿನಿಂದ ನಿರಂತರ ಹಲ್ಲೆ ಮಾಡಿದ್ದು, ಆಕೆ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯ ಬಳಿಕ ಸ್ಟೀಫನ್ ರಾಜ್ ಸಮೀಪದ ತಿರುನಿನ್ವರುರ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಆತನನ್ನು ನಂತರ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.