ಏಷ್ಯನ್ ತಂಡಗಳ ಕ್ರಿಕೆಟ್ ಕದನ ಏಷ್ಯಾಕಪ್ 2025 ಕ್ಕೆ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 10 ರಿಂದ ಏಷ್ಯಾಕಪ್ನ 17ನೇ ಆವೃತ್ತಿ ಶುರುವಾಗಲಿದೆ. ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ ಎಂದು ತಿಳಿದು ಬಂದಿದೆ. ಈ ಎಂಟು ತಂಡಗಳಲ್ಲಿ ಭಾರತ ಮತ್ತು ಪಾಕಿಸ್ತಾನ್ ಕೂಡ ಸೇರಿಕೊಂಡಿದೆ. ಇದಕ್ಕೂ ಮುನ್ನ ಏಷ್ಯಾಕಪ್ ಟೂರ್ನಿಯಿಂದ ಭಾರತ ಹಿಂದೆ ಸರಿಯಲಿದೆ ಎನ್ನಲಾಗಿತ್ತು. ಭಾರತ-ಪಾಕಿಸ್ತಾನ್ ನಡುವೆ ಇತ್ತೀಚೆಗೆ ನಡೆದ ಯುದ್ಧದ ಹಿನ್ನಲೆಯಲ್ಲಿ ಏಷ್ಯಾಕಪ್ನಿಂದ ಹಿಂದೆ ಸರಿಯಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿತ್ತು.
ಮತ್ತೊಂದೆಡೆ ಪಾಕಿಸ್ತಾನ್ ತಂಡವನ್ನು ಹೊರಗಿಟ್ಟು, ಭಾರತ ತಂಡವನ್ನು ಸೇರಿಸಿ ಏಷ್ಯಾಕಪ್ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ ಎಂಬ ಸುದ್ದಿಗಳು ಕೂಡ ಕೇಳಿ ಬಂದಿದ್ದವು. ಆದರೀಗ ಮುಂಬರುವ ಟೂರ್ನಿಯಲ್ಲಿ ಉಭಯ ತಂಡಗಳು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಪಾಕಿಸ್ತಾನ್ ಪಂದ್ಯ ಎಲ್ಲಿ?
ಈ ಬಾರಿಯ ಏಷ್ಯಾಕಪ್ ನಡೆಯಲಿರುವುದು ಭಾರತದಲ್ಲಿ. ಆದರೆ ಭಾರತದಲ್ಲಿ ಟೂರ್ನಿ ಆಡಲು ಪಾಕಿಸ್ತಾನ್ ಹಿಂದೇಟು ಹಾಕಲಿದೆ. ಏಕೆಂದರೆ ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿ ವೇಳೆ ಪಾಕ್ನಲ್ಲಿ ಟೂರ್ನಿ ಆಡಲು ಭಾರತ ಹಿಂದೇಟು ಹಾಕಿತ್ತು. ಅಲ್ಲದೆ ಐಸಿಸಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ಬಿಸಿಸಿಐ ಹಾಗೂ ಪಿಸಿಬಿ ನಡುವೆ ಒಪ್ಪಂದವಾಗಿದ್ದು, ಈ ಒಪ್ಪಂದದಂತೆ ಉಭಯ ತಂಡಗಳ ಪಂದ್ಯಗಳನ್ನು ತಟಸ್ಥ ಮೈದಾನದಲ್ಲಿ ಆಯೋಜಿಸಬೇಕಾಗುತ್ತದೆ. ಇದೇ ಕಾರಣದಿಂದಾಗಿ ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಟೀಮ್ ಇಂಡಿಯಾ ದುಬೈನಲ್ಲಿ ಆಡಿತ್ತು.
ಹೀಗಾಗಿ ಏಷ್ಯಾಕಪ್ ಅನ್ನು ಕೂಡ ಬಿಸಿಸಿಐ, ಹೈಬ್ರಿಡ್ ಮಾದರಿಯಲ್ಲೇ ಆಯೋಜಿಸಬೇಕಾಗುತ್ತದೆ. ಅದರಂತೆ ಪಾಕಿಸ್ತಾನ್ ತಂಡದ ಪಂದ್ಯಗಳು ಯುಎಇ ನಲ್ಲಿ ಆಯೋಜನೆಗೊಳ್ಳುವ ಸಾಧ್ಯತೆ ಹೆಚ್ಚು.
ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವ ತಂಡಗಳಾವುವು?
- ಭಾರತ
- ಪಾಕಿಸ್ತಾನ್
- ಅಫ್ಘಾನಿಸ್ತಾನ್
- ಶ್ರೀಲಂಕಾ
- ಬಾಂಗ್ಲಾದೇಶ್
- ಯುಎಇ
- ಒಮಾನ್
- ಹಾಂಗ್ಕಾಂಗ್
ಮ್ಯಾಚ್ ಸ್ವರೂಪ?
ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯಲಿದೆ. 2026ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಚುಟುಕು ಸ್ವರೂಪದಲ್ಲಿ ಏಷ್ಯಾಕಪ್ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿರ್ಧರಿಸಿದೆ. ಅದರಂತೆ ಮುಂಬರುವ ಏಷ್ಯಾಕಪ್ನಲ್ಲಿ ಟಿ20 ಕದನವನ್ನು ವೀಕ್ಷಿಸಬಹುದು.
ಇದನ್ನೂ ಓದಿ: ದಾಖಲೆಗಳ ಮೇಲೆ ದಾಖಲೆ ಬರೆದ ಸ್ಮೃತಿ ಮಂಧಾನ
ಶ್ರೀಘ್ರದಲ್ಲೇ ಏಷ್ಯಾಕಪ್ ವೇಳಾಪಟ್ಟಿ:
ಏಷ್ಯಾಕಪ್ 2025ರ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟವಾಗಲಿದೆ. ಈ ಟೂರ್ನಿಯಲ್ಲಿ ಭಾಗವಹಿಸುವಿಕೆಗಾಗಿ ಬಿಸಿಸಿಐ ಭಾರತ ಸರ್ಕಾಕೆಗರದಿಂದ ಅನುಮೋದನೆಗಾಗಿ ಕಾಯುತ್ತಿದೆ. ಈ ಅನುಮೋದನೆ ಸಿಕ್ಕ ಬೆನ್ನಲ್ಲೇ ಏಷ್ಯಾಕಪ್ 2025 ರ ಅಧಿಕೃತ ವೇಳಾಪಟ್ಟಿ ಪ್ರಕಟವಾಗಲಿದೆ.