ಮದ್ಯದ ಅಮಲಿನಲ್ಲಿ ಸಾಂಬಾರು ಮಾಡುವ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ಉಂಟಾಗಿ ಕೊಲೆಯಲ್ಲಿ ಅಂತ್ಯವಾಗಿದೆ. ತಲಘಟ್ಟಪುರದಲ್ಲಿ ನಡೆದ ಈ ಘಟನೆಯಲ್ಲಿ ನೇಪಾಳ ಮೂಲದ ಝರಿಲಾಲ್ ಮೃತಪಟ್ಟಿದ್ದು, ಆತನ ಸ್ನೇಹಿತ ಮಹೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಜೂ.24) ಮದ್ಯದ ಅಮಲಿನಲ್ಲಿ ಸಾಂಬಾರು ಮಾಡುವ ವಿಚಾರಕ್ಕೆ ಸ್ನೇಹಿತರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನೇಪಾಳ ದೇಶ ಝರಿಲಾಲ್ (70) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತ ಮಹೇಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಂದೇ ಕಡೆ ವಾಸ ಮಾಡುತ್ತಿದ್ದ ಅವರುಮನೆಯಲ್ಲಿ ಭಾನುವಾರ ರಾತ್ರಿ ಸಾಂಬಾರು ತಯಾರಿಸುವ ವಿಚಾರವಾಗಿ ಝರಿಲಾಲ್ ಹಾಗೂ ಆತನ ಸ್ನೇಹಿತ ಮಹೇಂದ್ರನ ಮಧ್ಯೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಚಪಾತಿ ಲಟ್ಟಣಗೆಯಿಂದ ಝರಿಲಾಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲವು ದಿನಗಳ ಹಿಂದೆ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಝರಿಲಾಲ್, ತಲಘಟ್ಟಪುರ ಸಮೀಪದ ಖಾಸಗಿ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಸಂಸ್ಥೆಯ ಆವರಣದಲ್ಲಿ ಆತ ಕೆಲಸ ಮಾಡುತ್ತಿದ್ದ. ತನ್ನ ಗೆಳೆಯನ ಜತೆ ಭಾನುವಾರ ರಾತ್ರಿ ಝರಿಲಾಲ್ ಮದ್ಯ ಸೇವಿಸಿದ್ದಾನೆ. ಕಂಠ ಪೂರ್ತಿ ಮದ್ಯ ಸೇವಿಸಿದ ಬಳಿಕ ಸಾಂಬಾರು ತಯಾರಿಸುವ ವಿಚಾರದಲ್ಲಿ ಮನೆಯಲ್ಲಿ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.