ಮಧುಮೇಹ ಸಮಸ್ಯೆ ಎನ್ನುವುದು ಸರ್ವೇ ಸಾಮಾನ್ಯ ಆಗಿರುವ ಈ ದಿನಗಳಲ್ಲಿ ಕುಳಿತಲ್ಲಿಯೇ 10 ನಿಮಿಷ ಹಿಮ್ಮಡಿಯ ವ್ಯಾಯಾಮ ಹೇಳಿದ್ದಾರೆ ಇವರು. ಅವರ ಅನುಭವ ಕೇಳಿ…
ಮಧುಮೇಹ (Blood Sugar) ಎನ್ನುವುದು ಈಗ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಪ್ರತಿ ಮನೆಯಲ್ಲಿ ಒಂದಿಬ್ಬರಿಗೆ ಕನಿಷ್ಠ ಇದ್ದೇ ಇರುತ್ತದೆ ಎನ್ನುವಷ್ಟರ ಮಟ್ಟಿಗೆ ಇದು ಕಾಮನ್ ಆಗಿದೆ. ಒಂದು ವಯಸ್ಸಿನಲ್ಲಿ ಬರುತ್ತಿದ್ದ ಈ ಸಮಸ್ಯೆ ಇದೀಗ ಚಿಕ್ಕ ಮಕ್ಕಳಲ್ಲಿಯೂ ಬರುತ್ತಿದೆ. ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ ಇದು. ಹೆಚ್ಚಾಗಿ ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆ ಎಂದು ಹೇಳಿದರೂ, ಇಂದಿನ ಹಲವಾರು ಪರಿಸ್ಥಿತಿ, ಹವಾಮಾನ, ಒತ್ತಡದ ಬದುಕು ಇವೆಲ್ಲವುಗಳಿಂದ ಸಮಸ್ಯೆ ಹಿರಿಯರಿಂದಲೇ ಬರಬೇಕೆಂದೇನೂ ಇಲ್ಲ. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ, 18,000 ಕ್ಕೂ ಹೆಚ್ಚು ಯುವಜನರು ಟೈಪ್ 1 ಮಧುಮೇಹವನ್ನು ಹೊಂದಿದ್ದಾರೆ ಮತ್ತು 5,000 ಕ್ಕೂ ಹೆಚ್ಚು ಯುವಜನರು ಟೈಪ್ 2 ಮಧುಮೇಹವನ್ನು ಹೊಂದಿದ್ದಾರೆ.
ನಮ್ಮ ಮನಸ್ಸು ಹೇಗೆಂದರೆ, ಅದನ್ನು ತಿನ್ನುವುದು ಬೇಡ ಎಂದಾಗಲೇ ಅದನ್ನು ತಿನ್ನಬೇಕು ಎನ್ನುವ ಮನಸ್ಸು ಬರುತ್ತದೆ. ಉದಾಹರಣೆಗೆ ಸಿಹಿ ಪದಾರ್ಥ ಇಷ್ಟವಿಲ್ಲದ ವ್ಯಕ್ತಿಗೆ ಮಧುಮೇಹ ಬಂದಿದೆ ಎಂದು ತಿಳಿದರೆ ಸಿಹಿಯನ್ನು ತಿನ್ನಬೇಕು ಎನ್ನಿಸುತ್ತದೆ, ಅತಿಯಾದ ಉಪ್ಪು, ಕರಿದ ಪದಾರ್ಥಗಳನ್ನು ಒಲ್ಲೆ ಎನ್ನುವವನಿಗೆ ಬಿಪಿ ಇದೆ ಎಂದು ತಿಳಿದಾಗ ಕರಿದ ತಿಂಡಿಗಳು ರುಚಿಸಲು ಶುರುವಾಗುತ್ತದೆ. ಇದು ಬಹುತೇಕ ಜನರಿಗೆ ಆಗುವ ಸಮಸ್ಯೆಯೇ ಆಗಿದೆ. ಅದರಲ್ಲಿಯೂ ಶುಗರ್ ಪೇಷಂಟ್ಗಳಿಗೆ ದೈಹಿಕ ವ್ಯಾಯಾಮ ಅತ್ಯಗತ್ಯ. ಅದರಲ್ಲಿಯೂ ವಾಕಿಂಗ್ ಅಂತೂ ಮಾಡಲೇಬೇಕು ಎಂದು ವೈದ್ಯರು ಹೇಳುತ್ತಾರೆ. ಒಮ್ಮೆ ಶುಗರ್ ಬಂದರೆ ಅದು ನೀವು ಸಾಯುವವರೆಗೂ ಇರುತ್ತದೆ ಎಂದು ಹೆಚ್ಚಿನವರು ಹೇಳಿದರೆ, ಹೋಮಿಯೋಪಥಿಯಲ್ಲಿ ಔಷಧ ತೆಗೆದುಕೊಂಡು ಗುಣಪಡಿಸಿಕೊಂಡವರೂ ಇದ್ದಾರೆ. ಈ ಬಗ್ಗೆ ಹಲವಾರು ರೀತಿಯ ವಾದ-ಪ್ರತಿವಾದಗಳು ಇವೆ ಅನ್ನಿ. ಒಬ್ಬರು ಒಪ್ಪಿದ್ದನ್ನು ಇನ್ನೊಬ್ಬರು ಒಪ್ಪುವುದಿಲ್ಲ. ಶುಗರ್ ಲೆವೆಲ್ ಒಂದೇ ಸಲಕ್ಕೆ 5 ಕಡೆ ಟೆಸ್ಟ್ ಮಾಡಿಸಿದರೆ 5 ವಿಭಿನ್ನ ರೀತಿಯ ಫಲಿತಾಂಶ ಬರುತ್ತದೆ. ಇದು ಬಿಪಿಗೂ ಅನ್ವಯ. ಹಾಗಿದ್ದ ಮೇಲೆ ಯಾವುದನ್ನು ನಂಬಬೇಕು, ಯಾರನ್ನು ನಂಬಬೇಕು ಎನ್ನುವ ಪ್ರಶ್ನೆಯೂ ಹಲವು ರೋಗಿಗಳನ್ನು ಕಾಡುತ್ತಿರುವುದು ಇದೆ. ಇವೆಲ್ಲಕ್ಕೂ ಹೋಮಿಯೋಪಥಿಯಲ್ಲಿ ಉತ್ತರವಿದೆ ಎನ್ನುತ್ತಾರೆ ತಜ್ಞ ವೈದ್ಯರು.
ಅದೇನೇ ಇರಲಿ. ಆದರೆ, ಕುಳಿತಲ್ಲಿಯೇ 10 ನಿಮಿಷ ಈ ವ್ಯಾಯಾಮ ಮಾಡಿದರೆ ಶುಗರ್ ಸಮಸ್ಯೆ ಅರ್ಧಕ್ಕರ್ಧ ಕಡಿಮೆಯಾಗುತ್ತದೆ ಎಂದಿದ್ದಾರೆ ಇವರು. ಇಂದಿನ ಬಿಜಿ ಲೈಫ್ನಲ್ಲಿ ಹೆಚ್ಚಿನವರಿಗೆ ಅದರಲ್ಲಿಯೂ ಯುವಕರಿಗೇ ಟೈಮೇ ಇಲ್ಲ ಎನ್ನುವ ಮಾತು. ಇರುವ ಸಮಯದಲ್ಲಿಯೇ ಏನೇನೋ ಸಾಧನೆ ಮಾಡಿ ತೋರಿಸುವವರು ಇದ್ದರೂ, ತಮಗಾಗಿ, ತಮ್ಮ ದೇಹಕ್ಕಾಗಿ ಒಂದಷ್ಟು ಸಮಯವನ್ನು ತೆಗೆದು ಇರಿಸಿಕೊಳ್ಳಲಾಗದವರೂ ಅಷ್ಟೇ ಪ್ರಮಾಣದಲ್ಲಿ ಇದ್ದಾರೆ. ಇನ್ನು ಕೆಲವರಿಗೆ ಟೈಮೇ ಇಲ್ಲ ಎನ್ನುವುದು ಒಂದು ನೆಪವಷ್ಟೇ. ಕಾರಣ ಏನೇ ಇರಲಿ. ನೀವು ಮನೆಯಲ್ಲಿಯೇ ಇರಲಿ, ಕಚೇರಿಯಲ್ಲಿಯೇ ಇರಲಿ, ಅಥ್ವಾ ಟಿವಿ ನೋಡುತ್ತಾ ಸೀರಿಯಲ್ನಲ್ಲಿ ಮುಳುಗಿಯೇ ಇರಲಿ… ಕುಳಿತಲ್ಲಿಯೇ ಹತ್ತು ನಿಮಿಷ ಈ ವ್ಯಾಯಾಮ ಮಾಡಿದರೆ ಶುಗರ್ ಲೆವೆಲ್ ಕಡಿಮೆ ಆಗುವುದಾಗಿ ತಮ್ಮ ಅನುಭವವನ್ನು ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಕೆಲವು ವೈದ್ಯರು ಕೂಡ ಮಾತನಾಡಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ‘ಥೆರಾಹುಲ್ರೂಟೀನ್’ ಎಂಬ ಬಳಕೆದಾರಹೆಸರಿನ ರಾಹುಲ್ ಲಾಲ್ಚಂದಾನಿ ಎಂಬುವವರು ಈ ಬಗ್ಗೆ ಹೇಳಿದ್ದಾರೆ. ತಮ್ಮ 26 ನೇ ವಯಸ್ಸಿನಲ್ಲಿ, ಸುಮ್ಮನೇ ಒಮ್ಮೆ ಬ್ಲಡ್ ಟೆಸ್ಟ್ ಮಾಡಿಸಿಕೊಂಡಾಗ ಸಕ್ಕರೆ ಮಟ್ಟ ಹೆಚ್ಚಾಗಿದೆ ಎಂದು ಅದರಲ್ಲಿ ಕಂಡಿತು. ಕೊನೆಗೆ ಹಲವಾರು ಸಂಶೋಧನೆ ಮಾಡಿದ ಬಳಿಕ ಸುಲಭದ ಉಪಾಯ ಕಂಡುಕೊಂಡೆ. ಅದು ಸಕ್ಸಸ್ ಆಗಿದೆ. ಶೇಕಡಾ 52ರಷ್ಟು ಸಕ್ಸಸ್ ಕಂಡಿದೆ ಎಂದಿದ್ದಾರೆ. ವೈದ್ಯರ ಬಳಿ ಹೋದರೆ ಊಟದ ಬಳಿಕ ವಾಕಿಂಗ್ ಮಾಡಿ, ನಿತ್ಯ ವ್ಯಾಯಾಮ ಮಾಡಿ ಎನ್ನುತ್ತಾರೆ. ಆದರೆ, ಅದಕ್ಕೆ ನನ್ನ ಬಳಿ ಟೈಂ ಇರಲಿಲ್ಲ. ಆದ್ದರಿಂದ ಈ ಉಪಾಯ ಕಂಡುಕೊಂಡೆ ಎಂದಿದ್ದಾರೆ ಅವರು. ಅದಕ್ಕಾಗಿ ಅವರು ಹೇಳಿದ್ದು ಕುಳಿತಲ್ಲಿಯೇ ಹಿಮ್ಮಡಿಯನ್ನು ಎತ್ತುವ ವ್ಯಾಯಾಮ. ಇದನ್ನು ಇಂಗ್ಲಿಷ್ನಲ್ಲಿ Calf raises ಎಂದು ಹೇಳುತ್ತಾರೆ. ಹಿಮ್ಮಡಿಯನ್ನು ಮೇಲೆ, ಕೆಳಗೆ ಒಂದು 10 ನಿಮಿಷ ಮಾಡುತ್ತಿದ್ದರೆ ಇದು ತುಂಬಾ ಸಹಾಯ ಆಗುತ್ತದೆ ಎಂದಿದ್ದಾರೆ. ಮನೆಯಲ್ಲಿ, ಕಚೇರಿಯಲ್ಲಿ ಎಲ್ಲಿಯೇ ಟೈಮ್ ಸಿಕ್ಕರೂ ಇದನ್ನು ಮಾಡುವಂತೆ ಅವರು ಸಲಹೆ ಕೊಟ್ಟಿದ್ದು, ಅದರಿಂದ ತಾವು ಕಂಡುಕೊಂಡ ಫಲಿತಾಂಶದ ಬಗ್ಗೆಯೂ ತಿಳಿಸಿದ್ದಾರೆ. ಅಷ್ಟಕ್ಕೂ ಹಿಮ್ಮಡಿ ಎತ್ತರಿಸುವ ವ್ಯಾಯಾಮದಿಂದ ಹಲವಾರು ಪ್ರಯೋಜನಗಳು ಕೂಡ ಇವೆ. ಇವು ದೇಹಕ್ಕೆ ಶಕ್ತಿ ತುಂಬುವ ಜೊತೆಗೆ ಸ್ನಾಯುಗಳನ್ನೂ ಬಲಪಡಿಸುತ್ತವೆ.