ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಕುತೂಹಲಘಟ್ಟದತ್ತ ಸಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ (101), ಶುಭ್ಮನ್ ಗಿಲ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ ಪರ ಬೆನ್ ಡಕೆಟ್ 62 ರನ್ ಬಾರಿಸಿದರೆ, ಒಲೀ ಪೋಪ್ 101 ರನ್ಗಳ ಶತಕ ಸಿಡಿಸಿದರು. ಇನ್ನು ಹ್ಯಾರಿ ಬ್ರೂಕ್ 99 ರನ್ಗಳ ಇನಿಂಗ್ಸ್ ಆಡಿದರು. ಈ ಮೂಲಕ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್ನಲ್ಲಿ 465 ರನ್ಗಳಿಸಿ ಆಲೌಟ್ ಆಯಿತು.
6 ರನ್ಗಳ ಮುನ್ನಡೆ:
ಮೊದಲ ಇನಿಂಗ್ಸ್ನಲ್ಲಿ ಕೇವಲ 6 ರನ್ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಪರ ದ್ವಿತೀಯ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕನಾಗಿ ಕಣಕ್ಕಿಳಿದ ಕೆಎಲ್ ರಾಹುಲ್ 137 ರನ್ ಬಾರಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ 118 ರನ್ ಸಿಡಿಸಿದರು. ಇದಾಗ್ಯೂ ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಪರಿಣಾಮ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 364 ರನ್ಗಳಿಸಿ ಆಲೌಟ್ ಆಯಿತು.
371 ರನ್ಗಳ ಗುರಿ:
ಮೊದಲ ಇನಿಂಗ್ಸ್ನಲ್ಲಿನ 6 ರನ್ಗಳ ಹಿನ್ನಡೆಯೊಂದಿಗೆ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್ನಲ್ಲಿ 371 ರನ್ಗಳ ಗುರಿ ಪಡೆದುಕೊಂಡಿದೆ. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ಆಂಗ್ಲರು ನಾಲ್ಕನೇ ದಿನದಾಟದ ಮುಕ್ತಾಯದ ವೇಳೆಗೆ 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 21 ರನ್ ಕಲೆಹಾಕಿದೆ. ಇನ್ನು ಒಂದು ದಿನದಾಟ ಮಾತ್ರ ಬಾಕಿಯಿದ್ದು, ಈ ವೇಳೆ 350 ರನ್ಗಳಿಸಿದರೆ ಮಾತ್ರ ಇಂಗ್ಲೆಂಡ್ ಗೆಲ್ಲಬಹುದು.
ಚೇಸಿಂಗ್ ಸಾಧ್ಯನಾ?
ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ ಚೇಸಿಂಗ್ ಕಷ್ಟಕರವೇನಲ್ಲ. ಈ ಮೈದಾನದಲ್ಲಿ ಆಡಿದ ಕೊನೆಯ 5 ಟೆಸ್ಟ್ ಪಂದ್ಯಗಳಲ್ಲೂ ನಾಲ್ಕನೇ ಇನಿಂಗ್ಸ್ ಆಡಿದ ತಂಡವೇ ಗೆದ್ದಿದೆ. ಅಲ್ಲದೆ ಈ ಮೈದಾನದಲ್ಲಿ 1948 ರಲ್ಲಿ ಆಸ್ಟ್ರೇಲಿಯಾ ತಂಡವು 404 ರನ್ಗಳನ್ನು ಚೇಸ್ ಮಾಡಿ ಗೆದ್ದ ಇತಿಹಾಸವಿದೆ. ಇದಲ್ಲದೆ 2019 ರಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧ 362 ರನ್ಗಳನ್ನು ಬೆನ್ನತ್ತಿ ಗೆದ್ದಿದೆ.
ಇನ್ನು ಇತ್ತೀಚಿನ ಚೇಸಿಂಗ್ ದಾಖಲೆಗಳನ್ನು ನೋಡುವುದಾದರೆ, 2022 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಇಂಗ್ಲೆಂಡ್ 296 ರನ್ಗಳನ್ನು ಚೇಸ್ ಮಾಡಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಹಾಗೆಯೇ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ 254 ರನ್ಗಳನ್ನು ಚೇಸ್ ಮಾಡಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಹೆಡಿಂಗ್ಲೆ ಮೈದಾನದಲ್ಲಿ ಬೆನ್ನತ್ತಿ ಗೆದ್ದ ಗರಿಷ್ಠ ಸ್ಕೋರ್. ಅಂದರೆ ನಾಲ್ಕನೇ ಇನಿಂಗ್ಸ್ನಲ್ಲಿ 370+ ಸ್ಕೋರ್ ಅನ್ನು ಬೆನ್ನತ್ತಿ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ. ಅದು ಕೂಡ 1948 ರಲ್ಲಿ.
ಅಂದರೆ ಕಳೆದ 76 ವರ್ಷಗಳಲ್ಲಿ ಯಾವುದೇ ತಂಡ ಈ ಮೈದಾನದಲ್ಲಿ 370+ ಕ್ಕಿಂತ ಹೆಚ್ಚಿನ ಮೊತ್ತ ಚೇಸ್ ಮಾಡಿಲ್ಲ. ಇತ್ತ ಟೀಮ್ ಇಂಡಿಯಾ ನೀಡಿರುವುದು 371 ರನ್ಗಳ ಗುರಿ. ಹೀಗಾಗಿ ಇತಿಹಾಸವನ್ನು ಗಣನೆಗೆ ತೆಗೆದುಕೊಂಡರೆ ಅದೃಷ್ಟವು ಭಾರತದ ಕೈ ಹಿಡಿಯುವ ಸಾಧ್ಯತೆಯಿದೆ.
ಟೀಮ್ ಇಂಡಿಯಾ ಗೆಲ್ಲುತ್ತಾ?
ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ ಉತ್ತಮ ದಾಳಿ ಸಂಘಟಿಸಿತ್ತು. ಇದಾಗ್ಯೂ ಕಳಪೆ ಫೀಲ್ಡಿಂಗ್ನಿಂದಾಗಿ ಇಂಗ್ಲೆಂಡ್ 465 ರನ್ಗಳಿಸಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು. ಇದೀಗ 371 ರನ್ಗಳ ಗುರಿ ಪಡೆದಿರುವ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಬಳಿ ಬುಮ್ರಾಸ್ತ್ರವಿದೆ. ಅಷ್ಟೇ ಅಲ್ಲದೆ 350+ ರನ್ಗಳನ್ನು ನೀಡಿ ಟೀಮ್ ಇಂಡಿಯಾ ಟೆಸ್ಟ್ ಪಂದ್ಯವನ್ನು ಸೋತಿರುವುದು ಕೇವಲ ಒಮ್ಮೆ ಮಾತ್ರ.
ಭಾರತ ತಂಡವು ಈವರೆಗೆ 59 ಟೆಸ್ಟ್ ಪಂದ್ಯಗಳಲ್ಲಿ ಕೊನೆಯ ಇನಿಂಗ್ಸ್ನಲ್ಲಿ 350+ ರನ್ಗಳ ಟಾರ್ಗೆಟ್ ನೀಡಿದೆ. ಈ ವೇಳೆ 42 ಬಾರಿ ಟೀಮ್ ಇಂಡಿಯಾ ಗೆದ್ದಿದೆ. ಇನ್ನು 16 ಪಂದ್ಯಗಳನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಸೋತಿರುವುದು ಕೇವಲ ಒಂದು ಬಾರಿ ಮಾತ್ರ.
ಅಂದರೆ ಟೀಮ್ ಇಂಡಿಯಾ 350+ ರನ್ಗಳ ಗುರಿ ನೀಡಿ ಸೋತಿರುವುದು ಕೇವಲ ಒಮ್ಮೆ ಮಾತ್ರ. ಇದೀಗ ಇಂಗ್ಲೆಂಡ್ ಮುಂದಿರುವ ಗುರಿ 371 ರನ್ಗಳು. ಇತ್ತ ಟೆಸ್ಟ್ ಇತಿಹಾಸದಲ್ಲಿ 350+ ರನ್ಗಳ ಟಾರ್ಗೆಟ್ ನೀಡಿ ಒಮ್ಮೆ ಮಾತ್ರ ಸೋತಿರುವ ಭಾರತ ತಂಡದಿಂದ ಲೀಡ್ಸ್ನಲ್ಲೂ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹದು. ಈ ಭರ್ಜರಿ ಪ್ರದರ್ಶನದೊಂದಿಗೆ ಟೀಮ್ ಇಂಡಿಯಾ ಬೌಲರ್ಗಳು ಆಂಗ್ಲರನ್ನು ಕಟ್ಟಿ ಹಾಕಲಿದ್ದಾರಾ ಕಾದು ನೋಡಬೇಕಿದೆ.
ಇದನ್ನೂ ಓದಿ: RCB ಕೋಚ್ನ ವಿಶ್ವ ದಾಖಲೆ ಸರಿಗಟ್ಟಿದ ರಿಷಭ್ ಪಂತ್
ಫೈನಲ್ ಪಾಯಿಂಟ್ಸ್:
- ಲೀಡ್ಸ್ನ ಹೆಡಿಂಗ್ಲೆ ಮೈದಾನದಲ್ಲಿ 370+ ಸ್ಕೋರ್ ಚೇಸ್ ಮಾಡಿ ಗೆದ್ದಿರುವುದು ಒಮ್ಮೆ ಮಾತ್ರ.
- ಟೀಮ್ ಇಂಡಿಯಾ 350+ ರನ್ಗಳ ಗುರಿ ನೀಡಿ ಸೋತಿರುವುದು ಕೇವಲ ಒಮ್ಮೆ ಮಾತ್ರ.
- ಇಂಗ್ಲೆಂಡ್ ತಂಡದ ಮುಂದಿರುವ ಗುರಿ 371 ರನ್ಗಳು.