ಲೀಡ್ಸ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ (Team India) 6 ರನ್‌ಗಳ ಮುನ್ನಡೆ ಸಾಧಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 471 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ, ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 465 ರನ್‌ಗಳಿಗೆ ಆಲೌಟ್ ಆಯಿತು. ಈ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡ ಜಸ್ಪ್ರೀತ್ ಬುಮ್ರಾ (Jasprit Bumrah) ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ, ಆಂಗ್ಲರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಅಲ್ಲದೆ ತಮ್ಮ ಹೆಸರಿನಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಿದರು. ಗಮನಿಸಬೇಕಾದ ಅಂಶವೆಂದರೆ ಈ ಮೊದಲು ಯಾವುದೇ ಏಷ್ಯಾದ ಬೌಲರ್ಗೂ ಮಾಡಲು ಸಾಧ್ಯವಾಗದ ಸಾಧನೆಯನ್ನು ಬುಮ್ರಾ ಇಂದಿನ ಪಂದ್ಯದಲ್ಲಿ ಮಾಡಿದ್ದಾರೆ.
ಬುಮ್ರಾ ಐತಿಹಾಸಿಕ ಸಾಧನೆ
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ 5 ವಿಕೆಟ್ ಗೊಂಚಲು ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಈ 5 ವಿಕೆಟ್ಗಳ ಮೂಲಕ ಬುಮ್ರಾ, ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ 150 ಟೆಸ್ಟ್ ವಿಕೆಟ್ ಪಡೆದ ಮೊದಲ ಏಷ್ಯನ್ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲೀಡ್ಸ್ ಟೆಸ್ಟ್‌ನಲ್ಲಿ ಬುಮ್ರಾ ವಿಕೆಟ್ ಪಡೆದಿದ್ದಲ್ಲದೆ, ತಮ್ಮ ವೇಗ ಮತ್ತು ನಿಖರತೆಯಿಂದ ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೊಳಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಒಟ್ಟು 24.4 ಓವರ್‌ಗಳನ್ನು ಬೌಲ್ ಮಾಡಿ 83 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದರು. ಮೊದಲ ಓವರ್‌ನಲ್ಲಿಯೇ ಜ್ಯಾಕ್ ಕ್ರೌಲಿಯನ್ನು ಔಟ್ ಮಾಡುವ ಮೂಲಕ ಬುಮ್ರಾ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇದಾದ ನಂತರ, ಅವರು ಬೆನ್ ಡಕೆಟ್ ಅವರನ್ನು ಸಹ ಬಲಿಪಶುವನ್ನಾಗಿ ಮಾಡಿದರು. ಆ ಬಳಿಕ ಟೆಸ್ಟ್‌ನಲ್ಲಿ 10 ನೇ ಬಾರಿಗೆ ಜೋ ರೂಟ್ ಅವರನ್ನು ಔಟ್ ಮಾಡಿದ ಸಾಧನೆಯನ್ನು ಮಾಡಿದರು. ಇದಾದ ನಂತರ, ಅವರು ಕ್ರಿಸ್ ವೋಕ್ಸ್ ಮತ್ತು ಜೋಶ್ ಟಂಗ್ ಅವರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಇಂಗ್ಲೆಂಡ್ ಇನ್ನಿಂಗ್ಸ್ ಅನ್ನು ಕೊನೆಗೊಳಿಸಿದರು.
IND vs ENG: 62, 102, 99..; ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ದುಬಾರಿ ಉಡುಗೊರೆ
ಕಪಿಲ್ ದಾಖಲೆಯನ್ನು ಸರಿಗಟ್ಟಿದ ಬುಮ್ರಾ
ಲೀಡ್ಸ್ ಟೆಸ್ಟ್‌ನಲ್ಲಿ 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಬುಮ್ರಾ, ಇಂಗ್ಲೆಂಡ್‌ನ ಬ್ಯಾಟಿಂಗ್ ಅನ್ನು ನಾಶಪಡಿಸಿದ್ದಲ್ಲದೆ, SENA ದೇಶಗಳಲ್ಲಿ ಅತಿ ಹೆಚ್ಚು 5 ವಿಕೆಟ್‌ಗಳನ್ನು ಪಡೆದ ಏಷ್ಯನ್ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನವನ್ನು ಪಡೆದರು. ಬುಮ್ರಾ 10 ನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಮತ್ತೊಂದೆಡೆ, ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು 5 ವಿಕೆಟ್‌ಗಳನ್ನು ಪಡೆದವರ ಬಗ್ಗೆ ಮಾತನಾಡಿದರೆ, ಬುಮ್ರಾ 64 ಇನ್ನಿಂಗ್ಸ್‌ಗಳಲ್ಲಿ 12 ಬಾರಿ ಈ ಸಾಧನೆ ಮಾಡಿದ್ದಾರೆ. ಈ ಮೂಲಕ ಬುಮ್ರಾ ಈ ವಿಚಾರದಲ್ಲಿ ಕಪಿಲ್ ದೇವ್ (108 ಇನ್ನಿಂಗ್ಸ್‌ಗಳಲ್ಲಿ 12) ಅವರೊಂದಿಗೆ ಜಂಟಿಯಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 9:54 pm, Sun, 22 June 25