IND vs ENG: 62, 102, 99..; ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ದುಬಾರಿ ಉಡುಗೊರೆ

IND vs ENG: 62, 102, 99..; ಕ್ಯಾಚ್ ಕೈಚೆಲ್ಲಿದ್ದಕ್ಕೆ ಟೀಂ ಇಂಡಿಯಾಕ್ಕೆ ಸಿಕ್ಕ ದುಬಾರಿ ಉಡುಗೊರೆ


ಕ್ರಿಕೆಟ್​ನಲ್ಲಿ ಉತ್ತಮ ಫೀಲ್ಡಿಂಗ್ ಎಷ್ಟು ಮುಖ್ಯ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್‌ (India vs England) ನಡುವಿನ ಟೆಸ್ಟ್ ಪಂದ್ಯವನ್ನು ತೆಗೆದುಕೊಳ್ಳಬಹುದು. ಒಂದೆಡೆ ಆತಿಥೇಯ ಇಂಗ್ಲೆಂಡ್‌ ತಂಡ ತನ್ನ ಅತ್ಯಧ್ಬುತ ಫೀಲ್ಡಿಂಗ್ ಮೂಲಕ ಟೀಂ ಇಂಡಿಯಾವನ್ನು (Team India) ಕಟ್ಟಿಹಾಕಿದರೆ, ಇನ್ನೊಂದೆಡೆ ಟೀಂ ಇಂಡಿಯಾ ತನ್ನ ಅತ್ಯಂತ ಹೀನಾಯ ಫೀಲ್ಡಿಂಗ್ ಮೂಲಕ ಮೊದಲ ಟೆಸ್ಟ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಒಂದಲ್ಲ, ಎರಡಲ್ಲ,, ಬರೋಬ್ಬರಿ 5 ಕ್ಕೂ ಹೆಚ್ಚು ಕ್ಯಾಚ್​ಗಳನ್ನು ಕೈಚೆಲ್ಲಿದ್ದು, ಇದರ ಪರಿಣಾಮವಾಗಿ ಬರೋಬ್ಬರಿ 260 ಕ್ಕೂ ಹೆಚ್ಚು ರನ್​ಗಳನ್ನು ದಂಡವಾಗಿ ಬಿಟ್ಟುಕೊಟ್ಟಿದೆ.

ಡಕೆಟ್​ಗೆ 2 ಜೀವದಾನ

ಪಂದ್ಯದ ಎರಡನೇ ದಿನದಿಂದಲೇ ಆರಂಭವಾದ ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್ ಮೂರನೇ ದಿನದಾಟದಲ್ಲೂ ಮುಂದುವರೆದಿದೆ. ಮೊದಲ ದಿನದಾಟದಲ್ಲಿ ಇಂಗ್ಲೆಂಡ್‌ ಆರಂಭಿಕ ಬೆನ್ ಡಕೆಟ್ ಅವರ ಎರಡು ಕ್ಯಾಚ್​ಗಳನ್ನು ಟೀಂ ಇಂಡಿಯಾ ಕೈಚೆಲ್ಲಿತು. ಮೊದಲ ಕ್ಯಾಚ್ ಜೈಸ್ವಾಲ್​ ಕೈಯಿಂದ ಜಾರಿದರೆ, ಎರಡನೇ ಕ್ಯಾಚ್ ಅತ್ಯುತ್ತಮ ಫೀಲ್ಡರ್​ಗಳಲ್ಲಿ ಒಬ್ಬರಾಗಿರುವ ಜಡೇಜಾ ಅವರ ಕೈಯಿಂದ ಜಾರಿತು. ಇದರ ಲಾಭ ಪಡೆದ ಡಕೆಟ್ 62 ರನ್​ಗಳ ಇನ್ನಿಂಗ್ಸ್ ಆಡಿದರು.

ಓಲಿ ಪೋಪ್​ಗೂ ಜೀವದಾನ

ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್​ ಇಲ್ಲಿಗೆ ನಿಲ್ಲಲಿಲ್ಲ. ಓಲಿ ಪೋಪ್ ಅವರಿಗೂ ಜೀವದಾನ ಸಿಕ್ಕಿತು. ಪೋಪ್ ಅರ್ಧಶತಕ ಸಿಡಿಸುವುದಕ್ಕೂ ಮುನ್ನ ನೀಡಿದ ಅವಕಾಶಗಳನ್ನು ಟೀಂ ಇಂಡಿಯಾ ಕೈಚೆಲ್ಲಿತು. ಇದರ ಲಾಭ ಪಡೆದ ಪೋಪ್ 50 ರನ್ ಪೂರೈಸಿದರು. ಇಲ್ಲಿ ಮತ್ತೊಮ್ಮೆ ಕಳನಾಯಕನಾದ ಜೈಸ್ವಾಲ್, ಪೋಪ್ 62 ರನ್ ಬಾರಿಸಿ ಆಡುತ್ತಿದ್ದಾಗ ನೀಡಿದ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರ ಲಾಭವನ್ನು ಸಂಪೂರ್ಣವಾಗಿ ಬಳಸಿಕೊಂಡ ಪೋಪ್ 101 ರನ್​ಗಳ ಇನ್ನಿಂಗ್ಸ್ ಆಡಿದರು. ಅಂತಿಮವಾಗಿ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್​ಗೆ ಕ್ಯಾಚಿತ್ತು ನಿರ್ಗಮಿಸಿದರು.

ಹ್ಯಾರಿ ಬ್ರೂಕ್​ಗೆ 3 ಜೀವದಾನ

ಮೇಲಿನವು ಫೀಲ್ಡರ್‌ಗಳು ಮಾಡಿದ ತಪ್ಪಿನಿಂದ ಭಾರತಕ್ಕೆ ಹೊರೆಯಾದರೆ, ವೇಗಿ ಜಸ್ಪ್ರೀತ್ ಬುಮ್ರಾ ಮಾಡಿದ ಅದೊಂದು ನೋ ಬಾಲ್ ತಂಡಕ್ಕೆ 99 ರನ್​ಗಳ ಭಾರಿ ಹೊಡೆತ ನೀಡಿತು. ವಾಸ್ತವವಾಗಿ ಎರಡನೇ ದಿನದಾಟದಂತ್ಯಕ್ಕೂ ಮುನ್ನ ಕೊನೆಯ ಓವರ್ ಎಸೆಯುತ್ತಿದ್ದ ಬುಮ್ರಾ, ಆಗ ತಾನೇ ಬ್ಯಾಟಿಂಗ್​ಗೆ ಬಂದಿದ್ದ ಬ್ರೂಕ್​ ಅವರನ್ನು ಸೊನ್ನೆಗೆ ಔಟ್ ಮಾಡಿದ್ದರು. ಆದರೆ ಬುಮ್ರಾ ಎಸೆದ ಆ ಚೆಂಡು ನೋ ಬಾಲ್ ಆಗಿತ್ತು. ಹೀಗಾಗಿ ಬ್ರೂಕ್ ಸೊನ್ನೆಗೆ ಔಟಾಗುವುದರಿಂದ ಪಾರಾದರು.

IND vs ENG: 465 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; ಭಾರತಕ್ಕೆ ಒಂದಂಕಿ ಮೊತ್ತದ ಮುನ್ನಡೆ

ಆ ನಂತರ ಬ್ರೂಕ್ 46 ರನ್ ಬಾರಿಸಿ ಆಡುತ್ತಿದ್ದಾಗ ವಿಕೆಟ್‌ಕೀಪರ್ ಪಂತ್​ಗೆ ಕ್ಯಾಚ್ ನೀಡಿದ್ದರು. ಆದರೆ ಪಂತ್ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು. ಇದು ಸಾಲದೆಂಬಂತೆ ಮೂರನೇ ಬಾರಿಗೆ ಮತ್ತೊಂದು ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್​, ಬ್ರೂಕ್​ಗೆ 3ನೇ ಜೀವದಾನ ನೀಡಿದರು. ಬ್ರೂಕ್ 82 ರನ್ ಬಾರಿಸಿ ಆಡುತ್ತಿದ್ದಾಗ ಸ್ಲಿಪ್​ನಲ್ಲಿ ನಿಂತಿದ್ದ ಜೈಸ್ವಾಲ್​ಗೆ ಕ್ಯಾಚ್ ನೀಡಿದರು. ಆದರೆ ಈ ಕ್ಯಾಚ್ ಅನ್ನೂ ಜೈಸ್ವಾಲ್ ಹಿಡಿಯಲಿಲ್ಲ. ಅಂತಿಮವಾಗಿ ಬ್ರೂಕ್ 99 ರನ್ ಬಾರಿಸಿ ವೇಗಿ ಪ್ರಸಿದ್ಧ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಶಾರ್ದೂಲ್​ಗೆ ಕ್ಯಾಚಿತ್ತು ನಿರ್ಗಮಿಸಿದರು. ಒಟ್ಟಾರೆ ಟೀಂ ಇಂಡಿಯಾ ಮಾಡಿದ ಕಳಪೆ ಫೀಲ್ಡಿಂಗ್​ನಿಂದ ತಂಡಕ್ಕೆ 263 ರನ್​ಗಳ ದಂಡದ ಬರೆ ಬಿದ್ದಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *