ಮಂಡ್ಯ, ಜೂನ್ 27: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ (KRS Dam) ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿ ದಾಖಲೆ ಬರೆದಿದೆ. ಇದರೊಂದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೂ ದಾಖಲೆಯೊಂದನ್ನು ಬರೆಯುವ ಅವಕಾಶ ಒದಗಿಬಂದಿದೆ. ಮುಂದಿನ 3 ದಿನಗಳ ಒಳಗಾಗಿ ಬಾಗಿನ ಅರ್ಪಿಸಿದರೆ, ಜೂನ್ ತಿಂಗಳಲ್ಲಿಯೇ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ. ಜೂನ್ನಲ್ಲೇ ಬಾಗಿನ ಅರ್ಪಿಸುವ ಅವಕಾಶ ಈವರೆಗೆ ಯಾವ ಮುಖ್ಯಮಂತ್ರಿಗೂ ದೊರೆತಿಲ್ಲ.
1979 ರಿಂದ ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿ ಆರಂಭವಾಗಿದೆ. ಮೊದಲ ಬಾರಿಗೆ ಡಿ. ದೇವರಾಜ ಅರಸ್ ಬಾಗಿನ ಅರ್ಪಿಸುವ ಮೂಲಕ ಆ ಪದ್ದಗೆ ನಾಂದಿ ಹಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಯಾವೊಬ್ಬ ಮುಖ್ಯಮಂತ್ರಿಗೂ ಜೂನ್ನಲ್ಲಿ ಬಾಗಿನ ಅರ್ಪಿಸುವ ಅವಕಾಶ ಸಿಕ್ಕಿಲ್ಲ.
ಜುಲೈ, ಆಗಸ್ಟ್ನಲ್ಲಿ ಭರ್ತಿಯಾಗುತ್ತಿದ್ದ ಕೆಆರ್ಎಸ್ ಡ್ಯಾಂ
ಸಾಮಾನ್ಯವಾಗಿ ಕೆಆರ್ಎಸ್ ಡ್ಯಾಂ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ವರ್ಷ ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದೆ.
ಇದನ್ನೂ ಓದಿ
ಈ ವರ್ಷ ಅವಧಿಪೂರ್ವ ಮುಂಗಾರು ಮಳೆಯ ಕಾರಣ, ಜೂನ್ ಆರಂಭದಲ್ಲೇ ಡ್ಯಾಂ ನೀರಿನ ಮಟ್ಟ 100 ಅಡಿ ದಾಟುವ ಮೂಲಕ ದಾಖಲೆ ಬರೆದಿತ್ತು. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದ ನೀರಿನ ಮಟ್ಟ ಮೇ ಕೊನೆಯ ವಾರದಲ್ಲೇ 98 ಅಡಿ ತಲುಪಿತ್ತು. ಆ ಸಂದರ್ಭದಲ್ಲೇ ಕೆಆರ್ಎಸ್ ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್ ನೀರು ಒಳಹರಿವು ಇತ್ತು. ಹಾಗಾಗಿ ಡ್ಯಾಂನಿಂದ 630 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ಅವಧಿಗೂ ಮುನ್ನವೇ ತುಂಬುತ್ತಿದೆ ಕೆಆರ್ಎಸ್ ಡ್ಯಾಂ: ಭರ್ತಿಯಾಗಲು 9 ಅಡಿ ಅಷ್ಟೇ ಬಾಕಿ
ಸಾಮಾನ್ಯವಾಗಿ ಕೆಆರ್ಎಸ್ ಜಲಾಶಯದಲ್ಲಿ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಮಾತ್ರ ನೀರಿನ ಮಟ್ಟ 100 ಅಡಿ ದಾಟುತ್ತದೆ. ಈ ವರ್ಷ ಜೂನ್ 15 ರಂದೇ ಡ್ಯಾಂ ನೀರಿನ ಮಟ್ಟ 115.78 ಅಡಿ ತಲುಪಿತ್ತು. ಅದಾದ ಹತ್ತು ದಿನಗಳಲ್ಲಿ ಇದೀಗ ಗರಿಷ್ಠ ಮಟ್ಟ ತಲುಪಿದೆ. ವಿಶೇಷವೆಂದರೆ, ಈ ಬಾರಿ ಜೂನ್ ಕೊನೆಯ ವಾರವೇ ಡ್ಯಾಂ ಭರ್ತಿಯಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 10:15 am, Fri, 27 June 25