ಸದಾ ಹಿಂದೂ ದೇವಾಲಯಗಳಿಗೆ ಹೋಗುತ್ತಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಸಾರಾ ಅಲಿ ಖಾನ್, ಇದೀಗ ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತನಾಡಿ ಸದ್ದು ಮಾಡುತ್ತಿದ್ದಾರೆ. ನಟಿ ಹೇಳಿದ್ದೇನು?
ನಟಿ ಸೈಫ್ ಅಲಿ ಖಾನ್ ಮೊದಲ ಪತ್ನಿಯ ಪುತ್ರಿ, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಅವರು, ‘ಮೆಟ್ರೋ ಇನ್ ದಿನೋ’ (Metro in Dino) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಪ್ರಚಾರದಲ್ಲಿ ತೊಡಗಿದ್ದಾರೆ. ಹಲವು ಊರುಗಳಲ್ಲಿ ಇವರು ಪ್ರಚಾರ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ನಟ ಆದಿತ್ಯ ರಾಯ್ ಕಪೂರ್ ಜೊತೆ ಜೋಡಿಯಾಗಿದ್ದಾರೆ ಸಾರಾ ಅಲಿ ಖಾನ್. ಮೊನ್ನೆ ಪ್ರಚಾರದ ನಿಮಿತ್ತ ಬೆಂಗಳೂರಿಗೂ ಬಂದಿದ್ದ ನಟಿ, ಕನ್ನಡದಲ್ಲಿಯೇ ಮಾತನಾಡಿ ಬೆರಗು ಮೂಡಿಸಿದ್ದಾರೆ. ಸಾಮಾನ್ಯವಾಗಿ ಹೀಗೆ ಪ್ರಚಾರಕ್ಕೆ ಬರುವವರು ಒಂದೆರಡು ಲೈನ್ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿ ಅಲ್ಲಿಯ ಜನರನ್ನು ಅಟ್ರಾಕ್ಟ್ ಮಾಡುವುದು ಹೊಸ ವಿಷಯವೇನಲ್ಲ. ಈ ಟ್ರಿಕ್ಸ್ ಅನ್ನು ರಾಜಕಾರಣಿಗಳೂ ಮಾಡುತ್ತಾರೆ. ಆದರೆ ಬೇರೊಂದು ಭಾಷೆಯಲ್ಲಿ ಮಾತನಾಡುವಾಗ ಅದು ಅಷ್ಟು ಸ್ಪಷ್ಟವಾಗಿ ಇರುವುದಿಲ್ಲ, ಆದರೆ, ನಟಿ ಸಾರಾ ಅಲಿ ಖಾನ್ ಒಂದೆರಡು ಬಾರಿ ಸ್ಲೋ ಆಗಿ ಹೇಳಿ ಬಳಿಕ ಸ್ಪಷ್ಟವಾಗಿ ಮಾತನಾಡಿದ್ದಾರೆ.
ಅಷ್ಟಕ್ಕೂ ಅವರು ಮಾತನಾಡಿದ್ದು, ನಮಸ್ಕಾರ ಬೆಂಗಳೂರು ಹೇಗಿದ್ದೀರಾ ಎಂದು ಕೇಳಿದ್ದಾರೆ. ಬಾಲಿವುಡ್ ನಟಿಯ ಬಾಯಲ್ಲಿ ಈ ಮಾತನ್ನು ಕೇಳುತ್ತಲೇ ಕನ್ನಡಿಗರು ಪುಳಕಿತರಾಗಿದ್ದಾರೆ. ಇನ್ನು ‘ಮೆಟ್ರೋ ಇನ್ ದಿನೋ’ ಸಿನಿಮಾದ ಕುರಿತು ಹೇಳುವುದಾದರೆ, ಈ ಸಿನಿಮಾಗೆ ಅನುರಾಗ್ ಬಸು ನಿರ್ದೇಶನ ಮಾಡಿದ್ದಾರೆ. ಪ್ರೀತಮ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಲ್ಕು ಬೇರೆ ಬೇರೆ ಕಥೆಗಳನ್ನು ಈ ಸಿನಿಮಾ ಹೊಂದಿದೆ ಎನ್ನಲಾಗಿದೆ. ಈ ಕುರಿತು ಚಿತ್ರತಂಡ ಹೇಳಿದ್ದು, ‘ಪ್ರತಿಯೊಂದು ಕಥೆಯು ಪ್ರೀತಿ, ನಿಷ್ಠೆ ಹಾಗೂ ಆಧುನಿಕ ಸಂಬಂಧಗಳ ಭಾವನಾತ್ಮಕ ಏರಿಳಿತಗಳನ್ನು ಅನಾವರಣ ಮಾಡುತ್ತದೆ. ಹಾಸ್ಯಮಯವಾದರೂ ಹೃದಯಸ್ಪರ್ಶಿ ನಿರೂಪಣಾ ಶೈಲಿ ಈ ಸಿನಿಮಾದಲ್ಲಿದೆ’ ಎಂದಿದೆ.
ಬೆಂಗಳೂರಿಗೆ ಬಂದ ಆದಿತ್ಯ ರಾಯ್ ಕಪೂರ್ ಮತ್ತು ಸಾರಾ ಅಲಿ ಖಾನ್ ಅವರ ಜೊತೆ ಗಾಯಕ ಶಾಶ್ವತ್ ಸಿಂಗ್ ಕೂಡ ಬಂದಿದ್ದರು. ಇನ್ನು ಸಿನಿಮಾದಲ್ಲಿ, ಪಂಕಜ್ ತ್ರಿಪಾಠಿ, ಅಲಿ ಫಜಲ್, ಕೊಂಕಣಾ ಸೇನ್ ಶರ್ಮಾ, ಫಾತಿಮಾ ಸನಾ ಶೇಖ್, ನೀನಾ ಗುಪ್ತಾ, ಅನುಪಮ್ ಖೇರ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ‘ಮೆಟ್ರೋ ಇನ್ ದಿನೋ’ ಬರುವ ಜುಲೈ 4ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. 2007ರಲ್ಲಿ ಅನುರಾಗ್ ಬಸು ಅವರದ್ದೇ ನಿರ್ದೇಶನದಲ್ಲಿ ‘ಲೈಫ್ ಇನ್ ಎ ಮೆಟ್ರೋ’ ಸಿನಿಮಾ ಬಿಡುಗಡೆ ಆಗಿತ್ತು. ಆ ಚಿತ್ರದ ಥೀಮ್ನಲ್ಲಿಯೇ ‘ಮೆಟ್ರೋ ಇನ್ ದಿನೋ’ ಸಿನಿಮಾ ಮೂಡಿಬಂದಿದೆ ಎನ್ನಲಾಗುತ್ತಿದೆ. ಇದೇ ವೇಳೆ ನಟಿ ಸಾರಾ ಅಲಿ ಖಾನ್, ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅಬ್ಬಬ್ಬಾ ಎಂದಿದ್ದಾರೆ. ಸಿಕ್ಕಾಪಟ್ಟೆ ಟ್ರಾಫಿಕ್ ಇದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ‘ಮೆಟ್ರೋ ಇನ್ ದಿನೋ’ ಚಿತ್ರ ಒಂದು ಸಿನಿಮಾಕ್ಕಿಂತ ಶ್ರೇಷ್ಠವಾದದ್ದು ಎಂದು ಈ ಹಿಂದೆ ನಿರ್ದೇಶಕರು ಬಣ್ಣಿಸಿದ್ದಾರೆ. ಇದು ನಗರ ಜೀವನದ ಆತುರದ ವೇಗದಲ್ಲಿ ಸುಲಭವಾಗಿ ಮರೆಯಾಗುವ ಜನರು, ಕಥೆಗಳು ಮತ್ತು ಕ್ಷಣಗಳಿಗೊಂದು ಹೃದಯಸ್ಪರ್ಶಿ ಗೌರವ ಎನ್ನುತ್ತದೆ ತಂಡ. ಭಾವನೆಗಳ ಶ್ರೀಮಂತಿಕೆ, ಮನಮುಟ್ಟುವ ಪಾತ್ರಗಳು ಮತ್ತು ವಿಭಿನ್ನ ಕಥೆಗಳೊಂದಿಗೆ, ಈ ಚಿತ್ರವು ಎಲ್ಲಾ ವಯೋಮಾನದವರಿಗೂ ಹೃದಯಸ್ಪರ್ಶಿ ಅನುಭವ ನೀಡುತ್ತದೆ ಎಂದಿದ್ದಾರೆ.
ಅಷ್ಟಕ್ಕೂ ಸಾರಾ ಅಲಿ ಖಾನ್ ಸದಾ ಸುದ್ದಿಯಲ್ಲಿ ಇರುವುದು ಹಿಂದೂ ದೇವಾಲಯಗಳಿಗೆ ಭೇಟಿ ಕೊಡುವುದರಿಂದ. ಕೆಲ ತಿಂಗಳ ಹಿಂದೆ ಇವರ ಅಮರನಾಥ ಯಾತ್ರೆ ಕೈಗೊಂಡಿದ್ದರು. ‘ಹರ ಹರ ಮಹದೇವ’ ಎಂದು ಜೈಕಾರ ಕೂಗಿದ್ದರು, ಈ ಮಾತನ್ನು ಕೇಳಿ ಕೆಲವರು ಕಿಡಿ ಕಾರುತ್ತಿದ್ದರೆ, ಇನ್ನು ಕೆಲವರು ನೀವೂ ಹಿಂದೂ ಧರ್ಮಕ್ಕೆ ಬಂದು ಬಿಡಿ ಎಂದಿದ್ದರು. ಈಕೆಯ ಅಮ್ಮ ಕೂಡ ಹಿಂದೂ ಎನ್ನುವುದನ್ನು ಮರೆಯಬೇಡಿ ಎಂದಿದ್ದರು, ಇನ್ನು ಕೆಲವರು ಹಾಗೆ ನೋಡಿದರೆ ಹೆಚ್ಚಿನ ಮುಸ್ಲಿಂ ಜನರ ಪೂರ್ವಜರು ಹಿಂದೂಗಳೇ ಆಗಿರುತ್ತಾರೆ. ಆದ್ದರಿಂದ ಹಿಂದೂವಂಥ ಪವಿತ್ರ ಧರ್ಮವನ್ನು ನಿಮ್ಮದಾಗಿಸಿಕೊಳ್ಳಿ ಎಂದಿದ್ದರು. ಸಾರಾ ಅಲಿ ಖಾನ್ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಸಿನಿಮಾದ ಪ್ರಚಾರಕ್ಕಾಗಿ ಎಂದು ಕೆಲವರು ಟೀಕೆ ವ್ಯಕ್ತಪಡಿಸಿದ್ದೂ ಇದೆ. ಆದರೆ ಅಮರನಾಥ ಯಾತ್ರೆಗೆ ಹೋದ ಮೇಲೆ ಹಲವರು ಬಾಯಿ ಮುಚ್ಚಿದ್ದಾರೆ. ಅಂದಹಾಗೆ ವಿಕ್ಕಿ ಕೌಶಲ್ ಅವರ ಜೊತೆ ನಟಿ ಸಾರಾ ಅಲಿ ಖಾನ್ ನಟನೆಯ ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಸಕತ್ ಹಿಟ್ ಆಗಿದೆ. 87 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.