ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 17ರಿಂದ 23ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ನೀವಾಯಿತು ನಿಮ್ಮ ಪಾಡಾಯಿತು ಎಂದು ಇದ್ದುಬಿಡುವುದು ಉತ್ತಮ. ಇಬ್ಬರ ಮಧ್ಯೆ ಜಗಳವೋ ವಾಗ್ವಾದವೋ ಅಥವಾ ಮನಸ್ತಾಪ, ಅಭಿಪ್ರಾಯ ಭೇದವೋ ಇದೆ ಎಂದು ಗೊತ್ತಾದಾಗ ಅದನ್ನು ಬಗೆಹರಿಸುವುದಕ್ಕೆ ಅಂತಲೋ ಅಥವಾ ರಾಜೀ- ಸಂಧಾನ ಮಾಡಿಸುವುದಕ್ಕೆ ಅಂತಲೋ ಹೋಗಬೇಡಿ. ಏಕೆಂದರೆ ನಿಮ್ಮ ತೀರ್ಮಾನವನ್ನು ಅವರು ಒಪ್ಪುವುದಿಲ್ಲ ಹಾಗೂ ಜತೆಗೆ ಈ ಹಿಂದೆ ಬೇರೆ ಬೇರೆ ಸಂದರ್ಭಗಳಲ್ಲಿ ನೀವು ನಡೆದುಕೊಂಡ ರೀತಿಯನ್ನು ಎತ್ತಾಡುತ್ತಾರೆ. ಈ ವಾರ ನೀವು ಕಡ್ಡಾಯವಾಗಿ ಪಾಲಿಸಲೇಬೇಕಾದ ವಿಷಯ ಏನೆಂದರೆ, ಯಾವುದೇ ರಾಜೀ- ಪಂಚಾಯಿತಿಗಳನ್ನು ಮಾಡುವುದಕ್ಕೆ ಹೋಗಬೇಡಿ. ಇನ್ನು ಬ್ಯಾಂಕ್ ಅಥವಾ ಚೀಟಿ ಹಣಕ್ಕಾಗಿ ನೀವು ಜಾಮೀನಾಗಿ ನಿಲ್ಲುವಂತೆ ಕೇಳಿಕೊಳ್ಳುವ ಸಾಧ್ಯತೆಗಳಿವೆ. ಆಗ ಕೂಡ ನೀವು ಜಾಮೀನು ಹಾಕುವುದಕ್ಕೆ ಮುಂದಾಗದಿರುವುದು ಕ್ಷೇಮ. ಸ್ತ್ರೀಯರ ವಿಚಾರಕ್ಕೆ ಕುಟುಂಬದಲ್ಲಿ ನಿಮ್ಮ ಮೇಲೆ ವಿನಾಕಾರಣದ ಅಪವಾದಗಳು ಕೇಳಿಬರಲಿವೆ. ವಾಸ್ತವ ಸಂಗತಿ ಏನು ಎಂದು ನೀವು ಪ್ರಯತ್ನ ಪಟ್ಟರೂ ಅದನ್ನು ಕೇಳುವ ಸ್ಥಿತಿಯಲ್ಲಿ ಇತರರು ಇರುವುದಿಲ್ಲ. ಕುಟುಂಬ ಸದಸ್ಯರು ಸೇರಿ ನಿರ್ಧರಿಸಿರುವುದಕ್ಕೆ ಒಪ್ಪಿಗೆ ಸೂಚಿಸಲೇಬೇಕಾದ ಅನಿವಾರ್ಯಕ್ಕೆ ಸಿಲುಕಿಕೊಳ್ಳುತ್ತೀರಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅದು ಉಲ್ಬಣಿಸಿ, ಆತಂಕಕ್ಕೆ ಕಾರಣ ಆಗಲಿದೆ. ಕೃಷಿಕರು ಈಗಾಗಲೇ ಅಂದುಕೊಂಡಂತೆ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನು ಹಾಕಿಕೊಂಡ ಬಜೆಟ್ ನೊಳಗೆ ಕೆಲಸ ಮಾಡುವುದು ಸಹ ಕಷ್ಟವಾಗಲಿದೆ. ಇದರ ಜತೆಗೆ ನಿಮ್ಮ ಅಕ್ಕ-ಪಕ್ಕದ ಜಮೀನಿನವರ ಕೆಲಸಗಳನ್ನು ಸಹ ಒಪ್ಪಿಕೊಂಡಿರೋ ಕೈಯಾರೆ ದುಡ್ಡು ಹಾಕಿ, ಆ ಕೆಲಸವನ್ನು ಮುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಸೆಕೆಂಡ್ ಹ್ಯಾಂಡ್ ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಬೇಕು ಎಂದೇನಾದರೂ ಅಂದುಕೊಂಡಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸುವುದು ಒಳ್ಳೆಯದು. ಒಂದು ವೇಳೆ ಕೊಂಡುಕೊಂಡರೆ ಅದನ್ನು ಸರಿ ಮಾಡಿಸುವುದಕ್ಕೆ ಸಿಕ್ಕಾಪಟ್ಟೆ ಖರ್ಚಾಗಿ, ಇದರ ಬದಲಿಗೆ ಹೊಸದನ್ನೇ ಖರೀದಿಸಬಹುದಿತ್ತು ಎಂದೆನಿಸುತ್ತದೆ. ವೃತ್ತಿನಿರತರು ಹೊಸ ಡೆಸ್ಕ್ ಟಾಪ್, ಸರ್ವರ್, ಕುರ್ಚಿ- ಮೇಜು ಮೊದಲಾದವುಗಳನ್ನು ಖರೀದಿ ಮಾಡಬೇಕು ಎಂದುಕೊಳ್ಳಲಿದ್ದೀರಿ. ಯುಪಿಎಸ್, ಬ್ಯಾಟರಿ ಇಂಥವುಗಳನ್ನು ಸಹ ಕೊಳ್ಳುವಂಥ ಯೋಗ ನಿಮ್ಮ ಪಾಲಿಗೆ ಇದೆ. ಒಟ್ಟಾರೆ ಹೇಳಬೇಕು ಅಂದರೆ ವೃತ್ತಿ ಬದುಕಿಗೆ ಅಗತ್ಯ ಇರುವಂಥ ಸಲಕರಣೆಗಳನ್ನು ಖರೀದಿಸಲಿದ್ದೀರಿ. ವಿದ್ಯಾರ್ಥಿಗಳು ತಾವು ಮಾಡದ ತಪ್ಪಿಗೆ ಹಾಗೂ ಆಡದ ಮಾತಿಗೆ ಅಪವಾದವನ್ನು ಹೊರಬೇಕಾಗುತ್ತದೆ. ಇಂಥ ಸನ್ನಿವೇಶದಲ್ಲಿ ಆಪ್ತ ಸ್ನೇಹಿತರು- ಸ್ನೇಹಿತೆಯರು ಸಹ ನಿಮ್ಮ ನೆರವಿಗೆ ನಿಲ್ಲುವುದಿಲ್ಲ. ಇಷ್ಟು ಸಮಯ ಉಳಿಸಿಕೊಂಡು ಬಂದಿದ್ದ ಸ್ನೇಹ- ವಿಶ್ವಾಸ ಕರಗಿ ಹೋಗಬಹುದು. ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀವೇ ಹುಡುಕಿಕೊಳ್ಳಬೇಕು ಎಂಬಂತೆ ಸುತ್ತಮುತ್ತಲು ಇರುವವರು ವರ್ತಿಸಲಿದ್ದಾರೆ. ಮಹಿಳೆಯರಿಗೆ ತಾವು ಬಹಳ ಇಷ್ಟಪಟ್ಟು ಸಾಕಿದ ಸಾಕು ಪ್ರಾಣಿಗಳ ಅನಾರೋಗ್ಯವು ಬೇಸರ, ಚಿಂತೆಗೆ ಕಾರಣ ಆಗಲಿದೆ. ಸೂಕ್ತ ವೈದ್ಯೋಪಚಾರ ಮಾಡಿಸಲು ಸಾಧ್ಯವಾಗದೆ ಅಸಹಾಯಕರಾಗುತ್ತೀರಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮಗೆ ದೊರೆಯಬೇಕಾದದ್ದನ್ನು ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ. ಅದು ಹಣವೇ ಇರಬಹುದು, ಅವಕಾಶ ಇರಬಹುದು ಅಥವಾ ಗೌರವವೇ ಇರಬಹುದು. ಅದನ್ನು ಬಾಯಿ ಬಿಟ್ಟು ಕೇಳಿ ಪಡೆದುಕೊಳ್ಳುತ್ತೀರಿ. ನಿಮ್ಮ ಕೆಲಸವನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ನೀವು ಈ ಹಿಂದೆ ಒಟ್ಟಾಗಿ ಯಾರ ಜತೆಗೆ ಒಟ್ಟಾಗಿ ಕೆಲಸ ಮಾಡಿದವರು ಈ ವಾರ ನಿಮಗಾಗಿ ಅಂತಲೇ ಹೊಸ ಉದ್ಯೋಗದ ಆಫರ್ ತರುವ ಸಾಧ್ಯತೆ ಇದೆ. ಬಹಳ ಸಮಯದಿಂದ ನಿಮ್ಮ ಮನಸ್ಸನ್ನು ಕಾಡುತ್ತಿದ್ದ ವಿಷಯವೊಂದನ್ನು ಸಂಬಂಧಪಟ್ಟವರ ಬಳಿಯೇ ಪ್ರಸ್ತಾವ ಮಾಡಲಿದ್ದೀರಿ. ಇದಕ್ಕೂ ಮುನ್ನ ಗೊಂದಲ ಕಾಡಲಿದೆ. ಇನ್ನು ಇತರರ ವಯಕ್ತಿಕ ವಿಷಯಗಳ ಬಗ್ಗೆ ನಿಮಗೇನಾದರೂ ಆಕ್ಷೇಪಗಳು ಇದ್ದಲ್ಲಿ ಅಂಥದ್ದನ್ನು ಚರ್ಚಿಸದೇ ಇರುವುದು ಕ್ಷೇಮ. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಆ ಬಗ್ಗೆ ಪೋಸ್ಟ್ ಮಾಡಿದಿರೋ ದೊಡ್ಡ ಮಟ್ಟದ ಸಮಸ್ಯೆ ನಿಮಗೇ ಆಗುತ್ತದೆ. ನಿಮ್ಮಲ್ಲಿ ಯಾರು ವಿಲ್ಲಾ ಅಥವಾ ಹಾಲಿಡೇ ಹೋಮ್ ಥರದ್ದನ್ನು ಖರೀದಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದೀರಿ, ಅಂಥವರಿಗೆ ಅನುಕೂಲ ಆಗಲಿದೆ. ಹಣದ ವಿಚಾರಕ್ಕಾಗಿಯೇ ಇಲ್ಲಿಯ ತನಕ ಹಿನ್ನಡೆಯನ್ನೇನಾದರೂ ಅನುಭವಿಸುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ಕೃಷಿಕರಿಗೆ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮಲ್ಲಿ ಕೆಲವರಿಗೆ ತುರ್ತಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸಹ ಆಗುವ ಯೋಗ ಇದೆ. ಇನ್ನು ಈಗಾಗಲೇ ದೃಷ್ಟಿ ದೋಷದ ಕಾರಣಕ್ಕೆ ಕನ್ನಡಕವನ್ನು ಬಳಸುತ್ತಿದ್ದೀರಿ ಅಂತಾದಲ್ಲಿ ಕೆಲವು ಗೊಂದಲ ಏರ್ಪಟ್ಟು ಎರಡೆರಡು ಬಾರಿ ಕನ್ನಡಕ ಬದಲಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಗುತ್ತಿಗೆ ಒಪ್ಪಂದಗಳು, ಕೃಷಿ ಉತ್ಪನ್ನಗಳ ಮಾರಾಟ ಒಪ್ಪಂದಗಳನ್ನು ಏಕಾಏಕಿ ರದ್ದು ಮಾಡುವುದಕ್ಕೆ ಈ ವರೆಗೆ ನಿಮ್ಮ ಜತೆಗೆ ವ್ಯವಹಾರ ಮಾಡಿದವರು ಮುಂದಾಗುವ ಸಾಧ್ಯತೆ ಇದೆ. ಒಂದು ವೇಳೆ ಕಾಗದ- ಪತ್ರಗಳು ಮಾಡಿಕೊಂಡಿಲ್ಲ ಅಂತಾದಲ್ಲಿ, ಈ ವಾರದ ಶುರುವಿನಲ್ಲೇ ಮಾಡಿಕೊಳ್ಳುವುದು ಒಳ್ಳೆಯದು. ವೃತ್ತಿನಿರತರು ನಿಮ್ಮದೇ ವೃತ್ತಿಯಲ್ಲಿ ಇರುವವರ ಮತ್ಸರಕ್ಕೆ ಗುರಿ ಆಗುತ್ತೀರಿ. ನಿಮ್ಮ ಬಗ್ಗೆ ಅಪ್ರಚಾರ ಮಾಡುವ ಸಾಧ್ಯತೆಗಳು ಜಾಸ್ತಿ ಇವೆ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆಗಿದ್ದ ತಪ್ಪನ್ನು ಮುಂದೆ ಮಾಡಿಕೊಂಡು, ಹೆಸರನ್ನು ಹಾಳು ಮಾಡುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಕೆಲವು ಬೆಳವಣಿಗೆಗಳಿಂದ ನೀವು ಸಿಟ್ಟಿಗೆದ್ದು, ಆಡಬಾರದ ಮಾತನ್ನು ಆಡಿ, ವರ್ಚಸ್ಸಿಗೆ ಧಕ್ಕೆ ಮಾಡಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಕೂದಲಿನ ಹೊಟ್ಟಿನ ಸಮಸ್ಯೆ ತೀವ್ರ ಆಗಲಿದೆ. ಕೂದಲು ಉದುರುವ ಸಮಸ್ಯೆ ಅನುಭವಿಸುತ್ತಿದ್ದಲ್ಲಿ ಅದು ಮತ್ತಷ್ಟು ಜಾಸ್ತಿ ಆಗಲಿದೆ. ಕುಟುಂಬದ ಒಳಗೆ ನಡೆಯುವಂಥ ಕೆಲವು ಬೆಳವಣಿಗೆಗಳಿಂದ ಮಾನಸಿಕ ಖಿನ್ನತೆ ಕಾಡಲಿದೆ. ಮಹಿಳೆಯರಿಗೆ ಸಂಘ- ಸಂಸ್ಥೆಗಳಿಂದ ಸನ್ಮಾನ, ಸ್ಥಾನ- ಮಾನ, ಗೌರವ ಸಿಗುವಂಥ ಸಾಧ್ಯತೆಗಳಿವೆ. ಪ್ರತಿಷ್ಠಿತ ಸಂಸ್ಥೆಯೊಂದನ್ನು ಮುನ್ನಡೆಸುವಂಥ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಸಂತಾನ ಅಪೇಕ್ಷಿತರಿಗೆ ಶುಭ ಸಮಯ ಇದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಪ್ರಯಾಣದಿಂದ ದೇಹಾಲಸ್ಯ, ಆಯಾಸ, ಎಲ್ಲ ಕೆಲಸಗಳಲ್ಲೂ ಒಂದು ಬಗೆ ನಿರಾಸಕ್ತಿ ಕಾಡಲಿದೆ. ಈಗಾಗಲೇ ಮಾನಸಿಕ ಖಿನ್ನತೆ, ಆತಂಕ ಅಥವಾ ಬೇರೆ ಯಾವುದೇ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ವೈದ್ಯೋಪಚಾರ ಪಡೆಯುತ್ತಿದ್ದಲ್ಲಿ ಅದರ ಬಗ್ಗೆ ಸಮಾಧಾನ ಇಲ್ಲದ ಕಾರಣಕ್ಕೆ ಬೇರೆ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದಕ್ಕೆ ಮನಸ್ಸು ಮಾಡಲಿದ್ದೀರಿ. ಇನ್ನು ಕೆಲವು ಸ್ನೇಹಿತರ ವರ್ತನೆ ಬೇಸರ ಮೂಡಿಸಲಿದೆ. ಬ್ಯಾಂಕ್ ವ್ಯವಹಾರ ಮಾಡುತ್ತಿದ್ದೀರಿ, ಅದರಲ್ಲೂ ಕೆಲವು ಕಾಗದ- ಪತ್ರ, ದಾಖಲಾತಿಗಳನ್ನು ಹೊಂದಿಸುತ್ತಿದ್ದೀರಿ ಅಂತಾದಲ್ಲಿ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಖರ್ಚು- ವೆಚ್ಚ ಆಗಲಿದೆ. ಇದೇ ವೇಳೆ ಈ ಹಿಂದೆ ನಿಮ್ಮ ಜತೆಗೆ ವೈಮನಸ್ಯ ಮಾಡಿಕೊಂಡಿದ್ದ ವ್ಯಕ್ತಿಗಳು ನಿಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ, ಸಾಲ ನೀಡಿದಲ್ಲಿ ವಾಪಸ್ ಕೊಡುವ ಸ್ಥಿತಿಯಲ್ಲಿ ಇಲ್ಲ ಎಂದು ಅಪಪ್ರಚಾರ ಮಾಡುವ ಅವಕಾಶಗಳಿವೆ. ಆದ್ದರಿಂದ ಒಂದೋ ನಿಮ್ಮ ಪ್ರಯತ್ನಗಳನ್ನು ರಹಸ್ಯವಾಗಿ ಇರಿಸಿಕೊಳ್ಳಿ. ಇಲ್ಲದಿದ್ದರೆ ಪೂರ್ತಿಯಾಗಿ ಪ್ರೊಸೆಸ್ ಆಗಿ, ಕೈಗೆ ಹಣ ಬರುವ ಮೊದಲು ಯಾರಿಗೂ ಹೇಳುವುದಕ್ಕೆ ಹೋಗಬೇಡಿ. ಅತಿ ಉತ್ಸಾಹದಿಂದ ಅಥವಾ ನಿಮ್ಮ ವಿರೋಧಿಗಳಿಗೆ ಟಾಂಗ್ ಕೊಡುವ ಮನಸ್ಥಿತಿಯಿಂದ ಏನಾದರೂ ಮುಂಚೆಯೇ ಎಲ್ಲವನ್ನೂ ಹೇಳಿದರೋ ಆ ಕೆಲಸ ಪೂರ್ತಿ ಆಗದೆ ಅವಮಾನದ ಪಾಲಾಗುತ್ತೀರಿ. ಕೃಷಿಕರಿಗೆ ಫಸಲು ಕೈ ಕೊಟ್ಟು, ನಷ್ಟ ಅನುಭವಿಸುವಂತಾಗುತ್ತದೆ. ಕಳಪೆ ಗುಣಮಟ್ಟದ ಬೀಜ, ಗೊಬ್ಬರ ಅಥವಾ ಮತ್ಯಾವುದಾದರೂ ರಾಸಾಯನಿಕವನ್ನು ನಿಮ್ಮ ಅರಿವಿಗೆ ಬಾರದೆ ಬಳಸುವುದರಿಂದ ಒಂದಿಷ್ಟು ನಷ್ಟವನ್ನು ಕಾಣುವಂತಾಗುತ್ತದೆ. ನಿಮಗೆ ಪೂರ್ತಿಯಾಗಿ ಮಾಹಿತಿ ಇಲ್ಲದ ವಿಚಾರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅನುಭವಿಗಳು, ತಿಳಿವಳಿಕಸ್ಥರ ಜತೆಗೆ ಮಾತುಕತೆ ನಡೆಸುವುದು ಉತ್ತಮ. ವೃತ್ತಿನಿರತರು ಸ್ವಂತ ಸ್ಥಳದಲ್ಲಿ ಕಚೇರಿ ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅಥವಾ ಈಗ ಇರುವಂಥ ಬಾಡಿಗೆ ಕಚೇರಿಯನ್ನೇ ಖರೀದಿಸಬಹುದು ಅಥವಾ ಲೀಸ್ ಗೆ ಪಡೆಯುವ ಸಾಧ್ಯತೆಗಳು ಸಹ ಇವೆ. ಇದಕ್ಕಾಗಿ ಸಂಬಂಧಿಕರು, ಸ್ನೇಹಿತರ ಬಳಿಯಲ್ಲೇ ಸಾಲ ಮಾಡುವುದಕ್ಕೆ ಮುಂದಾಗಲಿದ್ದೀರಿ. ಅಥವಾ ನಿಮ್ಮ ಬಳಿ ಇರುವಂಥ ಭೂಮಿ, ಒಡವೆಗಳನ್ನು ಮಾರುವುದಕ್ಕೆ ಸಹ ಯೋಚನೆ ಮಾಡುತ್ತೀರಿ. ಸೋದರ ಸಂಬಂಧಿಗಳ ಮನೆಯಲ್ಲಿ ನಡೆಯುವಂಥ ಶುಭ ಸಮಾರಂಭಗಳಿಗೆ ಓಡಾಟ ನಡೆಸಲಿದ್ದೀರಿ. ವಿದ್ಯಾರ್ಥಿಗಳು ನಿಮ್ಮದೇ ನಿರ್ಲಕ್ಷ್ಯದಿಂದ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಳ್ಳುವ ಅಥವಾ ಅದನ್ನು ಬೇರೆ ಯಾರೋ ಕಳುವು ಮಾಡುವಂಥ ಸಾಧ್ಯತೆಗಳಿವೆ. ಒಂದು ವೇಳೆ ನೀವು ಬೇರೆಯವರ ವಸ್ತುಗಳನ್ನು ಕೇಳಿ, ಪಡೆದುಕೊಂಡು ಬಂದು ಬಳಸುತ್ತಿದ್ದೀರಿ ಅಂತಾದಲ್ಲಿ ಹೆಚ್ಚು ಜಾಗ್ರತೆಯನ್ನು ವಹಿಸಿ. ಸಾರ್ವಜನಿಕ ಸಾರಿಗೆ ಸಂಚರಿಸುವಾಗ ಕೂಡ ಎಚ್ಚರದಿಂದ ಇರಿ. ಮಹಿಳೆಯರಿಗೆ ಥೈರಾಯ್ಡ್, ರಕ್ತದೊತ್ತಡ, ಪಿಸಿಒಡಿ, ಮುಟ್ಟಿನ ದಿನಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳು ತೀವ್ರವಾಗಿ ಕಾಡಬಹುದು. ನಿಮ್ಮಲ್ಲಿ ಕೆಲವರಿಗೆ ಔಷಧದ ಅಲರ್ಜಿ ಕಾಡುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಈ ಹಿಂದೆ ಯಾವಾಗಲೋ ನೀಡಿದ್ದ ಮಾತಿನಂತೆ ನಡೆದುಕೊಳ್ಳಲೇಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ನಿಮ್ಮ ಆರ್ಥಿಕ ಸ್ಥಿತಿಯನ್ನೋ ಅಥವಾ ಪರಿಸ್ಥಿತಿಯನ್ನೋ ಹೇಳಿಕೊಂಡು, ಇನ್ನೊಂದಿಷ್ಟು ಸಮಯ ಕೇಳಿದರೂ ಯಾವುದೇ ಪ್ರಯೋಜನ ಆಗುವುದಿಲ್ಲ. ಆದರೆ ಈ ವಾರದಲ್ಲಿ ಅದಕ್ಕಾಗಿ ಪ್ರಯತ್ನಿಸಿದಲ್ಲಿ ನಿಮ್ಮ ಜವಾಬ್ದಾರಿಯನ್ನು ಮುಗಿಸಿಕೊಂಡು ಬಿಡಬಹುದು. ಆರೋಗ್ಯದ ವಿಚಾರದಲ್ಲಿ ಜಾಗ್ರತೆಯನ್ನು ವಹಿಸಿ. ನೀರು ಅಥವಾ ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಪಾಯಿಸನ್ ಆಗಬಹುದು ಅಥವಾ ಬೆನ್ನು ನೋವಿನ ಸಮಸ್ಯೆ ವಿಪರೀತವಾಗಿ ಕಾಡಬಹುದು. ಈಗಾಗಲೇ ಈ ರೀತಿ ನೋವನ್ನು ಅನುಭವಿಸುತ್ತಿದ್ದೀರಿ ಅಂತಾದಲ್ಲಿ ಸರಿಯಾದ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ವೈದ್ಯೋಪಚಾರ ಮಾಡಿಕೊಳ್ಳುವುದು ಸೂಕ್ತ. ಇಟ್ಟಿಗೆ, ಸಿಮೆಂಟ್, ಕಬ್ಬಿಣದ ಮಾರಾಟವನ್ನು ಮಾಡುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಮಾರ್ಗ ಗೋಚರ ಆಗುತ್ತದೆ. ಖಾಸಗಿ ಕಂಪನಿಯಲ್ಲಿ ಇರುವವರಿಗೆ ಉತ್ತಮವಾದ ಸ್ಥಾನ- ಮಾನ ಅಥವಾ ಹುದ್ದೆಗಳು ದೊರೆಯುವ ಯೋಗ ಇದೆ. ಕೃಷಿಕರಿಗೆ ಯಾವುದೋ ಉತ್ಸಾಹದಲ್ಲಿ ನೀವಾಗಿಯೇ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಹೇಳಿದ ವಿಚಾರವೊಂದು ಕೊರಳಿಗೆ ಉರುಳಾಗಿ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಹೇಳಬಾರದಿತ್ತು ಎಂದು ಆ ನಂತರ ಆಲೋಚನೆ ಮಾಡಿದರೆ ಏನೂ ಉಪಯೋಗ ಆಗುವುದಿಲ್ಲ. ಇನ್ನು ಮೊದಲಿಗೆ ನಿಮ್ಮ ಜತೆಗೆ ಬಹಳ ಚೆನ್ನಾಗಿ, ಗೌರವಯುತವಾಗಿ ಮಾತನಾಡುತ್ತಿದ್ದವರು ಏಕಾಏಕಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಆಸ್ತಿ- ಹಣಕಾಸಿನ ವಿಚಾರವು ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ. ಕುಟುಂಬ ಸದಸ್ಯರಿಗೆ ಹಣಕಾಸಿನ ಅಗತ್ಯ ತೀವ್ರ ಆಗುವುದರಿಂದ ಆಸ್ತಿ ಅಡಮಾನ ಮಾಡಿಯಾದರೂ ಅವರಿಗೆ ನೆರವು ನೀಡಬೇಕಾಗುತ್ತದೆ. ಯಾವುದಾದರೂ ಕೆಲಸ ಒಪ್ಪಿಕೊಳ್ಳುವುದಕ್ಕೆ ಧೈರ್ಯ ಸಾಕಾಗುವುದಿಲ್ಲ. ನಿಮ್ಮಲ್ಲಿ ಕೆಲವರು ವಿಟಮಿನ್ -ಡಿ ಕೊರತೆಯನ್ನು ಅನುಭವಿಸಲಿದ್ದೀರಿ. ವೃತ್ತಿನಿರತರು ಬಹಳ ಸಲೀಸಾಗಿ ಬಗೆಹರಿಯಬಹುದು ಎಂದು ಅಂದಾಜಿಸಿದ್ದ ಕೆಲಸಗಳು, ಯೋಜನೆಗಳು ಗೋಜಲು ಗೋಜಲಾಗಿ ಆತಂಕಕ್ಕೆ ಕಾರಣ ಆಗುವಂಥ ಸಾಧ್ಯತೆ ಇದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ವಿಪರೀತ ನಿರೀಕ್ಷೆ ಮಾಡುತ್ತಿದ್ದಾರೆ ಎಂದೆನಿಸುತ್ತದೆ. ಮನೆ ದೇವರ ಸ್ಮರಣೆ, ಆರಾಧನೆಯಿಂದ ಕೆಲವು ಸಮಸ್ಯೆಗಳನ್ನು ಎದುರಿಸುವುದಕ್ಕೆ ಬಲ ದೊರೆಯುತ್ತದೆ. ಹಣಕಾಸನ್ನು ಹೊಂದಿಕೆ ಮಾಡುವುದಕ್ಕೆ ಸಮಯ ಮೀಸಲಿಡಬೇಕಾಗುತ್ತದೆ. ವಿದ್ಯಾರ್ಥಿಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಮಶೀನ್ ಲರ್ನಿಂಗ್ ರೀತಿಯ ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸೋದರ ಸಂಬಂಧಿಗಳ ಭೇಟಿಯಿಂದ ಮನಸ್ಸಿಗೆ ಖುಷಿ ಇದೆ. ಶೈಕ್ಷಣಿಕ ವಿಚಾರದಲ್ಲಿ ಅಂದುಕೊಳ್ಳದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ನಡೆಯಲಿವೆ. ಮಹಿಳೆಯರು ಆಕರ್ಷಕವಾದ ಲಾಭ ದೊರೆಯುತ್ತದೆ ಎಂದು ಕಾಗದದ ಮೇಲೆ ನಿಮಗೆ ಲೆಕ್ಕಾಚಾರ ತೋರಿಸಿದರು ಎಂಬ ಕಾರಣಕ್ಕೆ ಬಂಡವಾಳ ಹಾಕುವುದಕ್ಕೆ ಮುಂದಾಗಬೇಡಿ. ಹೆಚ್ಚಿನ ಹಣಕ್ಕೆ ಆಸೆ ಪಟ್ಟು ಹೂಡಿಕೆ ಮಾಡಿದರೆ ನಂತರ ಪರಿತಪಿಸುವಂತಾಗುತ್ತದೆ. ಮಂಗಳವಾರದಂದು ನಿಮ್ಮ ಮನೆಯ ಹತ್ತಿರ ಇರುವ ನರಸಿಂಹ ದೇವರ ದೇವಸ್ಥಾನದಲ್ಲಿ ದರ್ಶನ ಪಡೆದುಕೊಂಡಲ್ಲಿ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಸಣ್ಣ ಮಟ್ಟದಲ್ಲಿ ಆರಂಭಿಸಿದ್ದ ಹೂಡಿಕೆ, ವ್ಯವಹಾರ, ವ್ಯಾಪಾರಗಳಲ್ಲಿ ಗಟ್ಟಿಯಾದ ನೆಲೆ ಕಂಡುಕೊಳ್ಳಬಹುದು ಎಂಬ ವಿಶ್ವಾಸ ಮೂಡಲಿದೆ. ಈಗಾಗಲೇ ಯಶಸ್ವಿಯಾಗಿ ನಡೆಯುತ್ತಿರುವ ವ್ಯಾಪಾರ ಮಾಡುತ್ತಿರುವವರಿಗೆ ವಿಸ್ತರಣೆ ಅವಕಾಶ ಹೆಚ್ಚಲಿದೆ. ಶಾಲೆ- ಕಾಲೇಜು, ಆಸ್ಪತ್ರೆ ಹಾಗೂ ಕಂಪ್ಯೂಟರ್ ಕೋರ್ಸ್ ಗಳ ಕೇಂದ್ರಗಳನ್ನು ನಡೆಸುತ್ತಿರುವವರಿಗೆ ಸರ್ಕಾರದಿಂದ ಕೆಲವು ಅನುದಾನ ಅಥವಾ ಪ್ರೋತ್ಸಾಹಕಗಳು ದೊರೆಯುವ ಸಾಧ್ಯತೆ ಇದೆ. ಆದರೆ ಲೇವಾದೇವಿ ವ್ಯವಹಾರ ಮಾಡುತ್ತಿರುವವರು ಕಾಗದ-ಪತ್ರ ಒತ್ತೆಯಾಗಿರಿಸಿಕೊಂಡು ಏನಾದರೂ ಸಾಲ ನೀಡುತ್ತಿದ್ದೀರಿ ಅಂತಾದಲ್ಲಿ ಅವುಗಳ ಅಸಲಿಯತ್ತಿನ ಬಗ್ಗೆ ಸರಿಯಾಗಿ ಪರಿಶೀಲಿಸಿಕೊಳ್ಳುವುದು ಮುಖ್ಯ. ಹೆಚ್ಚಿನ ಬಡ್ಡಿಯನ್ನು ನೀಡುವುದಾಗಿ ಅವರಾಗಿಯೇ ಹೇಳಿದರು ಎಂಬ ಕಾರಣಕ್ಕೆ ಪಿಗ್ಗಿ ಬೀಳಬೇಡಿ. ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುವುದಕ್ಕೆ ಮಕ್ಕಳಿಗಾಗಿ ಹಣಕಾಸನ್ನು ಹೊಂದಿಸುತ್ತಿರುವ ಪೋಷಕರಿಗೆ ಅನುಕೂಲಗಳು ಒದಗಿ ಬರಲಿವೆ. ಇನ್ನು ವೀಸಾ ಅಥವಾ ಮತ್ಯಾವುದಾದರೂ ಸಮಸ್ಯೆ ಎದುರಿಸುತ್ತಿದ್ದಲ್ಲಿ ಅದು ಕೂಡ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೃಷಿಕರಿಗೆ ನಿಮ್ಮದೇ ವೃತ್ತಿಯಲ್ಲಿ ಇರುವಂಥ ಹಾಗೂ ಈಗಾಗಲೇ ಸಾಕಷ್ಟು ಸಾಧನೆ ಮಾಡಿದಂಥವರ ಪರಿಚಯ, ಸ್ನೇಹ ಆಗಲಿದೆ. ಅಥವಾ ಯಾವುದಾದರೂ ಒಂದು ಸಮಾರಂಭ, ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಸಮಯ ಕಳೆಯುವಂಥ ಅವಕಾಶ ದೊರೆಯಲಿದೆ. ಅವರ ಜತೆಗಿನ ಮಾತುಕತೆಯಿಂದ ನಿಮ್ಮ ಆಲೋಚನೆ, ಯೋಚನೆ, ಯೋಜನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಇನ್ನು ಕೃಷಿ ಭೂಮಿಯನ್ನು ಮಾರಾಟ ಮಾಡಬೇಕು ಎಂದೇನಾದರೂ ನಿರ್ಧರಿಸಿದ್ದಲ್ಲಿ ಆ ನಿರ್ಧಾರದಿಂದ ವಾಪಸ್ ಬರುವ ಅವಕಾಶಗಳು ಹೆಚ್ಚಿವೆ. ಕೃಷಿ ಜಮೀನಿನಲ್ಲಿ ಗೋಡೌನ್ ನಿರ್ಮಾಣ, ಕೃಷಿ ಹೊಂಡ ತೋಡಿಸುವುದು ಇಂಥದ್ದರ ಬಗ್ಗೆ ಇಲ್ಲಿಯ ತನಕ ಯೋಚಿಸುತ್ತಿದ್ದೀರಿ ಅಂತಾದಲ್ಲಿ ಅದನ್ನು ಮಾಡಿಸುವುದಕ್ಕೆ ಅಂತಲೇ ಆಖೈರು ನಿರ್ಧಾರ ಮಾಡಲಿದ್ದೀರಿ. ಹಣಕಾಸಿನ ಅನುಕೂಲ ಸಹ ಒದಗಿ ಬರಲಿದೆ. ಕುಟುಂಬ ಸದಸ್ಯರ ಬೆಂಬಲ ದೊರೆಯುವುದರಿಂದ ನಿಮ್ಮ ಮನಸ್ಸಿಗೆ ಖುಷಿ ಆಗುತ್ತದೆ. ವೃತ್ತಿನಿರತರು ಇತರರು ಸಣ್ಣ ಮಟ್ಟದ ಆದಾಯ ಅಂತ ನಿರ್ಲಕ್ಷ್ಯ ಮಾಡಿದಂಥ ಕೆಲಸಗಳನ್ನು ಕೈಗೆತ್ತಿಕೊಂಡು ಮಾಡಿಕೊಡಲಿದ್ದೀರಿ. ಇದರಿಂದ ದೀರ್ಘಾವಧಿಗೆ ಆದಾಯ ತರುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಮಕ್ಕಳಿಗಾಗಿ ಬೈಕ್, ಕಾರು ಅಥವಾ ಯಾವುದಾದರೂ ವಾಹನವನ್ನು ಖರೀದಿ ಮಾಡುವಂಥ ಯೋಗ ಇದೆ. ಮೊದಲಿಗೆ ಬೇಡ ಅಂದುಕೊಂಡರೂ ಕೊನೆ ಕ್ಷಣದಲ್ಲಿ ಕೊಡಿಸಲಿದ್ದೀರಿ. ವಿದ್ಯಾರ್ಥಿಗಳು ಏಕಾಗ್ರತೆ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಅದು ನಿವಾರಣೆ ಆಗಲಿದೆ. ನಿಮ್ಮಲ್ಲಿ ಕೆಲವರು ಮನೆ ದೇವರ ಆರಾಧನೆಯಲ್ಲಿ ಪಾಲ್ಗೊಳ್ಳುವ ಯೋಗ ಇದೆ. ಈ ವಾರ ನಿಮಗೆ ಉಡುಗೊರೆಗಳು ಸಿಗುವಂಥ ಸಾಧ್ಯತೆಗಳು ಸಹ ಇವೆ. ಮಹಿಳೆಯರಿಗೆ ಸಂಬಂಧಿಗಳು ಮನೆಗೆ ಬರುವುದರಿಂದ ವಿಪರೀತ ಕೆಲಸದ ಒತ್ತಡ ಇರಲಿದೆ. ನೀವು ಈಗಾಗಲೇ ಮಾಡುವುದಾಗಿ ಅಂದುಕೊಂಡಿದ್ದ ಕೆಲಸಗಳನ್ನು ಮುಂದಕ್ಕೆ ಹಾಕಬೇಕಾಗುತ್ತದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಕೆಲವು ವೈದ್ಯಕೀಯ ಪರೀಕ್ಷೆಗಳಿಗೆ ಹೆಚ್ಚಿನ ಖರ್ಚು ಆಗಲಿದೆ. ಚರ್ಮ, ಕೂದಲು ಅಥವಾ ಗಂಟಲಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಸೋರಿಯಾಸಿಸ್ ಸೇರಿದಂತೆ ಯಾವುದೇ ಚರ್ಮದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಏಕಾಏಕಿ ಉಲ್ಬಣ ಆಗಿಬಿಡಬಹುದು. ನೀವು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಆಲೋಚಿಸಿ ಹಾಗೂ ಸೂಕ್ತ ವೈದ್ಯರ ಮಾರ್ಗದರ್ಶನವನ್ನು ಪಡೆದುಕೊಳ್ಳಿ. ಮನೆಯ ನಿರ್ಮಾಣ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಸಂಗಾತಿ ಅಥವಾ ಕುಟುಂಬ ಸದಸ್ಯರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಅಥವಾ ವ್ಯಕ್ತಿಯೊಬ್ಬರು ತಾವಾಗಿಯೇ ಬಂದು, ನಿಮ್ಮ ಜಾಗವನ್ನು ಖರೀದಿ ಮಾಡುವುದಾಗಿ ಹೇಳಬಹುದು. ಒಂದು ವೇಳೆ ನೀವು ಈ ವ್ಯವಹಾರದಲ್ಲಿ ಮುಂದುವರಿದರೆ ಬಹಳ ಸಮಯ ಎಳೆದಾಡುತ್ತದೆ. ಜತೆಗೆ ಮಾನಸಿಕವಾಗಿ ನೆಮ್ಮದಿಯನ್ನು ಸಹ ಕಳೆದುಕೊಂಡಂತಾಗುತ್ತದೆ. ಕೆಲವರು ತಮ್ಮ ಮಾತಿನ ಮೂಲಕ ನಿಮ್ಮನ್ನು ರೊಚ್ಚಿಗೇಳುವಂತೆ ಮಾಡಲಿದ್ದು, ಆ ಸಿಟ್ಟಿಗೆ ಪಂಥಗಳನ್ನು ಕಟ್ಟಿಕೊಳ್ಳಲಿದ್ದೀರಿ. ಇದರಿಂದ ಹಣ ಕಳೆದುಕೊಳ್ಳುವ ಜತೆಗೆ, ಮಾನವನ್ನು ಕಳೆದುಕೊಂಡಂತಾಗುತ್ತದೆ. ಆದ್ದರಿಂದ ಹತ್ತಾರು ಜನರ ಗುಂಪಿರುವ ಕಡೆಯಲ್ಲಿ ನೀವಾಗಿಯೇ ಹೋಗಿ ನಿಲ್ಲುವುದಕ್ಕೆ ಹೋಗಬೇಡಿ. ಇತರರ ಮಾತನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಪಶು ಸಾಕಣೆ, ಮೀನು ಸಾಕಣೆ ಇಂಥದ್ದನ್ನು ಈಗಾಗಲೇ ಮಾಡುತ್ತಿದ್ದಲ್ಲಿ ಅದರ ಪ್ರಮಾಣವನ್ನು ಹೆಚ್ಚು ಮಾಡಲಿದ್ದೀರಿ. ಜತೆಗೆ ಕೆಲಸಕ್ಕೆ ಜನರನ್ನು ನೇಮಿಸಿಕೊಳ್ಳಲಿದ್ದೀರಿ. ಕೃಷಿ ಜಮೀನಿನಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಾಣ ಮಾಡಲಿದ್ದೀರಿ. ಬೋರ್ ವೆಲ್ ತೆಗೆಸುವುದು, ಸೋಲಾರ್ ಉಪಕರಣಗಳನ್ನು ಅಳವಡಿಸಿಕೊಳ್ಳುವುದು ಇತ್ಯಾದಿಗಳನ್ನು ಮಾಡಲಿದ್ದೀರಿ. ಸರ್ವೇ, ಪೋಡಿ ಇತ್ಯಾದಿಗಳನ್ನು ಮಾಡಿಸಬೇಕು ಎಂದು ಕೊಳ್ಳುತ್ತಿರುವವರಿಗೆ ಕೆಲಸ ವೇಗ ಪಡೆದುಕೊಳ್ಳಲಿದೆ. ವೃತ್ತಿನಿರತರು ಬಹಳ ಜನಪ್ರಿಯ ಆಗಲಿದ್ದೀರಿ. ಅಥವಾ ನಿಮ್ಮ ಸಂಸ್ಥೆ ಬಗ್ಗೆ ಪಬ್ಲಿಸಿಟಿ ಆರಂಭಿಸುವ ಸಾಧ್ಯತೆಗಳು ಹೆಚ್ಚಿವೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಫಲಿತಾಂಶಗಳು ದೊರೆಯುವುದಕ್ಕೆ ಶುರು ಆಗುತ್ತದೆ. ಈಗ ನೀಡುತ್ತಿರುವ ಸೇವೆಗೆ ಜತೆಯಾಗಿ ಇನ್ನಷ್ಟು ಸೇವೆಗಳನ್ನು ನೀಡುವುದಕ್ಕೆ ಶುರು ಮಾಡಲಿದ್ದೀರಿ. ನೀವು ವೃತ್ತಿಯ ಗುರುಗಳಾಗಿ ಭಾವಿಸುವಂಥವರು ಕೆಲವು ಸಲಹೆಗಳನ್ನು ನೀಡಲಿದ್ದಾರೆ ಹಾಗೂ ಅದೇ ರೀತಿ ಕೆಲವು ಅನುಕೂಲಗಳನ್ನು ಸಹ ಮಾಡಿಕೊಡಲಿದ್ದಾರೆ. ವಿದ್ಯಾರ್ಥಿಗಳು ಕೆಲವು ವಿವಾದಗಳನ್ನು ಮಾಡಿಕೊಳ್ಳಬಹುದು. ಶಾಲೆ- ಕಾಲೇಜುಗಳಲ್ಲಿ ಇರುವವರ ಮೇಲೆ ಹೊಡೆದಾಟದ ಆರೋಪ ಬರಬಹುದು. ಪೋಷಕರನ್ನು ಕರೆತರುವಂತೆಯೂ ಸೂಚಿಸುವ ಸಾಧ್ಯತೆಗಳಿವೆ. ಆದ್ದರಿಂದ ಇಂಥ ಸನ್ನಿವೇಶಗಳಲ್ಲಿ ಸೂಕ್ಷ್ಮವಾಗಿ ವರ್ತಿಸಿ. ಮಹಿಳೆಯರು ಅತ್ತೆ, ನಾದಿನಿ ಅಥವಾ ಭಾವಿ ಪತಿಯ ಜತೆಗೆ ಜಗಳ ಮಾಡುವ ಸಾಧ್ಯತೆ ಇದೆ. ನಿಮ್ಮ ಆಯ್ಕೆಯ ಬಗ್ಗೆ ಬೇಸರ ಆಗುವಂಥ ಯೋಗ ಇದೆ. ಇದರಿಂದ ನಿಮ್ಮಲ್ಲಿ ಕೆಲವರು ಒತ್ತಡ, ಮಾನಸಿಕ ಖಿನ್ನತೆಯನ್ನು ಅನುಭವಿಸಲಿದ್ದೀರಿ. ಒಂದು ವೇಳೆ ವೈದ್ಯರ ಸಹಾಯ ಬೇಕು ಎಂದೆನಿಸಿದಲ್ಲಿ ಕಡ್ಡಾಯವಾಗಿ ತೆಗೆದುಕೊಳ್ಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಎಲ್ಲರೂ ಬುದ್ಧಿ ಹೇಳುತ್ತಿದ್ದಾರಲ್ಲ ಎಂದು ಮನಸಿಗೆ ವ್ಯಥೆಯಾಗುತ್ತದೆ. ಒಟ್ಟಿನಲ್ಲಿ ಈ ವಾರ ಬೇರೆಯವರಿಂದ ಸಲಹೆ- ಉಪದೇಶಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಇದರ ಜತೆ ಮರೆವಿನ ಸಮಸ್ಯೆ ನಿಮಗೆ ವಿಪರೀತ ಕಾಡಲಿದೆ. ಪುರುಷರೇ ಇರಲಿ, ಸ್ತ್ರೀಯರೇ ಇರಲಿ ಒಡವೆ- ವಸ್ತುಗಳ ಬಗ್ಗೆ ಹಾಗೂ ಅದನ್ನು ಹೇಗೆ ನಿರ್ವಹಿಸುತ್ತಿದ್ದೀರಿ ಎಂಬ ಬಗ್ಗೆ ಲಕ್ಷ್ಯ ನೀಡಿ. ಇತರರ ಕೈಗೆ ಕೊಟ್ಟರೂ ಹಾಗೆ ಯಾರಿಗೆ ಕೊಟ್ಟಿದ್ದೀರಿ ಎಂಬ ಬಗ್ಗೆ ಕೂಡ ನಿಮಗೆ ನೆನಪಿನಲ್ಲಿ ಇರುವುದು ಮುಖ್ಯವಾಗುತ್ತದೆ. ಅದೇ ರೀತಿ ವಸ್ತುಗಳ ನಷ್ಟ, ಮುಖ್ಯವಾದ ಕಾಗದ ಪತ್ರಗಳನ್ನು ಒಂದೆಡೆ ಇಟ್ಟು, ಇನ್ನೊಂದು ಕಡೆ ಹುಡುಕಿ ಆತಂಕಗೊಳ್ಳುವುದು, ಇನ್ನೇನು ಕೆಲಸ ಮುಗಿದು, ಹಣ ಬಂದು ಬಿಡುತ್ತದೆ ಅಂದುಕೊಂಡಿದ್ದು ಬಾರದೇ ಇರುವುದು ಈ ರೀತಿಯಲ್ಲಿ ನಾನಾ ಬಗೆಯಲ್ಲಿ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಯಾವ ಕೆಲಸವನ್ನು ಸುಲಭವಾಗಿ ಮುಗಿಸಬಲ್ಲಿರಿ ಎಂದು ನೀವು ಅಂದುಕೊಂಡಿರುತ್ತೀರೋ ಅದು ಹಾಗೆ ಆಗುವುದಿಲ್ಲ. ಇದರಿಂದಾಗಿ ಇಷ್ಟು ಸಮಯ ಇದ್ದ ನಿಮ್ಮ ಮೇಲಿನ ಆತ್ಮವಿಶ್ವಾಸ ಅದು ಕರಗುತ್ತಾ ಸಾಗುತ್ತದೆ. ನೀವು ಅಂದುಕೊಂಡಂತೆ ಬೆಳವಣಿಗೆಗಳು ನಡೆಯದೆ ನಿಮ್ಮ ನಿರ್ಧಾರಗನ್ನು ಬದಲಾಯಿಸಿಕೊಳ್ಳುವುದು ಅನಿವಾರ್ಯ ಎಂಬಂತಾಗುತ್ತದೆ. ಕೃಷಿ ವೃತ್ತಿಯಲ್ಲಿ ಇರುವಂಥವರು ಜಮೀನಿನಲ್ಲಿ ಹಾಕಿರುವ ವಿದ್ಯುತ್ ಲೈನ್ ಸರಿಯಾಗಿ ಕೆಲಸ ಮಾಡುತ್ತಿದೆಯಾ ಎಂಬುದನ್ನು ಗಮನಿಸಿಕೊಳ್ಳಿ. ಒಂದು ವೇಳೆ ಗಾಳಿ- ಮಳೆಗೆ ಸಿಲುಕಿ ದುರ್ಬಲವಾಗಿರುವಂಥ ತಂತಿ, ವೈಯರ್ ಗಳು ಇದ್ದಲ್ಲಿ ಅವುಗಳನ್ನು ಬದಲಿಸಿಕೊಳ್ಳುವ ಕಡೆಗೆ ಗಮನವನ್ನು ನೀಡಿ. ಇಲ್ಲದಿದ್ದಲ್ಲಿ ಶಾರ್ಟ್ ಸರ್ಕೀಟ್ ಆಗಿ ಭಾರೀ ನಷ್ಟ ಆಗಬಹುದು, ಅಗ್ನಿ ಅವಘಡಗಳು ಸಂಭವಿಸಬಹುದು. ನಿಮಗೆ ಹಣಕಾಸಿನ ನೆರವು ನೀಡುವುದಾಗಿ ಹೇಳಿದವರು ಕೆಲಸ ಆರಂಭವಾಗಿ, ಮುಖ್ಯ ಘಟ್ಟದಲ್ಲಿ ಇರುವಾಗ ತಮ್ಮಿಂದ ಹಣ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿಬಿಡುವ ಸಾಧ್ಯತೆಗಳು ಸಹ ಇವೆ. ಆದ್ದರಿಂದ ಯಾರನ್ನೂ ನೆಚ್ಚಿಕೊಂಡು ಕೆಲಸ ಆರಂಭಿಸಬೇಡಿ. ಹಾಗೊಂದು ವೇಳೆ ಶುರು ಮಾಡಿದರೂ ಆರಂಭದಲ್ಲೇ ಹಣವನ್ನು ಇಟ್ಟುಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಒತ್ತಡಕ್ಕೆ ಸಿಲುಕಿಕೊಳ್ಳುತ್ತೀರಿ. ಇನ್ನು ವೃತ್ತಿನಿರತರಿಗೆ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ನಡೆಸುತ್ತಿದ್ದಲ್ಲಿ ಬಹಳ ಆಪ್ತರ ಜತೆಗೆ ಮನಸ್ತಾಪಗಳು ಆಗುತ್ತವೆ. ನೀವು ಈ ಹಿಂದೆ ಹೇಳಿದ್ದ ಮಾತುಗಳು ನಿಮಗೇ ಉರುಳಾಗುವಂಥ ಸಾಧ್ಯತೆಗಳಿವೆ. ಮುಖ್ಯವಾಗಿ ಭೂ ವ್ಯಾಜ್ಯಗಳು ಎದುರಾಗುತ್ತವೆ. ನಿಮಗೇನೋ ಕಷ್ಟ ಅಂತಲೋ ಅಥವಾ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಬೇಕೋ ಅಂತಲೋ ಭೂ ಮಾರಾಟಕ್ಕೆ ಪ್ರಯತ್ನಿಸಿದಲ್ಲಿ ಅದರಲ್ಲಿ ನಾನಾ ಎಡರು ತೊಡರುಗಳನ್ನು ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಸಹಪಾಠಿಗಳಿಂದಲೇ ಅವಮಾನಗಳು ಎದುರಾಗಲಿವೆ. ಮಹಿಳೆಯರು ತಮ್ಮದೇ ಹೆಸರಿನಲ್ಲಿ ಉಳಿತಾಯ, ಹೂಡಿಕೆಗಳನ್ನು ಶುರು ಮಾಡುವುದಕ್ಕೆ ಆಲೋಚಿಸಲಿದ್ದಾರೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಎಂಥ ಸವಾಲು ಎದುರಾದರೂ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ. ದೊಡ್ಡ ಸಮಸ್ಯೆಯೊಂದು ಹಣ್ಣುಗಾಯಿ- ನೀರುಗಾಯಿ ಮಾಡಿಬಿಡುತ್ತದೆ ಎಂದು ನೀವು ಭಾವಿಸಿದ್ದು ಅದರಿಂದ ಹೊರ ಬರುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಸಮಯ ಪ್ರಜ್ಞೆಯಿಂದ ನೀವು ಮಾಡುವ ಕೆಲಸಗಳು ಕಾಪಾಡುತ್ತವೆ. ಸಮಾಧಾನದಿಂದ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡುವುದು ಈ ವಾರ ಬಹಳ ಮುಖ್ಯ ಆಗುತ್ತದೆ. ಇನ್ನು ಯಾರ ಬಳಿ ನೆರವು ಕೇಳಬಹುದು ಎಂಬ ಬಗ್ಗೆ ಕೂಡ ಸ್ಪಷ್ಟತೆ ಇಟ್ಟುಕೊಳ್ಳುವುದು ಒಳ್ಳೆಯದು. ಆದರೆ ನಿಮ್ಮ ಪಾಲಿಗೆ ಸಂತೋಷದ ವಿಚಾರ ಏನೆಂದರೆ, ಬಹಳ ಸಮಯದಿಂದ ಕಾಡುತ್ತಿದ್ದ ಕುಟುಂಬ ಸಮಸ್ಯೆಗಳು, ಆಸ್ತಿ ವಿಚಾರಗಳನ್ನು ಸಹ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇತರರಿಗೆ ವಹಿಸಿಯಾಗಿದೆ, ಅವರು ಕೆಲಸ ಮಾಡಿಕೊಂಡು ಬಂದು ಬಿಡುತ್ತಾರೆ ಎಂದು ಸುಮ್ಮನೆ ಇರುವುದಕ್ಕೆ ಸಾಧ್ಯವೇ ಇಲ್ಲದಂಥ ಒತ್ತಡವೊಂದು ನಿಮ್ಮ ಸ್ನೇಹಿತರು- ಆಪ್ತರಿಂದ ಸೃಷ್ಟಿ ಆಗುತ್ತದೆ. ನಿಮ್ಮಲ್ಲಿ ಕೆಲವರು ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆಗಳಿವೆ. ಅದನ್ನು ಮಾರಿ, ಅದರಿಂದ ಬಂದ ಹಣದಿಂದ ನಿಶ್ಚಿತವಾದ ಆದಾಯವನ್ನು ಮಾಡಿಕೊಳ್ಳಬೇಕು ಎಂದುಕೊಳ್ಳುತ್ತೀರಿ. ಮನೆಯ ಹಿರಿಯರ ಅನಾರೋಗ್ಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಆತಂಕ ತರಬಹುದು. ಕೃಷಿಕರು ಜಮೀನು ವ್ಯಾಜ್ಯಕ್ಕೋ ಅಥವಾ ನೀರಿನ ವಿಚಾರಕ್ಕೋ ಪೊಲೀಸ್ ಠಾಣೆ, ಕೋರ್ಟ್- ಕಚೇರಿ ಎಂದು ಅಲೆದಾಡುವ ಯೋಗ ಇದೆ. ಇದರಿಂದ ನಿಮಗೆ ದೊಡ್ಡ ಮೊತ್ತವೇ ಕೈ ಬಿಟ್ಟು ಹೋಗಬಹುದು. ಆ ಕಾರಣಕ್ಕೆ ಮಾತುಕತೆ ಆಡಿ, ಬಗೆಹರಿಸ ಬಹುದಾದ ವ್ಯಾಜ್ಯಗಳನ್ನು ಶಾಂತಿಯುತವಾಗಿಯೇ ಮುಗಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಈ ಹಿಂದೆ ಯಾವಾಗಲೋ ಪಡೆದುಕೊಂಡಂಥ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳ ಸಾಲಕ್ಕೆ ಈಗ ನೋಟಿಸ್ ಕೂಡ ಬರಬಹುದು. ಈ ಬಾರಿ ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಮದುವೆಗಾಗಿ ಪ್ರಯತ್ನಿಸುತ್ತಾ ಇರುವವರಿಗೆ ಸಂಬಂಧದಲ್ಲೇ ವಧು/ವರ ದೊರೆಯುವ ಅವಕಾಶಗಳಿವೆ. ಇತರರ ಆತುರಕ್ಕೆ ನಿರ್ಧಾರ ಮಾಡದಿರುವುದು ಕ್ಷೇಮ. ಇಂಥ ಯಾವುದೇ ವಿಷಯಕ್ಕೂ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ವೃತ್ತಿನಿರತರು ಬಹಳ ಮುಖ್ಯವಾದ ಮೈಲುಗಲ್ಲನ್ನು ಸಾಧಿಸಲಿದ್ದೀರಿ. ಒಂದು ವೇಳೆ ಬೇರೆಯವರ ಕೈ ಕೆಳಗೆ ಅಥವಾ ಪಾರ್ಟನರ್ ಷಿಪ್ ನಲ್ಲಿ ವೃತ್ತಿ ಮಾಡುತ್ತಿದ್ದೀರಿ ಅಂತಾದಲ್ಲಿ ಸ್ವತಂತ್ರವಾಗಿ ವೃತ್ತಿ ಆರಂಭಿಸುವ ಯೋಗ ಕೂಡಿ ಬರಲಿದೆ. ಅದಕ್ಕೆ ಬೇಕಾದ ಎಲ್ಲ ಸಂಪನ್ಮೂಲ, ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮಲ್ಲಿ ಕೆಲವರು ಇಲ್ಲಿಯವರೆಗೆ ಮಾಡಿದ್ದ ಉಳಿತಾಯದ ಹಣ, ಎಫ್ ಡಿ, ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಹಣವನ್ನು ತೆಗೆಯುವುದಕ್ಕೆ ನಿರ್ಧರಿಸಲಿದ್ದೀರಿ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಉತ್ತಮ ಸಾಧನೆಯನ್ನು ಮಾಡಲಿದ್ದೀರಿ. ಇನ್ನು ಶಿಕ್ಷಣ ಸಂಸ್ಥೆಯಿಂದಲೇ ಅಥವಾ ಸ್ನೇಹಿತರ ಜತೆಗೆ ಪ್ರವಾಸಕ್ಕೆ ತೆರಳುವಂಥ ಯೋಗ ಸಹ ಇದೆ. ಮಹಿಳೆಯರಿಗೆ ಪ್ರೀತಿ- ಪ್ರೇಮದಲ್ಲಿ ಬೀಳುವ ಯೋಗ ಇದೆ. ಅಂದ ಹಾಗೆ ಇದು ಮದುವೆ ಹಂತಕ್ಕೆ ಬಹಳ ವೇಗವಾಗಿ ತಲುಪಲಿದೆ. ಕಾರ್ಯಕ್ರಮ- ಸಮಾರಂಭಗಳಲ್ಲಿ ಪರಿಚಯ- ಸ್ನೇಹ ಆಗುವ ವ್ಯಕ್ತಿ ನಿಮ್ಮ ಬಾಳ ಸಂಗಾತಿ ಆಗಲಿದ್ದಾರೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಇತರರ ಭರವಸೆಯ ಮಾತುಗಳನ್ನೇ ನೆಚ್ಚಿಕೊಂಡು, ದೊಡ್ಡ ತೀರ್ಮಾನಗಳನ್ನು ಮಾಡುವುದಕ್ಕೆ ಹೋಗಬೇಡಿ. ಹಣಕಾಸು ಅಥವಾ ಬ್ಯಾಂಕ್ ಗೆ ಸಂಬಂಧಿಸಿದ ವಿಚಾರಗಳಲ್ಲಿ ನಿಮಗೆ ಯಶಸ್ಸು ಸುಲಭಕ್ಕೆ ಸಿಗುವುದಿಲ್ಲ. ಯಾವುದೇ ಪ್ರಯತ್ನದ ಕೆಲಸ ಆಗುವ ಮುನ್ನವೇ ಅದರ ಬಗ್ಗೆ ಹೇಳಿಕೊಂಡು ಬರಬೇಡಿ. ಏಕೆಂದರೆ ಆರಂಭದಲ್ಲಿ ಎಲ್ಲವೂ ಸಲೀಸಾಗಿ ಆಗುವಂತೆ ಕಾಣುವಂಥದ್ದು, ಆ ನಂತರದಲ್ಲಿ ಕೈ ಕೊಡಲಿದೆ. ಒಟ್ಟಿನಲ್ಲಿ ಈ ವಾರ ನೀವು ಕೈ ಹಾಕುವ ಕೆಲಸಗಳಲ್ಲಿ ನಾನಾ ವಿಘ್ನಗಳು ಎದುರಾಗುತ್ತವೆ. ಅದರಲ್ಲೂ ಸ್ತ್ರೀಯರ ಜತೆಗೆ ವ್ಯವಹಾರ- ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆ ನಡೆಸುತ್ತಿದ್ದೀರಿ ಎಂದಾದಲ್ಲಿ ದಾಖಲಾತಿಗಳು ಸರಿಯಾಗಿವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಇನ್ನು ನಿಮ್ಮ ಹಣಕಾಸಿನ ಅಗತ್ಯ ತೀವ್ರವಾಗಲಿದ್ದು, ಯಾರ ಜತೆಗೆ ವ್ಯವಹಾರ ಅಥವಾ ಕೆಲಸ ಮಾಡಬಾರದು ಎಂದುಕೊಂಡಿದ್ದಿರೋ ಅವರ ಜತೆಗೇ ಕೆಲಸ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇದರಿಂದಾಗಿ ನಿಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಕೆಲವು ಆತುರದ ತೀರ್ಮಾನದಿಂದ ಹಣವನ್ನು ಕಳೆದುಕೊಳ್ಳಲಿದ್ದೀರಿ. ಈ ವಾರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊಸ ವ್ಯವಹಾರಗಳನ್ನು ಶುರು ಮಾಡಿದ್ದಲ್ಲಿ ಆಗಬೇಕಾದ ಅಥವಾ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚಾಗುತ್ತದೆ. ಆದ್ದರಿಂದ ಲೆಕ್ಕಾಚಾರ ಹಾಗೂ ಬಜೆಟ್ ಸರಿಯಾಗಿ ಇರುವಂತೆ ನೋಡಿಕೊಳ್ಳಿ. ಕೃಷಿಕರು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲಿದ್ದೀರಿ. ಸರ್ಕಾರದ ಮಟ್ಟದಲ್ಲಿ ನಿಮ್ಮ ಕೆಲಸಗಳು ಆಗಬೇಕಾಗಿದ್ದಲ್ಲಿ ಅದು ಮಾಡಿಕೊಳ್ಳುವಂಥ ಸಾಧ್ಯತೆಗಳಿವೆ. ನಿಮ್ಮ ಸಾಮರ್ಥ್ಯವನ್ನು ಗುರುತಿಸಿ, ಸ್ಥಾನ- ಮಾನಗಳು ಸಹ ದೊರೆಯುವಂಥ ಸಾಧ್ಯತೆಗಳಿವೆ. ಸಂಗಾತಿಯ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಹೆಚ್ಚಿನ ಅನುಕೂಲಗಳು ಒದಗಿಬರಲಿವೆ. ಕೃಷಿ ಜಮೀನಿನಲ್ಲಿ ಸೋಲಾರ್ ಬೇಲಿ ಹಾಕಿಸುವುದು ಸೇರಿದಂತೆ ಇತರ ಅಬಿವೃದ್ಧಿ ಕೆಲಸಗಳನ್ನು ಮಾಡಿಸುವುದಕ್ಕೆ ಮುಂದಾಗಲಿದ್ದೀರಿ. ಬಹಳ ಸಮಯದಿಂದ ನಿಮ್ಮನ್ನು ಕಾಡುತ್ತಿದ್ದ ಗೊಂದಲಗಳು ನಿವಾರಣೆ ಆಗಲಿದೆ. ವೃತ್ತಿನಿರತರಿಗೆ ತಾಂತ್ರಿಕ ವಿಚಾರಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅಥವಾ ವಿವಿಧ ಬಗೆಯಲ್ಲಿ ನಿಮ್ಮ ಸೇವೆಯನ್ನು ಅಪ್ ಗ್ರೇಡ್ ಮಾಡುವ ನಿಟ್ಟಿನಲ್ಲಿ ಹಣವನ್ನು ಹೂಡಿಕೆ ಮಾಡುವಂಥ ಯೋಗ ಇದೆ. ಹೊಸದಾಗಿ ಶಾಖೆಗಳನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಕಚೇರಿ ಅಥವಾ ಭೂಮಿಯನ್ನು ಭೋಗ್ಯಕ್ಕೆ ಹಾಕಿಕೊಳ್ಳುವುದಕ್ಕೆ ಆಲೋಚಿಸಲಿದ್ದೀರಿ. ಇಂಥ ಸನ್ನಿವೇಶದಲ್ಲಿ ಅದಕ್ಕೆ ಪಾರ್ಟನರ್ ಗಳು ಇದ್ದಲ್ಲಿ ಸೂಕ್ತ ಬೆಂಬಲ ಕೂಡ ದೊರೆಯಲಿದೆ. ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾರೀ ಉತ್ತೇಜನ ದೊರೆಯಲಿದೆ. ಯುವತಿಯರು ಅಥವಾ ಉದ್ಯೋಗಸ್ಥ ಮಹಿಳೆಯರ ಮೇಲೆ ಕೆಲವು ಆರೋಪಗಳನ್ನು ಹೊರೆಸುವಂಥ ಸಾಧ್ಯತೆ ಇದೆ. ಪಾರದರ್ಶಕವಾಗಿ ಇರುವುದಕ್ಕೆ ಪ್ರಯತ್ನಿಸಿ.
ಲೇಖನ- ಎನ್.ಕೆ.ಸ್ವಾತಿ