ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ ಬಹುನಿರೀಕ್ಷೆಯ ಕೂಲಿ ಸಿನಿಮಾ ಇಂದು ವರ್ಲ್ಡ್ ವೈಡ್ ತೆರೆಗೆ ಬಂದಿದೆ. ಅನೇಕ ಕಡೆ ತಡರಾತ್ರಿಯೇ ಶೋ ನಡೆದಿವೆ. ಈಗಾಗ್ಲೇ ಕೂಲಿ ಸಿನಿಮಾ ಹೇಗಿದೆ ಅನ್ನೋ ಟಾಕ್ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ. ಬನ್ನಿ ಹಾಗಾದ್ರೆ ಕೂಲಿನಲ್ಲಿ ಏನಿದೆ ಅನ್ನೋ ಅಸಲಿ ಕಹಾನಿ ನೋಡೋಣ.
ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಬರುತ್ತೆ ಅಂದ್ರೆ ಸಿನಿ ಇಂಡಸ್ಟ್ರಿ ಶೇಕ್ ಆಗುತ್ತೆ. ಚಿತ್ರಮಂದಿರಗಳು ಕಳೆ ಕಟ್ಟುತ್ವೆ ಬಾಕ್ಸಾಫೀಸ್ನಲ್ಲಿ ಹಣದ ಹೊಳೆಯೇ ಹರಿಯುತ್ತೆ. ಇದೀಗ ಕೂಲಿ ರಿಲೀಸ್ ಸಮಯದಲ್ಲೂ ಅದೇ ಆಗ್ತಾ ಇರೋದು. ರಜನಿಕಾಂತ್ ನಟನೆಯ ಕೂಲಿ ಸಿನಿಮಾ ವಿಶ್ವದಾದ್ಯಂತ ಬರೊಬ್ಬರಿ 7500 ಸ್ಕ್ರೀನ್ಗಳಲ್ಲಿ ತೆರೆಗೆ ಬಂದಿದೆ.
ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಜೊತೆಗೆ ಕಿಂಗ್ ನಾಗಾರ್ಜುನ, ರಿಯಲ್ ಸ್ಟಾರ್ ಉಪೇಂದ್ರ, ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಸೇರಿದಂತೆ ನಾನಾ ಭಾಷೆಯ ಸ್ಟಾರ್ಗಳ ದಂಡು ಇದೆ. ಲೋಕೇಶ್ ಕನಗರಾಜ್ ಡೈರೆಕ್ಟ್ ಮಾಡಿರೋ ಈ ಸಿನಿಮಾ ಬಗ್ಗೆ ದೊಡ್ಡ ಹೈಪ್ ಕ್ರಿಯೇಟ್ ಆಗಿದೆ. ಅದಕ್ಕೆ ತಕ್ಕಂತೆ ಮೊದಲ ದಿನದ ಶೋಗಳೆಲ್ಲಾ ಹೌಸ್ ಫುಲ್ ಆಗಿವೆ.
ಯೆಸ್ ತಡರಾತ್ರಿಯೇ ಕೂಲಿ ಸಿನಿಮಾ ನೋಡಿದ ಫ್ಯಾನ್ಸ್ ಇದು ಪಕ್ಕಾ ಪವರ್ ಪ್ಯಾಕ್ಡ್ ಮಾಸ್ ಎಂಟರ್ಟೈನರ್ ಮೂವಿ ಅಂತ ಕೊಂಡಾಡ್ತಾ ಇದ್ದಾರೆ. ಅದ್ರಲ್ಲೂ ರಜನಿಕಾಂತ್ ಸ್ಟೈಲ್, ಗೆಟಪ್, ಆಕ್ಚನ್ ನೋಡಿದವರು 1990ರ ದಶಕದ ರಜನಿನ ಮತ್ತೆ ನೋಡಿದಂತೆ ಆಯ್ತು ಅಂತ ಕಾಮೆಂಟ್ ಮಾಡ್ತಾ ಇದ್ದಾರೆ.
ಇನ್ನೂ ಕಿಂಗ್ ನಾಗಾರ್ಜುನ ಇಲ್ಲಿ ವಿಲನ್ ರೋಲ್ ಮಾಡಿದ್ದು ಸಖತ್ ಸ್ಕೋರ್ ಮಾಡಿದ್ದಾರಂತೆ. ಆಮೀರ್ ಖಾನ್, ಉಪೇಂದ್ರ ಸಣ್ಣದೊಂದು ಸೀಕ್ವೆನ್ಸ್ನಲ್ಲಿ ಬಂದ್ರೂ ಫ್ಯಾನ್ಸ್ಗೆ ಕಿಕ್ಕೇರಿಸ್ತಾರೆ. ಡಿಂಪಲ್ ಕ್ವೀನ್ ರಚಿತಾಗೆ ಪುಟ್ಟ ಪಾತ್ರ ಇದೆ. ಶೃತಿ ಹಾಸನ್ ಚಿತ್ರದುದ್ದಕ್ಕೂ ಇದ್ದಾರೆ.
ಯೆಸ್ ಕೂಲಿ ಸಿನಿಮಾದ ಮೊದಲ ದಿನದ ಬಹುತೇಕ ಶೋಗಳು ಹೌಸ್ ಫುಲ್ ಆಗಿದ್ದು ಮೊದಲ ದಿನ ಸಿನಿಮಾ 150 ಪ್ಲಸ್ ಕೋಟಿ ಗಳಿಸೋದು ಫಿಕ್ಸ್ ಅಂದಿದ್ದಾರೆ ಬಾಕ್ಸಾಫೀಸ್ ಪಂಡಿತರು. ಇನ್ನೂ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂ ಬಂದಿದ್ದು ಈ ಸಿನಿಮಾ ಸಾವಿರ ಕೋಟಿ ಗಳಿಸೋ ಸಾಧ್ಯತೆ ದಟ್ಟವಾಗಿವೆಯಂತೆ. ಅಲ್ಲಿಗೆ ಕೂಲಿ ಸಾವಿರ ಕೋಟಿ ಗಳಿಸಿದ್ರೆ , ಥೌಸಂಡ್ ಕ್ರೋರ್ ಕ್ಲಬ್ ಸೇರಿದ ಮೊದಲ ಕಾಲಿವುಡ್ ಸಿನಿಮಾ ಇದಾಗಲಿದೆ.
ಇನ್ನೂ ಕೂಲಿ ಸಿನಿಮಾ ಕ್ರೇಜ್ ಬರೀ ಇಂಡಿಯಾದಲ್ಲಿ ಮಾತ್ರ ಅಲ್ಲ ವಿದೇಶಗಳಲ್ಲೂ ಜೋರಾಗಿದೆ. ಅಮೇರಿಕ, ಕೆನಡಾದಲ್ಲಿ ದಾಖಲೆ ಸ್ಕ್ರೀನ್ಗಳಲ್ಲಿ ಸಿನಿಮಾ ತೆರೆಕಂಡಿದೆ. ಸಿಂಗಾಪುರ್ನಲ್ಲಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ಕೊಟ್ಟು ಕೂಲಿ ಸಿನಿಮಾ ಟಿಕೆಟ್ ಬುಕ್ ಮಾಡಿಕೊಟ್ಟಿದೆ. ಒಟ್ಟಾರೆ ಸದ್ಯ ಎಲ್ಲೆಲ್ಲೂ ಕೂಲಿ ಮೇನಿಯಾ..! ಥಿಯೇಟರ್ಗಳೆಲ್ಲಾ ರಜನಿಮಯ..!