ಬಾದಾಮಿಯ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಕಾರಣ ಕೇಂದ್ರ ಸರ್ಕಾರದಿಂದ ಹಣ ಪಡೆಯಲು ದೊಡ್ಡ ಯೋಜನೆ ರೂಪಿಸುವಂತೆ ಸಚಿವ ಪರಮೇಶ್ವರ್ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಬಳಿಯೂ ಹಣವಿಲ್ಲ ಎಂದು ಅವರು ಹೇಳಿದ್ದಾರೆ.
ಬಾಗಲಕೋಟೆ (ಜೂ.24): ‘ನಮ್ಮ ಬಳಿ ದುಡ್ಡಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯೂ ದುಡ್ಡಿಲ್ಲ. ಆದ್ದರಿಂದ, ಯಾವುದೇ ಅಭಿವೃದ್ಧಿ ಕೆಲಸಕ್ಕೆ ನಮ್ಮನ್ನು ಕೇಳಬೇಡಿ. ಬದಲಿಗೆ ಒಂದು ದೊಡ್ಡ ಪ್ರಾಜೆಕ್ಟ್ ರೂಪಿಸಿ, ಕೇಂದ್ರ ಸರಕಾರಕ್ಕೆ ಕಳುಹಿಸಿ, ಅವರಿಂದ ದುಡ್ಡು ತನ್ನಿ ಎಂದು ಗೃಹ ಸಚಿವ ಪರಮೇಶ್ವರ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಬಾದಾಮಿಯಲ್ಲಿ ಅಭಿವೃದ್ಧಿಯ ಕುರಿತು ಮಾತನಾಡುವ ವೇಳೆಯಲ್ಲಿ ಸಚಿವ ಜಿ. ಪರಮೇಶ್ವರ ಅವರು, ಸ್ಥಳೀಯ ಶಾಸಕ ಭೀಮಸೇನ ಚಿಮ್ಮನಕಟ್ಟಿಗೆ ‘ಏನಪ್ಪಾ, ಸಾವಿರ ಕೋಟಿ ಎಂದರೆ ಭಯವಾಗುತ್ತದೆಯಾ? ಸಾವಿರ ಕೋಟಿಯ ಒಂದು ದೊಡ್ಡ ಪ್ರಾಜೆಕ್ಟ್ ಮಾಡಿ, ಕೇಂದ್ರಕ್ಕೆ ಕಳಿಸಿ. ಇದರಿಂದ ಬಾದಾಮಿಯನ್ನು ರಕ್ಷಿಸಿದಂತೆ ಆಗುತ್ತದೆ, ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು ಎಂದು ಕೀಟಲೆ ರೀತಿಯಲ್ಲಿ ಹೇಳಿದರು.
ಇದೇ ವೇಳೆ, ಹಾಸ್ಯದ ಧಾಟಿಯಲ್ಲಿ ಮಾತನಾಡಿದ ಸಚಿವರು, ನಾವೆಲ್ಲವನ್ನೂ ಕೊಟ್ಟುಬಿಟ್ಟಿದ್ದೇವೆ. ಅಕ್ಕಿ, ಬೇಳೆ, ಎಣ್ಣೆ, ಎಣ್ಣೆ(ಮದ್ಯ) ಕೂಡ ಕೊಟ್ಟುಬಿಟ್ಟಿದ್ದೇವೆ! ಎಂದು ಅಬಕಾರಿ ಸಚಿವ ತಿಮ್ಮಾಪುರ ಕಡೆಗೆ ಕೈ ತೋರಿಸಿ, ಸಭೆಯಲ್ಲಿ ನಗೆಯ ಅಲೆ ಎಬ್ಬಿಸಿದರು.
ಈ ಹೇಳಿಕೆಯಿಂದ ಬಾದಾಮಿಯ ಅಭಿವೃದ್ಧಿಗೆ ಕೇಂದ್ರದಿಂದ ನೆರವು ಪಡೆಯಲು ಒಂದು ದೊಡ್ಡ ಯೋಜನೆಯನ್ನು ರೂಪಿಸುವಂತೆ ಸಚಿವರು ಸ್ಥಳೀಯ ಶಾಸಕರಿಗೆ ಸೂಚಿಸಿದ್ದಾರೆ. ಅಲ್ಲದೇ ಗೃಹ ಸಚಿವ ಜಿ. ಪರಮೇಶ್ವರ ಅವರು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಕೊನೆಗೂ ಹೊರಹಾಕಿದ್ದಾರೆ.