ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ನಿರ್ಮಾಣವಾಗಲಿದೆ. ಇದೀಗ ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ. ಸೌರವ್ ಗಂಗೂಲಿ ಭಾರತದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದು ಪ್ರಪಂಚದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಬಯೋಪಿಕ್ ಚಿತ್ರೀಕರಣ 2026 ರಿಂದ ಪ್ರಾರಂಭವಾಗಲಿದೆ ಎಂದು ಗಂಗೂಲಿ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಪ್ರಸಿದ್ಧ ಬಾಲಿವುಡ್ ನಟ ರಾಜ್‌ಕುಮಾರ್ ರಾವ್, ಗಂಗೂಲಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸ್ವತಃ ಗಂಗೂಲಿ ಅವರೇ ತಿಳಿಸಿದ್ದಾರೆ.
2026 ರಲ್ಲಿ ಚಿತ್ರೀಕರಣ ಪ್ರಾರಂಭ
ಪಿಟಿಐ ಜೊತೆ ಮಾತನಾಡಿದ ಸೌರವ್ ಗಂಗೂಲಿ, ತಮ್ಮ ಜೀವನ ಚರಿತ್ರೆಯ ಕೆಲಸ ವೇಗವಾಗಿ ನಡೆಯುತ್ತಿದ್ದು, 2026 ರ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಬಹಿರಂಗಪಡಿಸಿದರು. ಈ ಚಿತ್ರದಲ್ಲಿ ಪ್ರಸಿದ್ಧ ನಟ ರಾಜ್‌ಕುಮಾರ್ ರಾವ್ ಗಂಗೂಲಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರಕಥೆ ಮತ್ತು ಕಥೆಯ ಕೆಲಸ ಮುಗಿದ ತಕ್ಷಣ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಚಿತ್ರೀಕರಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ, ಆದರೆ ತಯಾರಿಗೆ ಸಮಯ ತೆಗೆದುಕೊಳ್ಳಬಹುದು ಎಂದಿದ್ದಾರೆ.
ಗಂಗೂಲಿ, ಟೀಂ ಇಂಡಿಯಾ ಪರ 113 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 42.17 ಸರಾಸರಿಯಲ್ಲಿ 7212 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಸೇರಿದ್ದು, ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 239 ರನ್ ಆಗಿದೆ. ಏಕದಿನ ಕ್ರಿಕೆಟ್‌ನಲ್ಲಿ, ಅವರು 311 ಪಂದ್ಯಗಳನ್ನಾಡಿದ್ದು, 42.02 ಸರಾಸರಿಯಲ್ಲಿ 11363 ರನ್ ಗಳಿಸಿದ್ದಾರೆ. ಇದರಲ್ಲಿ 22 ಶತಕಗಳು ಸೇರಿವೆ. ಈ ಸ್ವರೂಪದಲ್ಲಿ ಅವರ ಅತ್ಯಧಿಕ ವೈಯಕ್ತಿಕ ಸ್ಕೋರ್ 183 ರನ್ ಆಗಿದೆ.
ಬಿಸಿಸಿಐ ಅಧ್ಯಕ್ಷರಾಗಿದ್ದ ಗಂಗೂಲಿ
ಸೌರವ್ ಗಂಗೂಲಿ ಅವರನ್ನು 2019 ರಲ್ಲಿ ಬಿಸಿಸಿಐ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಮೂಲಕ ಬಿಸಿಸಿಐ ಅಧ್ಯಕ್ಷರಾದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಗಂಗೂಲಿ ಪಾತ್ರರಾಗಿದ್ದರು. ಅವರಿಗೂ ಮೊದಲು, ವಿಜಯನಗರದ ಮಹಾರಾಜ್ ಕುಮಾರ್ ಈ ಹುದ್ದೆಯ ಜವಾಬ್ದಾರಿಯನ್ನು ವಹಿಸಿಕೊಂಡ ಮೊದಲ ನಾಯಕರಾಗಿದ್ದರು.
ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಬಗ್ಗೆ ಹೇಳುವುದಾದರೆ, ಅವರು ಇತ್ತೀಚೆಗೆ ಭೂಲ್ ಚೂಕ್ ಮಾಫ್ ಚಿತ್ರದಲ್ಲಿ ಅದ್ಭುತ ಅಭಿನಯ ಮಾಡಿದ್ದು, ಪ್ರೇಕ್ಷಕರು ರಾಜ್‌ಕುಮಾರ್ ರಾವ್ ಅವರ ನಟನೆಯನ್ನು ಶ್ಲಾಘಿಸಿದ್ದಾರೆ. ಇದಲ್ಲದೆ ಅವರ ಸ್ತ್ರೀ, ಸ್ತ್ರೀ 2, ಶ್ರೀಕಾಂತ್, ಮಿಸ್ಟರ್ ಅಂಡ್ ಮಿಸ್ ಮಾಹಿ, ರೂಹಿ, ಛಲಾಂಗ್ ಸಿನಿಮಾಗಳು ಜನಪ್ರಿಯತೆ ಗಳಿಸಿವೆ. ಇವೆಲ್ಲದರ ಜೊತೆಗೆ, ಅವರು ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ