ಸುದ್ದಿ ಪ್ರಸಾರ ನಮ್ಮ ಕರ್ತವ್ಯ. ಅದನ್ನೆಂದು ಬಿಟ್ಟಿಲ್ಲ. ಬಿಡುವುದೂ ಇಲ್ಲ. ಆದರೆ, ಸುದ್ದಿಯಾಚೆಗೆ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲೂ ನಾವು ಮುಂದಿದ್ದೇವೆ. ಕೊಡಗು ಹಾಗೂ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿದಾಗ ಸಂತ್ರಸ್ತರಿಗೆ ನಮ್ಮ ವೀಕ್ಷಕರ ನೆರವಿನೊಂದಿಗೆ ಮೊದಲು ಧಾವಿಸಿದ ಮಾಧ್ಯಮ ಸಂಸ್ಥೆ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್.
ಸಾಧಿಸಿದ್ದರೂ ಸಮಾಜದ ಗುರುತಿಸುವಿಕೆ, ಗೌರವದಿಂದ ವಂಚಿತರಾದವರನ್ನು ಗುರುತಿಸಿ ಗೌರವಿಸಿ ಪ್ರಚಾರ ಮಾಡುವುದುನ್ನೂ ಕೂಡ ಆರಂಭಿಸಿದ್ದು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್. ಅಸಾಮಾನ್ಯ ಸಾಧಕರಿಗಾಗಿ ಅಸಾಮಾನ್ಯ ಕನ್ನಡಿಗ, ಅತ್ಯುತ್ತಮ ರೈತರಿಗಾಗಿ ರೈತ ರತ್ನ, ಶೌರ್ಯ ಪ್ರಶಸ್ತಿ, ಉದ್ಯಮಿಗಳಿಗಾಗಿ ಕರ್ನಾಟಕ ಬ್ಯೂಸಿನೆಸ್ ಅವಾರ್ಡ್ಸ್, ಉತ್ತಮ ವೈದ್ಯಕೀಯ ಸೇವೆಗಾಗಿ ಹೆಲ್ತ್ ಎಕ್ಸಲೆನ್ಸ್ ಅವಾರ್ಡ್, ಅತ್ಯುತ್ತಮ ಇಂಜಿನಿಯರ್ಸ್ಗಳನ್ನು ಪುರಸ್ಕರಿಸಲೆಂದು ಎಮಿನೆಂಟ್ ಇಂಜಿನಿಯರ್ಸ್ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ನಮ್ಮಿಂದ ಗುರುತಿಸಲ್ಪಟ್ಟ ನಂತರದಲ್ಲಿ ಅನೇಕರಿಗೆ ರಾಜ್ಯ, ರಾಷ್ಟ್ರ, ಪದ್ಮ ಪ್ರಶಸ್ತಿಗಳು ಸಂದಿರುವುದು ನಮ್ಮ ಹೆಮ್ಮೆ.
ಕರುನಾಡಿನ ಸಾಧಕರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಶುರು ಮಾಡಿದ್ದೂ ಕೂಡ ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್. ಬಹರೇನ್, ದುಬೈ, ಮಲೇಷ್ಯಾ, ವಿಯೇಟ್ನಾಂ, ಇಂಗ್ಲೆಂಡ್, ಹಾಂಗ್ಕಾಂಗ್ ಸೇರಿ ಒಟ್ಟು ಏಳು ಅಂತಾರಾಷ್ಟ್ರೀಯ ಕಾರ್ಯಕ್ರಮ ನಡೆಸಿ ಯಶಸ್ವಿಯಾಗಿದ್ದೇವೆ.
ಇದೇ ರೀತಿಯಾಗಿ ಮಹಿಳಾ ಸಾಧಕಿಯರಿಗಾಗಿ ಸುವರ್ಣ ಸಾಧಕಿ ಪ್ರಶಸ್ತಿ ನೀಡಲೆಂದೇ ಬೆಳಗಾವಿಯಲ್ಲಿ ಸೇರಿದ್ದೇವೆ. ಉತ್ತರ ಕರ್ನಾಟಕದ ಸಾಧಕಿಯರಿಗೆ ಆದ್ಯತೆ ಕೊಟ್ಟು ಈ ಕಾರ್ಯಕ್ರಮ ಸಂಘಟಿಸಲಾಗಿದೆ. ಎಲೆಮರೆ ಕಾಯಂತೆ ಪುರುಷರಿಗೆ ಸರಿಸಮನಾಗಿ ಸೇವೆಯಲ್ಲಿ ತೊಡಗಿರುವವರನ್ನು ಹುಡುಕಿ ಹೆಕ್ಕಿ ನಿಮ್ಮ ಮುಂದೆ ತಂದಿದ್ದೇವೆ. ಈ ಪ್ರಶಸ್ತಿಯು ಪುರಸ್ಕೃತರಿಗೆ ಇನ್ನಷ್ಟು ಸಾಧಿಸಿ ಮುನ್ನಡೆಯಲು ಶಕ್ತಿ ತುಂಬಲಿ. ಇದನ್ನು ನೋಡುವವರಿಗೆ ಪ್ರೇರಣೆಯಾಗಲಿ ಎಂದು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಹಾರೈಸುತ್ತದೆ.