ನಾಟಿ ಔಷಧಿ ಸೇವಿಸಿ ಮೂವರು ದುರ್ಮರಣ: ಹನುಮಾನ್ ದೇವಸ್ಥಾನದಲ್ಲಿ ಔಷಧಿ ನೀಡುವ ಫಕಿರಪ್ಪಾ ಎಸ್ಕೇಪ್! | Three Die Illegal Drugs Alcohol Addiction Treatment Gvd

ನಾಟಿ ಔಷಧಿ ಸೇವಿಸಿ ಮೂವರು ದುರ್ಮರಣ: ಹನುಮಾನ್ ದೇವಸ್ಥಾನದಲ್ಲಿ ಔಷಧಿ ನೀಡುವ ಫಕಿರಪ್ಪಾ ಎಸ್ಕೇಪ್! | Three Die Illegal Drugs Alcohol Addiction Treatment Gvd


ಕಲಬುರಗಿ (ಆ.07): ಸೇಡಂ ತಾಲೂಕಿನ ಇಮಡಾಪುರದಲ್ಲಿ ಮದ್ಯ ಸೇವನೆ ಚಟ ಬಿಡಿಸಲು ನಾಟಿ ವೈದ್ಯ ನೀಡಿದ್ದ ಔಷಧ ಸೇವಿಸಿದ್ದ ಮೂವರು ಒದ್ದಾಡಿ, ಒದ್ದಾಡಿ  ಬುಧವಾರ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಸೇಡಂ ತಾಲೂಕಿನ ಬುರಗಪಲ್ಲಿ ಗ್ರಾಮದ ಲಕ್ಷ್ಮಿ ನರಸಿಂಹಲು ಬಟಗೇರಾ (55), ಮದಕಲ್ ಗ್ರಾಮದ ನಾಗೇಶ (32) ಹಾಗೂ ಶಹಾಬಾದ್ ಬಳಿಯ‌ ಡಕ್ಕಾ ತಾಂಡಾ ಗಣೇಶ ರಾಠೋಡ್ (30) ಮೃತರು. ಲಕ್ಷ್ಮಿ ಅವರ ಮಗ ಲಿಂಗಪ್ಪ ಅವರ ಸ್ಥಿತಿ ಗಂಭೀರವಾಗಿದ್ದು, ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಮಡಾಪುರ ಗ್ರಾಮದಲ್ಲಿ ಫಕೀರಪ್ಪ ಅಲಿಯಾಸ್ ಸಾಯಪ್ಪ ಅವರು ಕುಡಿತದ ಚಟ ಬಿಡಿಸಲು ಔಷಧ ನೀಡುತ್ತಿದ್ದರು. ನಾಲ್ವರು ಔಷಧ ಪಡೆದಿದ್ದರು ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಮದ್ಯ ಸೇವನೆ ವ್ಯಸನದಿಂದ ಹೊರಬರಲು ಕೆಲವರು ನಾಟಿ ಔಷಧ ಪಡೆದಿದ್ದರು. ಭಾನುವಾರ ಔಷಧ ಪಡೆದಿದ್ದ ಜನರು ಮತ್ತೆ ಬುಧವಾರವೂ ಬಂದು ಔಷಧ ಪಡೆದಿದ್ದರು. ಆದರೆ, ಔಷಧ ಸೇವಿಸಿದ ಕೆಲವೇ ಗಂಟೆಗಳಲ್ಲಿ ಈ ದುರಂತ ಸಂಭವಿಸಿದೆ. ಈ ಸಂಬಂಧ ಸೇಡಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಔಷಧ ನೀಡಿದ ಫಕೀರಪ್ಪ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಯಾರು ಈ ಫಕೀರಪ್ಪ?: ತಾತನ ಕಾಲದಿಂದಲೂ ನಾಟಿ ಔಷಧಿ ನೀಡುತ್ತಿರುವ ಕುಟುಂಬ ಇದು.  ತಂದೆಯ ನಂತರ ಇದೀಗ 26 ವರ್ಷದ ಫಕೀರಪ್ಪ ಕಳೆದ ಮೂರ್ನಾಲ್ಕು ವರ್ಷಗಳಿಂದ ನಾಟಿ ಔಷಧಿ ನೀಡುತ್ತಿದ್ದಾನೆ. ಕುಡಿತದ ಚಟ ಬಿಡಿಸಲು, ಮಾಟ ಮಂತ್ರ ಕಾಟ ತಪ್ಪಿಸಲು, ಕಾಮಾಲೆ, ಹಾವು , ಚೇಳು ಕಡಿತ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಔಷಧಿಯನ್ನು ಫಕೀರಪ್ಪ ನೀಡುತ್ತಿದ್ದ.ಕರ್ನಾಟಕ ಮಾತ್ರವಲ್ಲದೇ ನೆರೆಯ ಆಂದ್ರ, ತೆಲಂಗಾಣದಿಂದ ಸಾಕಷ್ಟು ಜನ ಇಲ್ಲಿಗೆ ಬರುತ್ತಿದ್ದರು.ಇದೇ ಮೊದಲ ಬಾರಿಗೆ ಈ ರೀತಿ ದುರಂತ ನಡೆದಿದೆ ಎನ್ನುತ್ತಾರೆ ಸ್ಥಳಿಯರು. 



Source link

Leave a Reply

Your email address will not be published. Required fields are marked *