ಮಲೆನಾಡಿನ ಕಾಡುಗಳಲ್ಲಿನ ಕಾಳಿಂಗ ಸರ್ಪಗಳ ಸಂರಕ್ಷಣೆಗೆಂದು ಬಂದ ರೀಸರ್ಚ್ ತಂಡವೊಂದು ತಿಮ್ಮನಿಗೆ ಮುಖಾಮುಖಿಯಾಗುತ್ತದೆ. ಕಾಳಿಂಗ ಸರ್ಪದ ಮೊಟ್ಟೆಗಳನ್ನು ತೋರಿಸುವ ಟಾಸ್ಕ್ ಕೊಡುತ್ತದೆ.
– ಪ್ರಿಯಾ ಕೆರ್ವಾಶೆ
ತಿಮ್ಮನ ಮೊಟ್ಟೆಗಳು ಸಿನಿಮಾದಲ್ಲಿ ಬಹುಮುಖ್ಯವಾಗಿ ಬರುವುದು ಮೂರು ವಿಚಾರಗಳು. 1. ಮಲೆನಾಡಿನ ಮಳೆಗಾಲದ ಚಿತ್ರ 2. ಕಾಳಿಂಗ ಸರ್ಪಗಳು, ಪಶ್ಚಿಮಘಟ್ಟಗಳ ಜೀವ ವೈವಿಧ್ಯ 3. ಮನುಷ್ಯ ಬದುಕಿನ ಸಂಘರ್ಷಗಳು. ಜೊತೆಗೆ ಇಲ್ಲಿನ ಜನಜೀವನದ ಸೂಕ್ಷ್ಮಗಳನ್ನೂ ಚಿತ್ರ ಹೇಳುತ್ತದೆ. ಕೇಂದ್ರ ಪಾತ್ರ ತಿಮ್ಮ ಮನೆ ಎದುರಿನ ಗುಡ್ಡವನ್ನು ಸಮತಟ್ಟು ಮಾಡಿ ಅಡಿಕೆ ಸಸಿ ಹಾಕಲು ಹೊರಟ ಸುದ್ದಿಯನ್ನು ಧಣಿಗಳು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಳ್ಳುವುದು.
ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಳ್ಳುವ ತಿಮ್ಮನ ದೈನ್ಯಭಾವ ಬಡವನೊಬ್ಬ ಕೊಂಚ ಬೆಳವಣಿಗೆ ಕಾಣುತ್ತಾನೆ ಎಂದಾಗ ಶ್ರೇಣೀಕೃತ ವ್ಯವಸ್ಥೆಯೊಂದು ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಸೂಕ್ಷ್ಮವಾಗಿ ನೈಜತೆಯಿಂದ ವಿವರಿಸುತ್ತದೆ. ಕಾಳಿಂಗ ಸರ್ಪದ ವಿಚಾರದಲ್ಲಿ ತಿಮ್ಮನ ಸಂಘರ್ಷಗಳನ್ನೂ ಚಿತ್ರ ಪರಿಣಾಮಕಾರಿಯಾಗಿ ಹೇಳಿದೆ. ‘ದೈವದ ಭಯ’ದ ರೂಪಕ ನಮಗೆ ‘ಚೋಮನ ದುಡಿ’ ಕಥೆಯ ಸನ್ನಿವೇಶವೊಂದನ್ನು ನೆನಪಿಸುತ್ತದೆ.
ಧಣಿಯ ಪಾತ್ರ ಏಕಕಾಲಕ್ಕೆ ಪ್ರಾಜ್ಞನೊಬ್ಬನ ಸೂಕ್ಷ್ಮ ಮತ್ತು ಅಜ್ಞಾನಗಳೆರಡನ್ನೂ ತೋರಿಸಿದ್ದು ಚೆನ್ನಾಗಿದೆ. ಕತೆಯ ವಿಚಾರಕ್ಕೆ ಬಂದರೆ ಮಲೆನಾಡಿನ ಕಾಡುಗಳಲ್ಲಿನ ಕಾಳಿಂಗ ಸರ್ಪಗಳ ಸಂರಕ್ಷಣೆಗೆಂದು ಬಂದ ರೀಸರ್ಚ್ ತಂಡವೊಂದು ತಿಮ್ಮನಿಗೆ ಮುಖಾಮುಖಿಯಾಗುತ್ತದೆ. ಕಾಳಿಂಗ ಸರ್ಪದ ಮೊಟ್ಟೆಗಳನ್ನು ತೋರಿಸುವ ಟಾಸ್ಕ್ ಕೊಡುತ್ತದೆ. ಅದಕ್ಕೆ ದೊಡ್ಡ ಮೊತ್ತದ ಹಣದ ಆಮಿಷವನ್ನೂ ಕೊಡುತ್ತದೆ.
ತಿಮ್ಮನ ಮೊಟ್ಟೆಗಳು
ತಾರಾಗಣ: ಕೇಶವ್ ಗುಟ್ಟಳಿಕೆ, ಆಶಿಕಾ ಸೋಮಶೇಖರ್, ಪ್ರಗತಿ ಪ್ರಭು, ಸುಚೇಂದ್ರ ಪ್ರಸಾದ್
ನಿರ್ದೇಶನ: ರಕ್ಷಿತ್ ತೀರ್ಥಹಳ್ಳಿ
ರೇಟಿಂಗ್: 3
ಮಲೆನಾಡಿನ ಮಹಾಮಳೆಗೆ ತನ್ನ ಜೋಪಡಿಯನ್ನು ಉಳಿಸಿಕೊಳ್ಳಲು ಒದ್ದಾಡುವ ತಿಮ್ಮ ಈ ಟಾಸ್ಕ್ ಅನ್ನು ಒಪ್ಪಿಕೊಳ್ಳುತ್ತಾನೆ. ಕಾಳಿಂಗ ಸರ್ಪದ ಮೊಟ್ಟೆಗಳ ಮೇಲೆ ನಡೆಯುವ ಪ್ರಯೋಗವೇನು? ಅದಕ್ಕೆ ಸ್ಥಳೀಯರು ಯಾಕೆ ಪ್ರತಿರೋಧ ತೋರುತ್ತಾರೆ, ನಿರ್ಣಾಯಕ ಹಂತದಲ್ಲಿ ಪರಿಸ್ಥಿತಿ, ಮನಸಾಕ್ಷಿ ಇವರೆಡರಲ್ಲಿ ತಿಮ್ಮನ ಆಯ್ಕೆ ಯಾವುದು ಎಂಬುದೇ ಕಥೆಯ ಅಂತರಾಳ. ಅಲ್ಲಲ್ಲಿ ಎಳೆತ ಹೆಚ್ಚಾಯಿತು ಎಂದು ಕಂಡರೂ ಮಲೆನಾಡಿನ ಬದುಕಿನ ನೈಜತೆಯನ್ನು ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಚಿತ್ರದಲ್ಲಾಗಿದೆ.