ಸಚಿವ ರಾಜಣ್ಣ ಅವರ ಹುಟ್ಟುಹಬ್ಬಕ್ಕೆ ಬಂದಿದ್ದ ಮಹಿಳೆ ಬಸ್‌ನಲ್ಲಿ ಸಾವು. ತುಮಕೂರಿನಿಂದ ವಾಪಸ್ಸಾಗುವಾಗ ಗುಬ್ಬಿ ಬಳಿ ಸಂಭವಿಸಿದ ದುರ್ಘಟನೆ.
ತುಮಕೂರು (ಜೂ.21): ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತುಮಕೂರಿಗೆ ಬಂದಿದ್ದ 55 ವರ್ಷದ ಸುನಂದಮ್ಮ ಎಂಬ ಮಹಿಳೆ, ಕಾರ್ಯಕ್ರಮ ಮುಗಿಸಿ ಊರಿಗೆ ವಾಪಸ್ ಹೋಗುವಾಗ ಬಸ್‌ನಲ್ಲೇ ಹೃದಯಾಘಾತದಿಂದ ಸಾವನಪ್ಪಿದ ದಾರುಣ ಘಟನೆ ಗುಬ್ಬಿ ಬಳಿ ನಡೆದಿದೆ.
ತುರುವೇಕೆರೆ ತಾಲೂಕಿನ ಸೀಗೆಹಳ್ಳಿ ಗ್ರಾಮದ ನಿವಾಸಿಯಾದ ಸುನಂದಮ್ಮ, ಗ್ರಾಮದ ಇತರ ಮಹಿಳೆಯರೊಂದಿಗೆ ಬೆಳಗ್ಗೆ ಬಸ್‌ನಲ್ಲಿ ತುಮಕೂರಿನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ ವೇಳೆ ತಲೆಸುತ್ತು ಎಂದು ತಿಳಿಸಿದ್ದ ಸುನಂದಮ್ಮ, ಊಟ ಮುಗಿಸಿ ವಾಪಸ್ ಗ್ರಾಮಕ್ಕೆ ಹೋಗುವ ಮಾರ್ಗಮಧ್ಯೆ ಗುಬ್ಬಿ ಸಮೀಪ ಸಾವನಪ್ಪಿದ್ದಾರೆ.
ಮೃತದೇಹವನ್ನು ಬಸ್‌ನಿಂದ ಇಳಿಸಿ ಗುಬ್ಬಿ ಶವಗಾರಕ್ಕೆ ರವಾನಿಸಲಾಗಿದೆ. ಗುಬ್ಬಿ ತಹಶೀಲ್ದಾರ್ ಸಮ್ಮುಖದಲ್ಲಿ ಪೊಲೀಸರು ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ರಾಜಣ್ಣ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗದಿಂದ ಬಸ್‌ಗಳ ಮೂಲಕ ಜನರನ್ನು ಕರೆತರಲಾಗಿತ್ತು ಎನ್ನಲಾಗಿದೆ. ಈ ಘಟನೆಯಿಂದ ಸೀಗೆಹಳ್ಳಿ ಗ್ರಾಮದಲ್ಲಿ ಶೋಕದ ವಾತಾವರಣ ಮನೆಮಾಡಿದೆ.