VIDEO: ಕೊನೆಯ ಎಸೆತದಲ್ಲಿ ಸಿಕ್ಸ್​… ದಾಖಲೆಯ ರನ್ ಚೇಸ್​..!

VIDEO: ಕೊನೆಯ ಎಸೆತದಲ್ಲಿ ಸಿಕ್ಸ್​… ದಾಖಲೆಯ ರನ್ ಚೇಸ್​..!


ಅಮೆರಿಕದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯ 18ನೇ ಪಂದ್ಯದಲ್ಲಿ ಸಿಯಾಟಲ್ ಓರ್ಕಾಸ್ ತಂಡವು ರೋಚಕ ಜಯ ಸಾಧಿಸಿದೆ. ಅದು ಕೂಡ ಕೊನೆಯ ಎಸೆತದಲ್ಲಿ ಸಿಕ್ಸ್​ ಸಿಡಿಸುವ ಮೂಲಕ ಎಂಬುದು ವಿಶೇಷ. ಈ ಗೆಲುವಿನ ರೂವಾರಿ ಎಡಗೈ ದಾಂಡಿಗ ಶಿಮ್ರಾನ್ ಹೆಟ್ಮೆಯರ್. ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ನ್ಯೂಯಾರ್ಕ್ ಪರ ನಿಕೋಲಸ್ ಪೂರನ್ (108) ಶತಕ ಸಿಡಿಸಿದ್ದರು. ಈ ಸೆಂಚುರಿ ನೆರವಿನೊಂದಿಗೆ ಎಂಐ ನ್ಯೂಯಾರ್ಕ್​ ತಂಡವು 4 ವಿಕೆಟ್ ಕಳೆದುಕೊಂಡು 237 ರನ್​ ಕಲೆಹಾಕಿತು.

239 ರನ್​ಗಳ ಗುರಿ ಬೆನ್ನತ್ತಿದ ಸಿಯಾಟಲ್ ಓರ್ಕಾಸ್ ಪರ ಶಿಮ್ರಾನ್ ಹೆಟ್ಮೆಯರ್ ಸಿಡಿಲಬ್ಬದ ಬ್ಯಾಟಿಂಗ್ ಪ್ರದರ್ಶಿಸಿದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆಟ್ಮೆಯರ್ ಎಂಐ ನ್ಯೂಯಾರ್ಕ್ ಬೌಲರ್​ಗಳನ್ನು ಬೆಂಡೆತ್ತುವ ಮೂಲಕ ರನ್​ ಮಳೆ ಸುರಿಮಳೆಗೈದರು. ಪರಿಣಾಮ 19 ಓವರ್​ಗಳ ಮುಕ್ತಾಯದ ವೇಳೆ ಸಿಯಾಟಲ್ ಓರ್ಕಾಸ್ ತಂಡವು 7 ವಿಕೆಟ್ ಕಳೆದುಕೊಂಡು 229 ರನ್​ ಕಲೆಹಾಕಿತು.

ಅದರಂತೆ ಕೊನೆಯ ಓವರ್​ನಲ್ಲಿ ಸಿಯಾಟಲ್ ತಂಡಕ್ಕೆ 9 ರನ್​ಗಳ ಅವಶ್ಯಕತೆಯಿತ್ತು. ಆದರೆ ಸ್ಟ್ರೈಕ್​ನಲ್ಲಿದ್ದ ಜಸ್​ದೀಪ್ ಸಿಂಗ್ ಮೊದಲೆರಡು ಎಸೆತಗಳಲ್ಲಿ ಯಾವುದೇ ರನ್​ಗಳಿಸಲಿಲ್ಲ. ಇನ್ನು ಮೂರನೇ ಎಸೆತದಲ್ಲಿ ಸಿಂಗಲ್ ತೆಗೆದರು. ಪರಿಣಾಮ ಕೊನೆಯ 3 ಎಸೆತಗಳಲ್ಲಿ 8 ರನ್​ಗಳ ಅವಶ್ಯಕತೆ. ಈ ಹಂತದಲ್ಲಿ ಶಿಮ್ರಾನ್ ಹೆಟ್ಮೆಯರ್ ಒಂದು ಬಾಲ್ ಡಾಟ್ ಮಾಡಿದರು. ಆದರೆ 5ನೇ ಎಸೆತದಲ್ಲಿ 2 ರನ್​ ಓಡಿದರು.

ಕೀರನ್ ಪೊಲಾರ್ಡ್ ಎಸೆದ ಅಂತಿಮ ಓವರ್​ನ ಕೊನೆಯ ಎಸೆತದಲ್ಲಿ ಸಿಯಾಟಲ್ ಓರ್ಕಾಸ್ ತಂಡಕ್ಕೆ 6 ರನ್​ಗಳ ಅವಶ್ಯಕತೆಯಿತ್ತು. ಈ ಎಸೆತದಲ್ಲಿ ಥರ್ಡ್​ಮ್ಯಾನ್​ನತ್ತ ಆಕರ್ಷಕ ಸಿಕ್ಸ್ ಸಿಡಿಸುವ ಮೂಲಕ ಶಿಮ್ರಾನ್ ಹೆಟ್ಮೆಯರ್ ಸಿಯಾಟಲ್ ಓರ್ಕಾಸ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಇನ್ನು ಈ ಪಂದ್ಯದಲ್ಲಿ 40 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ಅಜೇಯ 97 ರನ್ ಬಾರಿಸಿ ಹೆಟ್ಮೆಯರ್ ಗೆಲುವಿನ ರೂವಾರಿ ಎನಿಸಿಕೊಂಡರು.

ದಾಖಲೆಯ ಚೇಸಿಂಗ್:

ಮೇಜರ್ ಲೀಗ್ ಕ್ರಿಕೆಟ್​ ಟೂರ್ನಿಯಲ್ಲಿ 238 ರನ್​ಗಳನ್ನು ಚೇಸ್ ಮಾಡುವ ಮೂಲಕ ಸಿಯಾಟಲ್ ಓರ್ಕಾಸ್ ತಂಡವು ಅತ್ಯಧಿಕ ಟಾರ್ಗೆಟ್ ಬೆನ್ನತ್ತಿ ಗೆದ್ದ ದಾಖಲೆ ಬರೆದಿದೆ. ವಿಶೇಷ ಎಂದರೆ ಇದು ಸಿಯಾಟಲ್ ಓರ್ಕಾಸ್ ತಂಡ ಈ ಬಾರಿಯ ಮೊದಲ ಗೆಲುವುವಾಗಿದೆ. ಅಂದರೆ ಈವರೆಗೆ ಆಡಿದ 6 ಪಂದ್ಯಗಳಲ್ಲಿ ಮೊದಲ 5 ಮ್ಯಾಚ್​ಗಳಲ್ಲಿ ಓರ್ಕಾಸ್ ಪಡೆ ಸೋಲನುಭವಿಸಿತ್ತು. ಇದೀಗ ದಾಖಲೆ ಗೆಲುವಿನೊಂದಿಗೆ ಸಿಯಾಟಲ್ ಓರ್ಕಾಟ್ ಜಯದ ಖಾತೆ ತೆರೆದಿದೆ.

 



Source link

Leave a Reply

Your email address will not be published. Required fields are marked *