ಮಧುಗಿರಿ: ಪಟ್ಟಣದಲ್ಲಿನ ಹೈಸ್ಕೂಲ್ ರಸ್ತೆಯ ಎಸ್ ಬಿ ಐ ಶಾಖೆಯಲ್ಲಿ ಹಾಡುಹಗಲೇ ನಿವೃತ್ತ ಶಿಕ್ಷಕರೊಬ್ಬರ 1.75ಲಕ್ಷ ರೂ ಹಣವನ್ನು ದುಷ್ಕರ್ಮಿಗಳು ಕದ್ದಿರುವ ಘಟನೆ ಬುಧವಾರ ಮದ್ಯಾನ್ಹ ನಡೆದಿದೆ.
ಕಸಬಾ ಹೋಬಳಿಯ ಬಂದ್ರೇಹಳ್ಳಿಯ ನಿವೃತ್ತ ಶಿಕ್ಷಕ ಗಂಗಪ್ಪ ಪಟ್ಟಣದ ಕೆ .ಆರ್. ಬಡಾವಣೆಯಲ್ಲಿ ವಾಸ ಮಾಡುತ್ತಿದ್ದು, ಮಗನ ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಹಣವನ್ನು ತಮ್ಮ ಖಾತೆಗೆ ತುಂಬಲು ಪ್ಲಾಸ್ಟಿಕ್ ಕವರ್‌ನಲ್ಲಿ 1.75 ಲಕ್ಷ ರೂಗಳನ್ನು ತಂದಿದ್ದರು. ಹಣ ಕಟ್ಟಲು ನಿಂತಿದ್ದ ಸಂದರ್ಭದಲ್ಲಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಬ್ಲೇಡ್ ಮೂಲಕ ಕವರ್ ಕತ್ತರಿಸಿ ಹಣ ವನ್ನು ಎಗರಿಸಿದ್ದಾರೆ.
ಪ್ರಕರಣ ನಡೆದಿದ್ದು ಹೇಗೆ: ಬಂದ್ರೆಹಳ್ಳಿ ಗ್ರಾ.ಪಂ.ಸದಸ್ಯ ಮಂಜುನಾಥ್ ಸಹೋದರ ಗಂಗಪ್ಪ ಹಣಕಟ್ಟಲು ಬಂದಾಗ ಹಣ ಕಟ್ಟಿಸಿಕೊಳ್ಳುವವರು ನಿಮ್ಮ ಪಾನ್ ಕಾರ್ಡ್ ಕೆವೈಸಿ ಮಾಡಿಸುವಂತೆ ತಿಳಿಸಿದ್ದಾರೆ. ಹೊರಬಂದು ಜೆರಾಕ್ಸ್ ಪ್ರತಿ ತಂದು ಚಲನ್ ತುಂಬುತ್ತಿದ್ದ ವೇಳೆ ಇಬ್ಬರು ಮಹಿಳೆಯರು ಅಕ್ಕಪಕ್ಕ ನಿಂತಿದ್ದರಂತೆ. ಅವರು ಚಲನ್ ತುಂಬುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಈ ಘಟನೆಯ ಬಗ್ಗೆ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು ಮಧುಗಿರಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.