ಗದಗ, ಅಕ್ಟೋಬರ್ 27: ಪ್ಲಾಸ್ಟಿಂಗ್ ಕಿತ್ತು ಬಂದಿರುವ ಗೋಡೆ, ಕುಸಿದು ಬಿದ್ದಿರುವ ಮೇಲ್ಚಾವಣಿ, ಆಗಲೋ ಈಗಲೋ ಬೀಳುವ ಹಂತದಲ್ಲಿರುವ ಶತಮಾನದ ಸರ್ಕಾರಿ ಶಾಲೆ. ಜೀವ ಕೈಯಲ್ಲಿ ಹಿಡಿದು ಕೂತಿರುವ ಮಕ್ಕಳು. ಈ ದೃಶ್ಯ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇದು ಗದಗ ನಗರದ ಬೆಟಗೇರಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಹಿಂದೆ ಈ ಶಾಲೆಯಲ್ಲಿ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದಿದರು. ಆದ್ರೀಗ ಬೆರಳಣಿಕೆಯಷ್ಟು ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದಾರೆ. ಕಾರಣ ಇಡೀ ಶಾಲೆಯ ಕಟ್ಟಡ ಕುಸಿದು ಬೀಳುವ ಸ್ಥಿತಿ ತಲುಪಿದೆ.
ಅಪಾಯಕಾರಿ ಕಟ್ಟಡ ನೋಡಿ ಈ ಶಾಲೆಗೆ ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ಬಂದು ಹೋಗುತ್ತಾರೆ ಬಿಟ್ಟರೆ ಯಾವುದಕ್ಕೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಹಳೆ ವಿದ್ಯಾರ್ಥಿಗಳು ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಟಗೇರಿಯಲ್ಲಿ ಸಾಕಷ್ಟು ಬಡ ಕುಟುಂಬಗಳೇ ಇವೆ. ಸ್ಥಳೀಯ ಸರ್ಕಾರಿ ಶಾಲೆಯೇ ಆಸರೆ. ಆದರೆ ಮುರುಕಲು ಶಾಲೆಯ ಕಟ್ಟಡ ನೋಡಿ ತಮ್ಮ ಮಕ್ಕಳಿಗೆ ಈ ಶಾಲೆಗೆ ಸೇರಿಸಲು ಹಿಂದೇಟು ಹಾಕಲು. ಕಳೆದ ವರ್ಷ 12 ಲಕ್ಷ ರೂ. ಖರ್ಚು ಶಾಲೆ ಮಾಡಿ ರಿಪೇರಿ ಮಾಡಿದೆ. ಆದರೆ ಮೇಲ್ಛಾವಣಿಗೆ ತಗಡಿನ ಶೀಟ್ ಹಾಕಿ 12 ಲಕ್ಷ ರೂ. ಗುಳುಂ ಮಾಡಿರುವ ಆರೋಪ ಕೇಳಿಬರುತ್ತಿದೆ. ಇನ್ನಾದರೂ ಶಿಕ್ಷಣ ಸಚಿವರು ಇತ್ತ ಗಮನ ಹರಿಸಬೇಕಾಗಿದೆ. ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಈ ಶಾಲೆಗೆ ಕಾಯಕಲ್ಪ ನೀಡಬೇಕಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ