Headlines

‘45’ ಸಿನಿಮಾ ವಿಮರ್ಶೆ; ಅರ್ಜುನ್ ಜನ್ಯ ಮ್ಯಾಜಿಕ್​​ನಲ್ಲಿ ‘ಶಿವ’ತಾಂಡವ;

‘45’ ಸಿನಿಮಾ ವಿಮರ್ಶೆ; ಅರ್ಜುನ್ ಜನ್ಯ ಮ್ಯಾಜಿಕ್​​ನಲ್ಲಿ ‘ಶಿವ’ತಾಂಡವ;


ಅರ್ಜುನ್ ಜನ್ಯ ಅವರು ಇಷ್ಟು ವರ್ಷಗಳ ಕಾಲ ಮ್ಯೂಸಿಕ್ ಲೋಕದಲ್ಲಿ ಗಮನ ಸೆಳೆದವರು. ಅವರು ಈಗ ’45’ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರವೆಂದರೆ ದೊಡ್ಡ ಚಾಲೆಂಜ್ ಇರುತ್ತದೆ. ಈ ಚಾಲೆಂಜ್ ಮಧ್ಯೆ ಅರ್ಜುನ್ ಅವರು ಮಲ್ಟಿ ಸ್ಟಾರರ್ ಸಿನಿಮಾ ಹಾಗೂ ಬಿಗ್ ಬಜೆಟ್ ನ ಆಯ್ಕೆ ಮಾಡಿಕೊಂಡಿದ್ದಾರೆ. ಗ್ರಾಫಿಕ್ಸ್ ಕೆಲಸ ಕೂಡ ಬಹುವಾಗಿರೋ ’45’ ಚಿತ್ರದ ವಿಮರ್ಶೆ ಇಲ್ಲಿದೆ.

ವಿನಯ್ (ರಾಜ್ ಬಿ ಶೆಟ್ಟಿ) ಸಾಮಾನ್ಯ ಐಟಿ ಉದ್ಯೋಗಿ. ನಿತ್ಯ ಕಚೇರಿಗೆ ಬರುವ ಕಾಯಕ ಅವನದ್ದು. ತಾಯಿ ಹಾಗೂ ಪ್ರೀತಿಸಿದಾಕೆ ಆತನ ಪ್ರಪಂಚ. ಈ ಪ್ರಪಂಚದ ಒಳಗೆ ರಾಯಪ್ಪ (ಉಪೇಂದ್ರ) ಹಾಗೂ ಶಿವಪ್ಪನ (ಶಿವರಾಜ್ ಕುಮಾರ್) ಆಗಮನವಾಗುತ್ತದೆ. ಒಂದು ಕನಸಿನಿಂದ ಜೀವನ ಕಲಸು ಮೇಲೋಗರ ಆಗುತ್ತದೆ. ನಿಜ ಯಾವುದು-ಸುಳ್ಯವುದು ಎಂದು ತಿಳಿಯಲು ಆತ ವಿಫಲನಾಗುತ್ತಾನೆ. ಅಲ್ಲಿಂದ ಆತನ ಓಡಾಟ ಶುರು. 45 ದಿನಗಳ ಆಟ ಕೂಡ ಶುರುವಾಗುತ್ತದೆ. ಅಲ್ಲಿ ರಾಯಪ್ಪ-ಶಿವಪ್ಪ ಹೇಗೆ ಬರುತ್ತಾರೆ? ಏಕೆ ಬರುತ್ತಾರೆ ಎಂದೆಲ್ಲ ಹೇಳುತ್ತಾ ಹೋದರೆ ಸಿನಿಮಾದ ಸ್ವಾದ ಉಳಿದುಕೊಳ್ಳುವುದಿಲ್ಲ. ಅದನ್ನು ಥಿಯೇಟರ್ ನಲ್ಲಿ ನೋಡಿಯೇ ಆನಂದಿಸಬೇಕು.

ಅರ್ಜುನ್ ಜನ್ಯಗೆ ಫುಲ್ ಮಾರ್ಕ್ಸ್

ಈವರೆಗೆ ಎಲ್ಲರೂ ಅರ್ಜುನ್ ಜನ್ಯ ಅವರನ್ನು ಮ್ಯೂಸಿಕ್ ಡೈರೆಕ್ಟರ್ ಆಗಿ ಮಾತ್ರ ನೋಡಿದ್ದಾರೆ. ಅದ್ಭುತ ಮೆಲೋಡಿ ಹಾಡುಗಳನ್ನು ಅವರು ಚಿತ್ರರಂಗಕ್ಕೆ ತಿಳಿಸಿದ್ದಾರೆ. ತಮ್ಮಲ್ಲೊಬ್ಬ ಒಳ್ಳೆಯ ನಿರ್ದೇಶಕ ಇದ್ದಾನೆ ’45’ ಸಿನಿಮಾ ಮೂಲಕ ತೋರಿಸಿದ್ದಾರೆ. ಈ ಸಿನಿಮಾ ನೋಡಿದರೆ ಅರ್ಜುನ್ ಅವರು ಅದೆಷ್ಟೋ ವರ್ಷಗಳಿಂದ ತಮ್ಮಲ್ಲಿರುವ ನಿರ್ದೇಶಕರು ಪೋಷಿಸಿಕೊಂಡು ಬರುತ್ತಿದ್ದರೇನೋ ಎಂದೆನಿಸುತ್ತದೆ.

ಸಾವಿನ ಬಳಿಕದ ಮುಂದೇನು?

‘ಸಾವಿನ ಬಳಿಕ ಮುಂದೇನು?’ ಈ ರೀತಿಯ ಪ್ರಶ್ನೆ ಎಲ್ಲರಿಗೂ ಇರುತ್ತದೆ. ಅದಕ್ಕೆ ಅದರದ್ದೇ ಆದ ಉತ್ತರಗಳು ಸಿಗುತ್ತವೆ. ‘ಗರುಡ ಪುರಾಣ’ದ ಪ್ರತಿ ಪುಟ ತಿರುವು ಹಾಕಿದಾಗಲೂ ಹೊಸದೊಂದು ವಿಷಯ, ಜೀವನದ ಮತ್ತೊಂದು ರೂಪ ಗೊತ್ತಾಗುತ್ತದೆ. ಈ ವಿಷಯಗಳು ಸಿನಿಮಾದಲ್ಲೂ ಟ್ರಾವೆಲ್ ಆಗುತ್ತವೆ. ಗರುಡ ಪುರಾಣವನ್ನು ಸಿನಿಮಾ ಕಥೆಗೆ ಬ್ಲೆಂಡ್ ಮಾಡಿದ ಅರ್ಜುನ್ ಜನ್ಯ ಸ್ಟೈಲ್ ಇಷ್ಟವಾಗುತ್ತದೆ.

ಇಲ್ಲಿ ಅರ್ಜುನ್ ಜನ್ಯ ಅವರು ಮತ್ತೊಂದು ತಂತ್ರಜ್ಞಾನದ ಬಗ್ಗೆ ಮಾತನಾಡಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಈ ಮೊದಲಿನ ಕಲ್ಟ್ ಸಿನಿಮಾಗಳ ದೃಶ್ಯಗಳನ್ನು ರೀ ಕ್ರಿಯೇಟ್ ಮಾಡಿದ್ದಾರೆ. ಹೊಂದಿಕೆ ಆಗೋ ಹಳೆಯ ಹಾಡುಗಳು ದೃಶ್ಯದ ಸ್ವಾದ ಹೆಚ್ಚಿಸಿವೆ. ಗ್ರಾಫಿಕ್ಸ್ ವಿಷಯದಲ್ಲಿ ಎಲ್ಲಿಯೂ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಸುಧಾರಾಣಿಯ ಪಾತ್ರದ ಅವಶ್ಯಕತೆ ಇರಲಿಲ್ಲ ಎಂದನಿಸದೇ ಇರದು.

ಉಪ್ಪಿ vs ರಾಜ್

ಮಧ್ಯಮ ವರ್ಗದ ವ್ಯಕ್ತಿಯಾಗಿ ವಿನಯ್ನ ಒಡ್ಡಾಟ, ಭಾವನಾತ್ಮಕವಾಗಿ ಸೆಳೆಯುವ ರೀತಿ ಇಷ್ಟವಾಗುತ್ತದೆ. ಆತನ ಸಹಾಯಕತೆ ನೋವು ತರಿಸುತ್ತದೆ. ಅವರು ನಟನೆಯಲ್ಲಿ ಹೆಚ್ಚು ಅಂಕ ಪಡೆಯುತ್ತಾರೆ. ಅವರ ಈ ಹಿಂದಿನ ಸಿನಿಮಾಗಳ ಪಾತ್ರಗಳು ಇಲ್ಲಿ ಬಂದು ಹೋಗುತ್ತವೆ. ಇನ್ನು ರಾಯಪ್ಪನ ಪಾತ್ರದಲ್ಲಿ ಉಪ್ಪಿ ತಮ್ಮ ಖದರ ತೋರಿಸಿದ್ದಾರೆ. ಸಿಗಾರ್ ಸೇದುವ ಸ್ಟೈಲ್, ಹೇರ್ ಸ್ಟೈಲ್, ಭಿನ್ನ ಉಡುಗೆ, ಚಿತ್ರ-ವಿಚಿತ್ರ ವಾಹನಗಳು ಅವರ ಮ್ಯಾನರಿಸಂಗೆ ಹೊಸ ಖದರ್ ನೀಡಿದೆ. ಕಣ್ಣಿನ ಮೂಲಕವೇ ಅವರು ಮಾತನಾಡುತ್ತಾರೆ. ಕೆಲ ದೃಶ್ಯಗಳಲ್ಲಿ ರಾಕ್ಷಸನ ರೀತಿ ಕಾಣಿಸುತ್ತಾರೆ. ಸಿನಿಮಾ ಜೊತೆಗೆ ಉಪ್ಪಿ vs ರಾಜ್ ಎಂಬಂತಾಗುತ್ತದೆ.

ಶಿವಣ್ಣನ ಮೇಲುಗೈ

ಶಿವರಾಜ್ ಕುಮಾರ್ ಶಿವಪ್ಪ ಪಾತ್ರ ಸಿನಿಮಾ ಮೆರಗು ಹೆಚ್ಚಿಸಿದೆ. ಅವರು ಇಡೀ ಚಿತ್ರಕ್ಕೆ ಬೇರೆಯದೇ ತೂಕ ಕೊಡುತ್ತಾರೆ. ಲೇಟ್ ಆಗಿ ಎಂಟ್ರಿ ಕೊಟ್ಟರೂ ನೋಟವನ್ನು ಮನಸ್ಸಿನಲ್ಲಿ ಆವರಿಸಿಕೊಂಡು ಬಿಡುತ್ತಾರೆ. ಶಿವಣ್ಣ ತಮ್ಮ ನಟನೆ ಮೂಲಕ ಒಂದು ಹೆಜ್ಜೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಇದು ಅವರ ಹೆಚ್ಚುಗಾರಿಕೆ. ಅವರು ಚಿತ್ರದಲ್ಲಿ ವಿವಿಧ ಅವತಾರದಲ್ಲಿ ಕಾಣಿಸಿಕೊಳ್ಳುವುದರಿಂದ ಫ್ಯಾನ್ಸ್‌ಗೆ ಹಬ್ಬ ಫಿಕ್ಸ್. ಅದರಲ್ಲೂ ಕೊನೆಯಲ್ಲಿ ಬರೋ ಶಿವತಾಂಡವ ಹೊಸ ಗುಂಗು ಹತ್ತಿಸುತ್ತದೆ.

ಲಾರಿಯಲ್ಲಿ ಬೈಕ್ ಚೇಸಿಂಗ್ ದೃಶ್ಯ, ಮಾರುಕಟ್ಟೆ ಮೇಲಿನ ದಾಳಿ ಹಾಗೂ ಸಿನಿಮಾದ ಕೊನೆಯ 45 ನಿಮಿಷದ ಮನರಂಜನೆಯ ರಸದೌತಣ ಬಡಿಸುತ್ತದೆ. ಸಿನಿಮಾದ ಬಿಜಿಎಂ ಅಲ್ಲಿ ಅರ್ಜುನ್ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಈ ಚಿತ್ರದಲ್ಲಿ ಲಾಜಿಕ್ ಗೆ ಜಾಗವಿಲ್ಲ. ಇಲ್ಲಿ ಎಲ್ಲವೂ ಅರ್ಜುನ್ ಜನ್ಯ ಮ್ಯಾಜಿಕ್ ಮಾತ್ರ. ಡಾಟ್‌ಗಳನ್ನು ಕೂಡಿಸದೇ ಸಿನಿಮಾ ನೋಡಿದರೆ ಇಷ್ಟ ಆಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *