ತೆಕ್ಕಲಕೋಟೆ ಉತ್ಖನನದಲ್ಲಿ 3ನೇ ಅಸ್ಥಿಪಂಜರ ಪತ್ತೆ; ಪ್ರಾಗೈತಿಹಾಸಿಕ ಕಾಲದ ಸಮಾಧಿ ಪದ್ದತಿ ಬಿಚ್ಚಿಟ್ಟ ಕುರುಹುಗಳು! | Ballari Tekkalakote Excavation Third Human Skeleton Found Archaeology News Sat

ತೆಕ್ಕಲಕೋಟೆ ಉತ್ಖನನದಲ್ಲಿ 3ನೇ ಅಸ್ಥಿಪಂಜರ ಪತ್ತೆ; ಪ್ರಾಗೈತಿಹಾಸಿಕ ಕಾಲದ ಸಮಾಧಿ ಪದ್ದತಿ ಬಿಚ್ಚಿಟ್ಟ ಕುರುಹುಗಳು! | Ballari Tekkalakote Excavation Third Human Skeleton Found Archaeology News Sat



ತೆಕ್ಕಲಕೋಟೆ ಉತ್ಖನನದಲ್ಲಿ 3ನೇ ಅಸ್ಥಿಪಂಜರ ಪತ್ತೆ; ಪ್ರಾಗೈತಿಹಾಸಿಕ ಕಾಲದ ಸಮಾಧಿ ಪದ್ದತಿ ಬಿಚ್ಚಿಟ್ಟ ಕುರುಹುಗಳು! | Ballari Tekkalakote Excavation Third Human Skeleton Found Archaeology News Sat

ಬಳ್ಳಾರಿಯ ತೆಕ್ಕಲಕೋಟೆ ಉತ್ಖನನದಲ್ಲಿ ಅಂತಿಮ ಹಂತದ ಕಾರ್ಯಾಚರಣೆ ವೇಳೆ ಮೂರನೇ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ತಲೆಬುರುಡೆ ಮತ್ತು ಮಡಿಕೆ ಅವಶೇಷಗಳು ಅಂದಿನ ಅಂತ್ಯಕ್ರಿಯೆಯ ಪದ್ಧತಿಗಳ ಮೇಲೆ ಬೆಳಕು ಚೆಲ್ಲಿದ್ದು, ಈ ಐತಿಹಾಸಿಕ ಪ್ರದೇಶವನ್ನು ಸಂರಕ್ಷಿತ ಸ್ಥಳವೆಂದು ಘೋಷಿಸಲು ಪುರಾತತ್ವ ಇಲಾಖೆ ಮುಂದಾಗಿದೆ.

ಬಳ್ಳಾರಿ (ಫೆ.13): ಇತಿಹಾಸ ಪ್ರೇಮಿಗಳು ಮತ್ತು ಪುರಾತತ್ವ ಸಂಶೋಧಕರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ಉತ್ಖನನ ಸ್ಥಳದಲ್ಲಿ ಅಂತಿಮ ಹಂತದ ಕಾರ್ಯಾಚರಣೆಯ ವೇಳೆ ಮತ್ತೊಂದು ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ವೈಜ್ಞಾನಿಕ ಉತ್ಖನನದಲ್ಲಿ ಇದೀಗ 3ನೇ ಮಾನವ ಅಸ್ಥಿಪಂಜರ ಪತ್ತೆಯಾಗಿದ್ದು, ಈ ಭಾಗದ ಪ್ರಾಗೈತಿಹಾಸಿಕ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲುವ ಸಾಧ್ಯತೆ ದಟ್ಟವಾಗಿದೆ.

ಅಂತಿಮ ಹಂತದಲ್ಲಿ ಸಿಕ್ಕ ಅಚ್ಚರಿ:

ತೆಕ್ಕಲಕೋಟೆ ಪಟ್ಟಣದ ಬೆಟ್ಟದ ಸಾಲುಗಳಲ್ಲಿ ಪುರಾತತ್ವ ಇಲಾಖೆಯ ನೇತೃತ್ವದಲ್ಲಿ ಹಲವು ದಿನಗಳಿಂದ ಉತ್ಖನನ ನಡೆಯುತ್ತಿದೆ. ಕಳೆದ ವಾರವಷ್ಟೇ ಎರಡು ಮಾನವ ಅಸ್ಥಿಪಂಜರಗಳು ಇಲ್ಲಿ ಪತ್ತೆಯಾಗಿ ಸುದ್ದಿಯಾಗಿದ್ದವು. ಇಂದು ಉತ್ಖನನ ಕಾರ್ಯಾಚರಣೆಯನ್ನು ಅಧಿಕೃತವಾಗಿ ಮುಕ್ತಾಯಗೊಳಿಸುವ ಹಂತದಲ್ಲಿದ್ದಾಗ, ಸಂಶೋಧಕರಿಗೆ ಮತ್ತೊಂದು ಮಾನವನ ತಲೆಬುರುಡೆ ಗೋಚರಿಸಿದೆ. ಈ ತಲೆಬುರುಡೆಯ ಜೊತೆಗೆ ಭುಜದ ಎಲುಬಿನ ಭಾಗಗಳು ಹಾಗೂ ಬುರುಡೆಯ ತಳಭಾಗದಲ್ಲಿ ಮಣ್ಣಿನ ಮಡಿಕೆಯ ಅವಶೇಷಗಳು ಇರುವುದು ಪತ್ತೆಯಾಗಿದೆ. ಇದು ಅಂದಿನ ಕಾಲದ ಅಂತ್ಯಕ್ರಿಯೆಯ ಪದ್ಧತಿಗಳ ಬಗ್ಗೆ ಪ್ರಮುಖ ಸುಳಿವು ನೀಡುತ್ತಿದೆ.

ವೈಜ್ಞಾನಿಕ ಸಂರಕ್ಷಣೆ:

ಈ ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿರುವ ಉತ್ಖನನ ತಂಡದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ಅವರು, ‘ಪ್ರಸ್ತುತ ಪತ್ತೆಯಾಗಿರುವ ಅಸ್ಥಿಪಂಜರವನ್ನು ಸಂಪೂರ್ಣವಾಗಿ ಹೊರತೆಗೆಯುವ ಕಾರ್ಯ ಮಾಡದೆ, ಸಂರಕ್ಷಣೆಯ ದೃಷ್ಟಿಯಿಂದ ಹಾಗೆಯೇ ಮುಚ್ಚಲಾಗಿದೆ. ಹೆಚ್ಚಿನ ಅಧ್ಯಯನದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ. ಇಂತಹ ಪ್ರಾಗೈತಿಹಾಸಿಕ ಅವಶೇಷಗಳು ಸಿಕ್ಕಿರುವುದು ತೆಕ್ಕಲಕೋಟೆಯ ಐತಿಹಾಸಿಕ ಮಹತ್ವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ.

ಸಂರಕ್ಷಿತ ಪ್ರದೇಶ ಘೋಷಣೆಗೆ ಕ್ರಮ:

ಹಂಪಿ ಹಾಗೂ ಕಮಲಾಪುರದ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಆರ್. ಶೇಜೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ತೆಕ್ಕಲಕೋಟೆಯ ಈ ಪ್ರದೇಶವು ಅತ್ಯಂತ ಮಹತ್ವದ ಪ್ರಾಗೈತಿಹಾಸಿಕ ನೆಲೆಯಾಗಿದೆ. ಈಗಾಗಲೇ ಮೂರು ಅಸ್ಥಿಪಂಜರಗಳು ದೊರೆತಿರುವುದರಿಂದ, ಈ ಇಡೀ ಪ್ರದೇಶವನ್ನು ‘ಸಂರಕ್ಷಿತ ಪ್ರದೇಶ’ ಎಂದು ಘೋಷಿಸಲು ಇಲಾಖಾ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಈ ಹಿಂದೆ ನಡೆದ ಉತ್ಖನನಗಳಲ್ಲಿ ನವಶಿಲಾಯುಗದ ಕುರುಹುಗಳು ಇಲ್ಲಿ ದೊರೆತಿದ್ದವು. ಈಗ ಸಿಗುತ್ತಿರುವ ಮಾನವ ಅವಶೇಷಗಳು ಈ ಭಾಗದಲ್ಲಿ ಸಾವಿರಾರು ವರ್ಷಗಳ ಹಿಂದೆ ವಾಸಿಸುತ್ತಿದ್ದ ಮಾನವರ ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಅಂತ್ಯಕ್ರಿಯೆಯ ವಿಧಿವಿಧಾನಗಳ ಬಗ್ಗೆ ಸಂಶೋಧನೆ ನಡೆಸಲು ವಿದ್ವಾಂಸರಿಗೆ ಸಹಕಾರಿಯಾಗಲಿದೆ. ಸದ್ಯ ತೆಕ್ಕಲಕೋಟೆಯ ಈ ಗುಡ್ಡಗಾಡು ಪ್ರದೇಶವು ಇತಿಹಾಸ ಸಂಶೋಧನೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.



Source link

Leave a Reply

Your email address will not be published. Required fields are marked *