
ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಆನ್‌ಲೈನ್‌ನಲ್ಲಿ ಬಟ್ಟೆ ಆರ್ಡರ್ ಮಾಡಿ, ನಂತರ ಅದನ್ನು ಸುಳ್ಳು ಕಾರಣ ನೀಡಿ ವಾಪಸ್ ಮಾಡಲು ಯತ್ನಿಸಿದ ಯುವತಿಯೊಬ್ಬಳ ವಂಚನೆಯನ್ನು ಚಾಣಾಕ್ಷ ಡೆಲಿವರಿ ಬಾಯ್ ಬಯಲಿಗೆಳೆದಿದ್ದಾನೆ. ಯುವತಿಯ ಇನ್ಸ್ಟಾಗ್ರಾಮ್ ಐಡಿ ಪಡೆದು, ರೀಲ್ಸ್ ಅನ್ನು ಸಾಕ್ಷಿ ಸಮೇತ ತೋರಿಸಿದ್ದಾನೆ.
ಇಂದಿನ ಡಿಜಿಟಲ್ ಯುಗದಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ (Instagram Reels) ಮಾಡುವುದು ಒಂದು ದೊಡ್ಡ ಗೀಳಾಗಿ ಪರಿಣಮಿಸಿದೆ. ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಕ್ಯಾಮೆರಾ ಮುಂದೆ ಮಿಂಚಬೇಕೆಂಬ ಹಂಬಲ ಕೆಲವರನ್ನು ಎಷ್ಟರಮಟ್ಟಿಗೆ ತಲುಪಿಸಿದೆ ಎಂದರೆ, ಅವರು ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳ ‘ರಿಟರ್ನ್ ಪಾಲಿಸಿ’ಯನ್ನೇ ವಂಚನೆಯ ಅಸ್ತ್ರವನ್ನಾಗಿ ಬಳಸತೊಡಗಿದ್ದಾರೆ. ಇಂತಹದ್ದೇ ಒಂದು ಘಟನೆಯಲ್ಲಿ, ಚಾಣಾಕ್ಷ ಡೆಲಿವರಿ ಬಾಯ್ ಒಬ್ಬ ಇನ್ಸ್ಟಾಗ್ರಾಮ್ ರೀಲ್ಸ್ ಪ್ರೇಮಿ ಯುವತಿಯ ವಂಚನೆಯನ್ನು ಬಯಲಿಗೆಳೆದಿದ್ದಾನೆ.
ಘಟನೆಯಲ್ಲಿ ನಡೆದಿದ್ದೇನು?
ಒಬ್ಬ ಯುವತಿ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಮೂಲಕ ಸುಂದರವಾದ ಬಟ್ಟೆಗಳನ್ನು ಆರ್ಡರ್ ಮಾಡಿದ್ದಳು. ಬಟ್ಟೆ ಮನೆಗೆ ತಲುಪಿದ ಎರಡೇ ದಿನಕ್ಕೆ ಆಕೆ ಆ ಬಟ್ಟೆಗಳು ಇಷ್ಟವಾಗಲಿಲ್ಲ ಎಂದು ‘ರಿಟರ್ನ್’ (Return) ಆಯ್ಕೆಯನ್ನು ಒತ್ತಿದ್ದಳು. ಅದರಂತೆ ಬಟ್ಟೆಯನ್ನು ಪಡೆದುಕೊಳ್ಳಲು ಡೆಲಿವರಿ ಬಾಯ್ ಆಕೆಯ ಮನೆಗೆ ಬಂದಿದ್ದ. ಆಗ ಆರಂಭವಾಯಿತು ನೋಡಿ ಅಸಲಿ ಆಟ. ಡೆಲಿವರಿ ಬಾಯ್ ಬಂದು, ‘ಮ್ಯಾಡಂ, ಬಟ್ಟೆ ಚೆನ್ನಾಗಿಯೇ ಇದೆಯಲ್ಲ, ಯಾಕೆ ವಾಪಸ್ ಮಾಡ್ತಿದ್ದೀರಾ?’ ಎಂದು ಸಹಜವಾಗಿ ಕೇಳಿದ್ದಾನೆ. ಅದಕ್ಕೆ ಆ ಯುವತಿ ಸ್ವಲ್ಪವೂ ಸಂಕೋಚವಿಲ್ಲದೆ, ‘ಅಣ್ಣ, ಈ ಬಟ್ಟೆಗಳು ನನಗೆ ತುಂಬಾ ಟೈಟ್ ಆಗುತ್ತಿವೆ (Tight), ಹಾಕಿಕೊಳ್ಳಲು ಆಗುತ್ತಿಲ್ಲ, ಅದಕ್ಕೆ ವಾಪಸ್ ಕೊಡ್ತಿದ್ದೀನಿ’ ಎಂದು ಸುಳ್ಳು ಹೇಳಿದ್ದಾಳೆ.
ಡೆಲಿವರಿ ಬಾಯ್ ಚಾಣಾಕ್ಷತನ:
ಆಕೆಯ ಮಾತನ್ನು ಕೇಳಿದ ಡೆಲಿವರಿ ಬಾಯ್ ಮುಗುಳ್ನಕ್ಕು, ‘ನಿಜವಾಗಿಯೂ ಟೈಟ್ ಆಗಿದೆಯಾ? ಸುಳ್ಳು ಹೇಳ್ಬೇಡಿ ನಿಜ ಹೇಳಿ” ಎಂದಿದ್ದಾನೆ. ಅದಕ್ಕೆ ಆಕೆ ‘ಇಲ್ಲಣ್ಣ, ಸುಳ್ಳು ಹೇಳಿ ನನಗೇನಾಗಬೇಕು? ನಿಜವಾಗಿಯೂ ಸರಿಯಾಗುತ್ತಿಲ್ಲ’ ಎಂದು ವಾದಿಸಿದ್ದಾಳೆ. ಆಗ ಡೆಲಿವರಿ ಬಾಯ್ ಒಂದು ಷರತ್ತು ಹಾಕಿದ್ದಾನೆ. ‘ಸರಿ ಮ್ಯಾಡಂ, ನಾನು ನಿಮ್ಮ ರಿಟರ್ನ್ ಪ್ರೊಸೆಸ್ ಮಾಡ್ತೀನಿ, ಆದರೆ ನನಗೊಂದು ಉಪಕಾರ ಮಾಡಿ, ನಿಮ್ಮ ಇನ್ಸ್ಟಾಗ್ರಾಮ್ ಐಡಿ (Insta ID) ಕೊಡಿ’ ಎಂದಿದ್ದಾನೆ.
ಯುವತಿ ಯಾವುದೇ ಯೋಚನೆ ಮಾಡದೆ ತನ್ನ ಐಡಿ ನೀಡಿದ್ದಾಳೆ. ಡೆಲಿವರಿ ಬಾಯ್ ಆಕೆಯ ಇನ್ಸ್ಟಾಗ್ರಾಮ್ ಪ್ರೊಫೈಲ್ ತೆರೆದು ನೋಡಿದಾಗ ಅಲ್ಲಿ ಆಕೆ ಆರ್ಡರ್ ಮಾಡಿದ ಅದೇ ಬಟ್ಟೆಯನ್ನು ಧರಿಸಿ ಕಳೆದ ಎರಡು ದಿನಗಳಲ್ಲಿ 4-5 ರೀಲ್ಸ್‌ಗಳನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ!
ಬಯಲಾದ ರೀಲ್ಸ್ ರಾಣಿಯ ವಂಚನೆ:
ಆ ರೀಲ್ಸ್‌ಗಳನ್ನು ಆಕೆಗೆ ತೋರಿಸಿದ ಡೆಲಿವರಿ ಬಾಯ್, ‘ಮ್ಯಾಡಂ, ಈ ಬಟ್ಟೆ ನಿಮಗೆ ಟೈಟ್ ಆಗಿದ್ದರೆ, ಇಷ್ಟು ಆರಾಮವಾಗಿ ಡ್ಯಾನ್ಸ್ ಮಾಡ್ತಾ ರೀಲ್ಸ್ ಮಾಡೋಕೆ ಹೇಗೆ ಸಾಧ್ಯವಾಯ್ತು?’ ಎಂದು ಪ್ರಶ್ನಿಸಿದ್ದಾನೆ. ಅಷ್ಟಕ್ಕೇ ನಿಲ್ಲಿಸದ ಆತ, ‘ನಿಮ್ಮ ತರಹದ ಎಷ್ಟೋ ಜನರನ್ನು ನಾನು ನೋಡಿದ್ದೇನೆ. ಹೊಸ ಬಟ್ಟೆ ಆರ್ಡರ್ ಮಾಡೋದು, ರೀಲ್ಸ್ ಮಾಡೋದು, ಪಾರ್ಟಿಗೆ ಹೋಗಿ ಬರೋದು, ಆಮೇಲೆ ಏನೋ ಒಂದು ಕಾರಣ ಹೇಳಿ ವಾಪಸ್ ಮಾಡೋದು. ಇದು ಕಂಪನಿಗಳಿಗೆ ಮತ್ತು ನಮ್ಮಂತಹ ಕೆಲಸಗಾರರಿಗೆ ಎಷ್ಟು ತೊಂದರೆ ಕೊಡುತ್ತೆ ಅನ್ನೋದು ನಿಮಗೆ ಗೊತ್ತಾ?’ ಎಂದು ಗದರಿಸಿದ್ದಾನೆ. ತನ್ನ ವಂಚನೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಿಂದ ಆ ಯುವತಿ ತಲೆತಗ್ಗಿಸಿ ‘ಸಾರಿ’ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ.
Scroll to load tweet…
ಗಮನಿಸಬೇಕಾದ ಅಂಶ:
ಇ-ಕಾಮರ್ಸ್ ಕ್ಷೇತ್ರದಲ್ಲಿ ಇದನ್ನು ‘ವಾರ್ಡ್‌ರೋಬಿಂಗ್’ (Wardrobing) ಎಂದು ಕರೆಯಲಾಗುತ್ತದೆ. ಅಂದರೆ ಬಟ್ಟೆಗಳನ್ನು ಬಳಸಿ ನಂತರ ವಾಪಸ್ ಮಾಡುವುದು. ಇದರಿಂದಾಗಿ ಮಾರಾಟಗಾರರಿಗೆ ಲಾಜಿಸ್ಟಿಕ್ಸ್ ವೆಚ್ಚ ಹೆಚ್ಚಾಗುತ್ತದೆ ಮತ್ತು ಬಟ್ಟೆಯ ಗುಣಮಟ್ಟವೂ ಹಾಳಾಗುತ್ತದೆ. ಇನ್ಸ್ಟಾಗ್ರಾಮ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಇಂತಹ ಅನೈತಿಕ ಹಾದಿ ಹಿಡಿಯುವುದು ಎಷ್ಟರಮಟ್ಟಿಗೆ ಸರಿ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಈ ಘಟನೆಯು ಆನ್‌ಲೈನ್ ಶಾಪಿಂಗ್ ಮಾಡುವವರಿಗೆ ಮತ್ತು ಸುಳ್ಳು ಹೇಳಿ ರಿಟರ್ನ್ ಮಾಡುವವರಿಗೆ ಒಂದು ದೊಡ್ಡ ಪಾಠವಾಗಿದೆ.