
ಸಚಿವ ಜಮೀರ್ ಅಹ್ಮದ್ ಅವರನ್ನು ಕೆಣಕಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸೀಟು ಗೆಲ್ಲುವುದೂ ಕಷ್ಟವಾಗಲಿದೆ ಎಂದು ವಿಶ್ವ ಮುಸ್ಲಿಂ ಪರಿಷತ್‌ನ ಸುಬಾನ್ ಖಾನ್ ಎಚ್ಚರಿಸಿದ್ದಾರೆ. ದಾವಣಗೆರೆ ಉಪಚುನಾವಣೆ ಬಳಿಕ ಅಲ್ಪಸಂಖ್ಯಾತ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದಾವಣಗೆರೆ (ಏ.16): ದಾವಣಗೆರೆ ಉಪ ಚುನಾವಣೆಯ ಕುರಿತಾಗಿ ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಕೆಯಾದ ವರದಿಯಲ್ಲಿ ಸಚಿವ ಜಮೀರ್ ಅಹ್ಮದ್ ಅವರ ಹೆಸರನ್ನು ಹಾಳು ಮಾಡಲು ಸಂಚು ನಡೆಯುತ್ತಿದೆ. ಒಂದು ವೇಳೆ ಜಮೀರ್ ಅಹ್ಮದ್ ಅವರ ತಲೆದಂಡ ಮಾಡಿದರೆ ಅಥವಾ ಅವರನ್ನು ಕೆಣಕಿದರೆ, 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸೀಟು ಬರುವುದು ಕೂಡ ಕಷ್ಟವಾಗಲಿದೆ’ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ ಸುಬಾನ್ ಖಾನ್ ಎಚ್ಚರಿಕೆ ರವಾನಿಸಿದ್ದಾರೆ.
ಜಮೀರ್ ಅಹ್ಮದ್ ಕೆಣಕಿದರೆ ಕಾಂಗ್ರೆಸ್‌ಗೆ ಕಷ್ಟ:
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಬಾನ್ ಖಾನ್, ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ನೇರ ಎಚ್ಚರಿಕೆ ನೀಡಿದ್ದಾರೆ. ‘ಸಚಿವ ಜಮೀರ್ ಅಹ್ಮದ್ ಅವರ ಹೆಸರನ್ನು ಹಾಳು ಮಾಡಲು ಸಂಚು ನಡೆಯುತ್ತಿದೆ. ಒಂದು ವೇಳೆ ಜಮೀರ್ ಅಹ್ಮದ್ ಅವರ ತಲೆದಂಡ ಮಾಡಿದರೆ ಅಥವಾ ಅವರನ್ನು ಕೆಣಕಿದರೆ, 2028ರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 20 ಸೀಟು ಬರುವುದು ಕೂಡ ಕಷ್ಟವಾಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.
ಅಬ್ದುಲ್ ಜಬ್ಬಾರ್ ವಿರುದ್ಧದ ಕ್ರಮಕ್ಕೆ ಆಕ್ಷೇಪ:
ಇತ್ತೀಚೆಗೆ ಅಬ್ದುಲ್ ಜಬ್ಬಾರ್ ಮತ್ತು ನಸೀರ್ ಅಹ್ಮದ್ ವಿರುದ್ಧ ಪಕ್ಷ ಕೈಗೊಂಡ ಕ್ರಮದ ಬಗ್ಗೆ ಸುಬಾನ್ ಖಾನ್ ಅಸಮಾಧಾನ ಹೊರಹಾಕಿದ್ದಾರೆ. ‘ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಹೇಳಿದ್ದಕ್ಕೆ ಅಬ್ದುಲ್ ಜಬ್ಬಾರ್ ಮೇಲೆ ಕ್ರಮವಾಗಿದೆ. ಮಲ್ಲಿಕಾರ್ಜುನ ಅವರದ್ದು ಹಿತ್ತಾಳೆ ಕಿವಿ. ಅವರ ಸುತ್ತಮುತ್ತ ಇರುವ ಬೆರಳೆಣಿಕೆಯಷ್ಟು ಅಲ್ಪಸಂಖ್ಯಾತ ನಾಯಕರು ಏನು ಹೇಳುತ್ತಾರೋ ಅದನ್ನೇ ಅವರು ಕೇಳುತ್ತಾರೆ’ ಎಂದು ಸ್ಥಳೀಯ ನಾಯಕತ್ವದ ವಿರುದ್ಧ ಹರಿಹಾಯ್ದಿದ್ದಾರೆ.
ಸಾದಿಕ್ ಪೈಲ್ವಾನ್ ನಾಮಿನೇಷನ್ ರಹಸ್ಯ ಬಯಲು:
ಉಪಚುನಾವಣೆಯಲ್ಲಿ ಸಾದಿಕ್ ಪೈಲ್ವಾನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದರ ಹಿಂದೆ ತಮ್ಮ ಕೈವಾಡ ಇರುವುದನ್ನು ಸುಬಾನ್ ಖಾನ್ ಒಪ್ಪಿಕೊಂಡಿದ್ದಾರೆ. ‘ಸಾದಿಕ್ ಪೈಲ್ವಾನ್ ನನಗೆ 40 ವರ್ಷದ ಗೆಳೆಯ. ಆತನಿಗೆ ನಾಮಪತ್ರ ಸಲ್ಲಿಸಲು ಹೇಳಿದ್ದೇ ನಾನು, ಅಷ್ಟೇ ಅಲ್ಲ ನಾಮಿನೇಷನ್ ಫೀಸ್ ಕೂಡ ನಾನೇ ಕಟ್ಟಿದ್ದೆ. ಆದರೆ ಆತ ಕೊನೆ ಕ್ಷಣದಲ್ಲಿ ಯು-ಟರ್ನ್ ಹೊಡೆದು ಚುನಾವಣಾ ನಿವೃತ್ತಿ ಘೋಷಿಸಿದ. ಈ ವಿಷಯದಲ್ಲಿ ಜಮೀರ್ ಅಹ್ಮದ್ ಆಗಲಿ, ಅಬ್ದುಲ್ ಜಬ್ಬಾರ್ ಆಗಲಿ ಏನೂ ಹೇಳಿಲ್ಲ. ಜಮೀರ್ ಹೆಸರನ್ನು ಸುಮ್ಮನೆ ಹಾಳು ಮಾಡುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನ:
ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿಗಳ ನಡವಳಿಕೆಯನ್ನೂ ಸುಬಾನ್ ಖಾನ್ ಟೀಕಿಸಿದ್ದಾರೆ. “ಉಪಚುನಾವಣೆಗೆ ಇಡೀ ಕ್ಯಾಬಿನೆಟ್ ದಾವಣಗೆರೆಗೆ ಬಂದಿತ್ತು. ಸಿಎಂ ಸಿದ್ದರಾಮಯ್ಯ ಅವರು ಸಾದಿಕ್ ಪೈಲ್ವಾನ್ ಮನೆಯಲ್ಲಿ ಊಟ ಮಾಡಿದರು. ಆದರೆ ಅಲ್ಲಿಂದ ಕೂಗಳತೆ ದೂರದಲ್ಲಿರುವ ಹಿರಿಯ ನಾಯಕ ಅಬ್ದುಲ್ ಜಬ್ಬಾರ್ ಅವರ ಮನೆಗೆ ಹೋಗಲಿಲ್ಲ. ಇದು ಅಲ್ಪಸಂಖ್ಯಾತ ಸಮುದಾಯದ ನಾಯಕರಿಗೆ ಮಾಡುತ್ತಿರುವ ಅವಮಾನ” ಎಂದು ಕಿಡಿಕಾರಿದರು.
ಹೊಸ ಪ್ರಾದೇಶಿಕ ಪಕ್ಷದ ಎಚ್ಚರಿಕೆ:
ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತ ನಾಯಕರನ್ನು ಕಡೆಗಣಿಸಿದರೆ ಅಥವಾ ಅವರಿಗೆ ತೊಂದರೆ ನೀಡಿದರೆ ಮತ್ತೊಂದು ಪ್ರಾದೇಶಿಕ ಪಕ್ಷ ಹುಟ್ಟಿಕೊಳ್ಳುವುದು ಖಚಿತ. ‘ನಾವು ಚುನಾವಣೆಯಲ್ಲಿ ಗೆಲ್ಲದಿದ್ದರೂ ಪರವಾಗಿಲ್ಲ, ಕಾಂಗ್ರೆಸ್ ಅನ್ನು ಸೋಲಿಸುವ ಕೆಲಸವನ್ನಂತೂ ಮಾಡುತ್ತೇವೆ’ ಎಂದು ಅವರು ಎಚ್ಚರಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಮೀರ್ ಅಹ್ಮದ್ ಅವರು ನಮ್ಮ ಸಂಘಟನೆಗೆ ಬಂದರೆ ಅವರನ್ನು ವಿಶ್ವ ಮುಸ್ಲಿಂ ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುತ್ತೇವೆ’ ಎಂದು ಆಹ್ವಾನ ನೀಡಿದರು. ದಾವಣಗೆರೆಯಲ್ಲಿ ಸ್ಫೋಟಗೊಂಡಿರುವ ಈ ಭಿನ್ನಮತ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದು ಕುತೂಹಲಕಾರಿಯಾಗಿದೆ.