
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಧಾರವಾಡ ಶಾಸಕ ವಿನಯ್ ಕುಲಕರ್ಣಿ, ತಮ್ಮ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯಲ್ಲಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರತಿ ಕೈಸೇರಿದ ತಕ್ಷಣ ಸ್ಪೀಕರ್ ಕಚೇರಿಯು ಅನರ್ಹತೆಯ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.
ಬೆಂಗಳೂರು (ಏ.17): ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಜನಪ್ರತಿನಿಧಿ ನ್ಯಾಯಾಲ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಅವರ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಕುತ್ತು ಬಂದಿದ್ದು, ಸದ್ಯದಲ್ಲೇ ಅನರ್ಹತೆಯ ಭೀತಿ ಎದುರಾಗಿದೆ.
ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸುವ ಪ್ರಕ್ರಿಯೆಗೆ ವಿಧಾನಸಭೆ ಸ್ಪೀಕರ್ ಕಚೇರಿ ಸಿದ್ಧತೆ ನಡೆಸುತ್ತಿದೆ. ನ್ಯಾಯಾಲಯದ ಅಧಿಕೃತ ತೀರ್ಪಿನ ಪ್ರತಿ (Order Copy) ಕೈ ಸೇರಿದ ಕೂಡಲೇ ಅನರ್ಹತೆಯ ಆದೇಶವನ್ನು ಪ್ರಕಟಿಸಲು ಸ್ಪೀಕರ್ ಕಚೇರಿ ನಿರ್ಧರಿಸಿದೆ. ಕಾನೂನು ತಜ್ಞರ ಸಲಹೆಯ ಮೇರೆಗೆ ಈ ಅಧಿಸೂಚನೆ ಹೊರಬೀಳಲಿದೆ.
ನಾಳೆ ಅಧಿಕೃತ ಅಧಿಸೂಚನೆ ಸಾಧ್ಯತೆ
ವಿಧಾನಸಭಾ ಸ್ಪೀಕರ್ ಕಚೇರಿಯ ಮೂಲಗಳ ಪ್ರಕಾರ, ನಾಳೆಯೊಳಗೆ (ಶನಿವಾರ) ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆಯಿದೆ. ಜನಪ್ರತಿನಿಧಿಗಳ ಕಾಯ್ದೆಯ ಪ್ರಕಾರ, ಯಾವುದೇ ಚುನಾಯಿತ ಪ್ರತಿನಿಧಿಗೆ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷೆಯಾದರೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ಅನರ್ಹರಾಗುತ್ತಾರೆ. ವಿನಯ್ ಕುಲಕರ್ಣಿ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವುದರಿಂದ ಅವರು ಶಾಸಕ ಸ್ಥಾನವನ್ನು ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಬೆಳವಣಿಗೆಯಿಂದ ಧಾರವಾಡ ರಾಜಕಾರಣದಲ್ಲಿ ಭಾರಿ ಬದಲಾವಣೆಗಳಾಗುವ ಮುನ್ಸೂಚನೆ ಸಿಕ್ಕಿದ್ದು, ಒಂದು ವೇಳೆ ಅನರ್ಹತೆ ಪ್ರಕಟವಾದರೆ ಆ ಕ್ಷೇತ್ರದಲ್ಲಿ ಉಪಚುನಾವಣೆಯ ಅನಿವಾರ್ಯತೆ ಎದುರಾಗಲಿದೆ.