
ಬೆಂಗಳೂರಿನಲ್ಲಿ ಹಿಂದು ಮಹಿಳೆಯೊಂದಿಗೆ ಲಿವ್‌ಇನ್‌ನಲ್ಲಿದ್ದ ಅನ್ಯಕೋಮಿನ ವ್ಯಕ್ತಿಯಿಂದ ಕೊಲೆ. ಮಹಿಳೆಯ ಶವವನ್ನು ಕಸದ ಲಾರಿಗೆ ಎಸೆದು ಪರಾರಿ ಆಗಿದ್ದ ಆರೋಪಿ ಸಂಶುದ್ದೀನ್ ಬಂಧನ. ಆದರೆ, ಈ ಕೇಸಿನಲ್ಲಿದೆ ರೋಚಕ ಟ್ವಿಸ್ಟ್!
ಬೆಂಗಳೂರು (ಜೂ. 30): ಬೆಂಗಳೂರು ನಗರದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದು ಮಹಿಳೆಯೊಂದಿಗೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಅಸ್ಸಾಂ ಮೂಲದ ಅನ್ಯಕೋಮಿನ ವ್ಯಕ್ತಿ ಸಂಶುದ್ದೀನ್ ಇದೀಗ ಮಹಿಳೆ ಆಶಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಬಿಬಿಎಂಪಿ ಕಸದ ಲಾರಿಗೆ ಮಹಿಳೆ ಶವವನ್ನು ಮೂಟೆ ಕಟ್ಟಿ ಬೀಸಾಡಿ ಹೋಗಿದ್ದಾನೆ. ಪೊಲೀಸರು 20 ಗಂಟೆ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಸಂಶುದ್ದೀನ್ (33) ಎಂಬಾತನೇ ಬಂಧಿತ ಆರೋಪಿ. ಹುಳಿಮಾವು ಬಳಿಯ ಅರ್ಬನ್ ಕಂಪನಿಯಲ್ಲಿ ಹೌಸ್ ಕೀಪಿಂಗ್ ವಸ್ತುಗಳನ್ನು ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತನಿಗೆ, ಮೃತ ಆಶಾ (40) ಎಂಬ ಬೆಂಗಳೂರು ಮೂಲದ ಮಹಿಳೆಯೊಂದಿಗೆ ಪರಿಚಯವಾಗಿತ್ತು. ಈ ಸಂಬಂಧವು ಬಳಿಕ ಲಿವ್ ಇನ್ ರಿಲೇಷನ್‌ಶಿಪ್‌ಗೆ ತಿರುಗಿ, ಇತ್ತೀಚೆಗೆ ಅವರು ಒಂದೇ ಮನೆಗೆ ಗಂಡ ಹೆಂಡತಿ ಎಂದು ಪರಿಚಯಿಸಿ ಬಾಡಿಗೆ ಮನೆಗೆ ಕಾಲಿಟ್ಟಿದ್ದರು.
ಮನೆಯ ಮಾಲೀಕ ಮಂಜುನಾಥ್ ಹೇಳುವ ಪ್ರಕಾರ, ಕಳೆದ ಆರು ತಿಂಗಳಿಂದ ಜಂಗಲಪಾಳ್ಯ ಮೂಲದ ಆಶಾ ಮತ್ತು ಸಂಶುದ್ದೀನ್ ಸಿ.ಕೆ. ಅಚ್ಚುಕಟ್ಟು ಪ್ರದೇಶದ ಮನೆಗೆ ಬಂದು ವಾಸ ಮಾಡುದ್ದರು. ಮುಸ್ಲಿಂ ವ್ಯಕ್ತಿಯಾದ ಸಂಶುದ್ದೀನ್ ಹಾಗೂ ಹಿಂದೂ ಆಶಾ ಆತ್ಮೀಯವಾಗಿ, ಶಾಂತಿಯಿಂದ ಬದುಕುತ್ತಿದ್ದರು. ಇದಕ್ಕೂ ಮೊದಲು ಇವರೊಬ್ಬರೂ ಕೊತ್ತನೂರು ಬಳಿ ವಾಸ ಮಾಡಿಕೊಂಡಿದ್ದರು ಎಂದು ಹೇಳಿದ್ದರು. ಮಹಿಳೆ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಗಂಡ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಆದರೆ, ಇದೀಗ ಹೆಂಡತಿಯನ್ನು ಕೊಲೆ ಮಾಡಿರುವ ವಿಚಾರ ಪೊಲೀಸರು ಮನೆಗೆ ಬಂದ ನಂತರವೇ ಗೊತ್ತಾಗಿದೆ ಎಂದರು.
ಇನ್ನು ಮನೆಯಲ್ಲಿ ಚೆನ್ನಾಗಿಯೋ ಸಂಸಾರ ಮಾಡಿಕೊಂಡಿದ್ದ ದಂಪತಿ ಪೈಕಿ ಇತ್ತೀಚೆಗೆ ಆಶಾ ಕುಡಿದು ಬಂದು, ತಡರಾತ್ರಿ ಫೋನ್‌ನಲ್ಲಿ ಹೆಚ್ಚು ಮಾತುಕತೆ ಮಾಡುವುದು ಇತ್ಯಾದಿ ವಿಷಯಗಳನ್ನು ಆಧರಿಸಿ ಜಗಳಗಳು ಹೆಚ್ಚಾಗಿದ್ದವು. ಈ ಕಾರಣಕ್ಕೆ ಸಂಶುದ್ದೀನ್ ಹಾಗೂ ಆಶಾ ನಡುವೆ ತೀವ್ರ ವಾದವಿವಾದ ನಡೆದಿದ್ದು, ಅದೇ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಕೊಲೆಯ ನಂತರ, ಆಶಾರ ಮೃತದೇಹವನ್ನು ಸಂಶುದ್ದೀನ್ ತನ್ನ ಬೈಕ್‌ನಲ್ಲಿ 20 ಕಿಲೋಮೀಟರ್ ದೂರದಲ್ಲಿರುವ ಸ್ಥಳಕ್ಕೆ ಕೊಂಡೊಯ್ದು ಕಸದ ಲಾರಿಗೆ ಎಸೆದು ಪರಾರಿಯಾಗಿದ್ದಾನೆ. ಘಟನಾ ಸ್ಥಳ ಹಾಗೂ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ಬೈಕ್ ನಂಬರ್ ಪತ್ತೆಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಹೇಳಿಕೆ:
ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ. ಜಗಲಾಸರ್ ಮಾಹಿತಿ ನೀಡುತ್ತಾ, ‘ರಾತ್ರಿ 2 ಗಂಟೆ ಸುಮಾರಿಗೆ ಬಿಸಾಡಲ್ಪಟ್ಟ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಲಾಗಿದೆ. ತನಿಖೆ ವೇಳೆ ‘ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದವರು. ಆರೋಪಿ ಅಸ್ಸಾಂ ಮೂಲದವನು. ಮೃತ ಆಶಾ ಬೆಂಗಳೂರು ಮೂಲದವಳು. ಇಬ್ಬರಿಗೂ ಮೊದಲೇ ಮದುವೆ ಆಗಿತ್ತು. ಆದರೆ, ಮಹಿಳೆ ಗಂಡ ಇತ್ತೀಚೆಗೆ ಸಾವನ್ನಪ್ಪಿದ್ದರು. ಇನ್ನು ಅಸ್ಸಾಂ ಮೂಲದ ಸಂಶುದ್ದೀನ್‌ಗೆ ಮದುವೆ ಆಗಿದ್ದರೂ ಬೆಂಗಳೂರಿನಲ್ಲಿ ಮತ್ತೊಂದು ಸಂಬಂಧ ಹೊಂದಿದ್ದನು ಎಂದು ತಿಳಿಸಿದ್ದಾರೆ.
ಪ್ರಸ್ತುತ ಆರೋಪಿ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ. ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಡಿಸುವ ನಿರೀಕ್ಷೆ ಇದೆ.