
ಯಾದಗಿರಿ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ವಿದೇಶಕ್ಕೆ ರವಾನೆ ಆಗುತ್ತಿರುವ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ತನಿಖೆಗೆ ಒಪ್ಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಮಂಗಳವಾರ ಆದೇಶಿಸಿದ್ದಾರೆ.
ಬೆಂಗಳೂರು (ಸೆ.17): ಯಾದಗಿರಿ ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ವಿದೇಶಕ್ಕೆ ರವಾನೆ ಆಗುತ್ತಿರುವ ಪ್ರಕರಣವನ್ನು ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ತನಿಖೆಗೆ ಒಪ್ಪಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಮಂಗಳವಾರ ಆದೇಶಿಸಿದ್ದಾರೆ. ಯಾದಗಿರಿ ಜಿಲ್ಲೆ ಗುರಮಿಠ್ಕಲ್ ತಾಲೂಕಿನಿಂದ ರಾಜ್ಯದ ಬಡವರ ಪಾಲಿನ ಪಡಿತರ ಅಕ್ಕಿಯನ್ನು ಗಲ್ಫ್ ದೇಶಗಳು, ಫ್ರಾನ್ಸ್ ಸೇರಿದಂತೆ ವಿದೇಶಕ್ಕೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬ ದಂಧೆಯನ್ನು ಸೆ.8ರಂದು ‘ಕನ್ನಡಪ್ರಭ’ ಬಯಲುಗೊಳಿಸಿತ್ತು. ಈ ಅಕ್ಕಿ ಹಗರಣವು ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಈ ಬಗ್ಗೆ ಗುರಮಿಠ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಐವರ ಬಂಧನವಾಗಿತ್ತು. ಈ ಪ್ರಕರಣದ ಜಾಲವು ಬಹು ವಿಸ್ತಾರವಾಗಿರುವ ಕಾರಣಕ್ಕೆ ಹೆಚ್ಚಿನ ತನಿಖೆಗೆ ಸಿಐಡಿಗೆ ಡಿಜಿಪಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಅಕ್ಕಿ ಹಗರಣದ ಬಗ್ಗೆ ಸಿಐಡಿಯಲ್ಲಿ ಎಸ್ಪಿ ನೇತೃತ್ವದಲ್ಲಿ ತಂಡ ರಚನೆಯಲಾಗಿದ್ದು, ಮತ್ತಷ್ಟು ಜನರಿಗೆ ತನಿಖೆ ಬಿಸಿ ತಟ್ಟಲಿದೆ.
ಹೊರ ರಾಜ್ಯದವರಿಗೂ ಅನ್ನಭಾಗ್ಯ
ಪಡಿತರ ವ್ಯವಸ್ಥೆಯ ಮೂಲಕ ಬಡವರಿಗೆ ವಿತರಿಸುವ ಅನ್ನಭಾಗ್ಯದ ಅಕ್ಕಿ ವಿದೇಶಗಳಿಗೆ ರವಾನೆಯಾಗುತ್ತಿರುವ ಸುದ್ದಿಯ ನಡುವೆಯೇ, ಅನ್ಯ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದಿರುವ 50000ಕ್ಕೂ ಹೆಚ್ಚು ಜನರು ರಾಜ್ಯದ ಪಡಿತರ ವ್ಯವಸ್ಥೆಯ ಮೂಲಕ ಅಕ್ರಮವಾಗಿ ಆಹಾರ ಪದಾರ್ಥ ಪಡೆಯುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಅಷ್ಟು ಮಾತ್ರವಲ್ಲ, ರಾಜ್ಯದ ವಿವಿಧ ಕಂಪನಿಗಳಲ್ಲಿ ನಿರ್ದೇಶಕರಾಗಿರುವ 19,690 ಮಂದಿ ಕೂಡ ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎಂಬ ವಿಷಯವನ್ನು ಆಹಾರ ಇಲಾಖೆ ಪತ್ತೆ ಮಾಡಿದೆ.
ಅಕ್ರಮ ಪಡಿತರ ಚೀಟಿ ಪತ್ತೆಗೆ ನಡೆಸಿದ ಅಭಿಯಾನದ ವೇಳೆ ರಾಜ್ಯದಲ್ಲಿ ವಿತರಣೆಯಾಗಿರುವ ಒಟ್ಟು 1.16 ಕೋಟಿ ಪಡಿತರ ಚೀಟಿಗಳಲ್ಲಿ 12 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಶಂಕಾಸ್ಪದ ಕಾರ್ಡ್‌ಗಳೆಂದು ಆಹಾರ ಇಲಾಖೆ ಗುರುತಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶೇ.76.04, ನಗರ ಪ್ರದೇಶಗಳಲ್ಲಿ ಶೇ.49.36 ಸೇರಿ ಒಟ್ಟು 3,58,87,666 ಫಲಾನುಭವಿಗಳಿಗೆ 1,03,70,669 ಬಿಪಿಎಲ್ ಕಾರ್ಡ್ ನೀಡಬೇಕೆಂಬ ನಿಯಮವಿದೆ. ಆದರೆ, ರಾಜ್ಯದಲ್ಲಿ ಸದ್ಯ 3,93,29,981 ಫಲಾನುಭವಿಗಳಿಗೆ 1,16,51,209 ಬಿಪಿಎಲ್ ಕಾರ್ಡ್ ನೀಡಲಾಗಿದೆ. ನಿಗದಿಗಿಂತ ಹೆಚ್ಚುವರಿಯಾಗಿ 14 ಲಕ್ಷ ಬಿಪಿಎಲ್ ಕಾರ್ಡ್ ವಿತರಣೆಯಾಗಿವೆ.ಈ ಪೈಕಿ 12 ಲಕ್ಷಕ್ಕೂ ಅಧಿಕ ಕಾರ್ಡ್‌ಗಳನ್ನು ಶಂಕಾಸ್ಪದ ಕಾರ್ಡ್‌ಗಳೆಂದು ಆಹಾರ ಇಲಾಖೆ ಗುರುತಿಸಿದೆ.