
ಬೆಂಗಳೂರು, (ಮಾರ್ಚ್ 12): ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಯಾವುದೇ ಆಸ್ತಿ ವಹಿವಾಟು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಲಾಗಿದೆ. ಇದರಿಂದ ಹಲವು ಸಮಸ್ಯೆಗಳು ಉಂಟಾಗಿದ್ದು, ಈ ಖಾತೆಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಜಿಬಿಎ ಅಧಿಕಾರಿಗಳು ಮಾತ್ರ ಜನರ ಸಮಸ್ಯೆ ಏನು ಎನ್ನುವುದನ್ನೂ ತಿಳಿದುಕೊಳ್ಳುವ ಗೋಚಿಗೂ ಹೋಗಲ್ಲ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನ ರಂಗನಾಯಕಿ ಮಹಿಳೆಯೊಬ್ಬರು ಈ ಖಾತೆಗಾಗಿ ಇಪ್ಪತ್ತು ವರ್ಷಗಳ ಹಿಂದೆ ಅಂದ್ರೆ 2006ರಲ್ಲಿ 16,700 ರೂಪಾಯಿ ಶುಲ್ಕ ಕಟ್ಟಿದ್ದಾರೆ. ಆದರೆ, ಇಪ್ಪತ್ತು ವರ್ಷವಾದರೂ ಸಹ ರಂಗನಾಯಕಿಗೆ ಈ ಖಾತೆ ಸಿಕ್ಕಿಲ್ಲ. ಈ ಅಧಿಕಾರಗಳು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ತೋರಿಸಿಕೊಡುತ್ತದೆ. ಇನ್ನು ಈ ಬಗ್ಗೆ ಲಭ್ಯವಾದ ರಂಗನಾಯಕಿ ಅವರೇ ಜಿಎ ಆಯುಕ್ತರಿಗೂ ಸಹ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ಇನ್ನು ಈ ಖಾತೆಗಾಗಿ ಪಟ್ಟ ಕಷ್ಟ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಹಿಳೆ ಎಳೆ ಎಳೆಯಾಗಿ ಬಿಟ್ಟಿದ್ದು, ಈ ಕೆಳಗಿನಂತಿದೆ ಓದಿ.
ನಾನು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಹಾಗೂ ನನ್ನ ಸಮಸ್ಯೆ ಕೇಳಲು ಎರಡು ಕಿವಿಗಳು ಸಿಗದ ಕಾರಣಕ್ಕೆ ಇದನ್ನು ಎಲ್ಲರೆದುರು ಹೇಳಲು ಮಾಧ್ಯಮದವರು ಆಯ್ಕೆ ಮಾಡಿಕೊಂಡೆ. ನನ್ನ ಹೆಸರು ರಂಗನಾಯಕಿ. ಅಗತ್ಯಕ್ಕೆ ತಕ್ಕಷ್ಟು ಸ್ವಲ್ಪ ಓದು, ಸಾಸಿವೆ ಡಬ್ಬಿ, ಮನೆ ವ್ಯವಹಾರಕ್ಕೆ ಬೇಕಾದಷ್ಟು ತಿಳಿವಳಿಕೆ ಇರುವ ವ್ಯಕ್ತಿ ನಾನು. ಬೆಂಗಳೂರಿನ, ಬನಶಂಕರಿ ಮೂರನೇ ಹಂತದ, ಹೊಸಕೆರೆಹಳ್ಳಿ, ದತ್ತಾತ್ರೇಯನಗರದ ಮೂರನೇ ಮುಖ್ಯರಸ್ತೆಯಲ್ಲಿ ನನ್ನ ಮನೆ ಇದೆ; ಸ್ವಂತದ್ದು. ಆ ನಿವೇಶನ ‘ಬಿ’ ಖಾತಾ ಹೊಂದಿದೆ. ಇತ್ತೀಚೆಗೆ ಬಿ ಖಾತಾಗಳನ್ನು ಎ ಖಾತೆ ಮಾಡಿಕೊಡುವ ಬಗ್ಗೆ ಡಿಕೆ ಶಿವಕುಮಾರ್ ಅವರು ಹೇಳಿದರಲ್ಲ, ಅರ್ಜಿ ಹಾಕಬೇಕು ಎಂಬಷ್ಟರಲ್ಲಿ ನನಗೆ ನೆನಪಾದ ಸಂಗತಿ ಏನೆಂದರೆ, 2006ನೇ ಇಸವಿಯ ಆಗಸ್ಟ್ ತಿಂಗಳಿನಲ್ಲಿ ಅಭಿವೃದ್ಧಿ ಶುಲ್ಕ 16,700 ರೂಪಾಯಿ ಪಾವತಿಯಾಗಿದೆ, ಆಗ ಹಣ ಕಟ್ಟಿದ್ದಕ್ಕೆ ನನ್ನ ಬಳಿ ರಸೀದಿಯೂ ಇದೆ.
ಇದನ್ನೂ ಓದಿ: ಇನ್ಮುಂದೆ ಇ-ಖಾತಾ ಪಡೆಯುವುದು ಬಲು ಸುಲಭ: ಇಲ್ಲಿದೆ ಹಂತ ಹಂತದ ಮಾಹಿತಿ
ಹಣ ಪಾವತಿ ಮಾಡಿದ ಮೇಲೆ ನಮಗೆ ಒಂದು ಖಾತೆ ಮಾಡಿಕೊಡಲೇ ಇಲ್ಲ. ನಿರಂತರವಾಗಿ ನಮ್ಮ ವ್ಯಾಪ್ತಿಯ ಅಧಿಕಾರಿಗಳನ್ನೆಲ್ಲ ಭೇಟಿ ಮಾಡಿದೆ, ನಾನು ಹಣ ಪಾವತಿ ಮಾಡಿದ್ದೇನೆ ರಸೀದಿ ತೋರಿಸಿದೆ, ಎ ಖಾತೆ ಮಾಡಿಕೊಡಿ ಎಂದು ಕೇಳಿದೆ. ನನ್ನ ಅಕ್ಕ-ಪಕ್ಕದ ಮನೆಯೆಲ್ಲ ಎ ಖಾತಾ ಆಸ್ತಿಗಳಿವೆ. ನಾನು ಹೀಗೆ 16,700 ರೂಪಾಯಿ ಅಭಿವೃದ್ಧಿ ಶುಲ್ಕ ಪಾವತಿಯಾಗಿದೆ ಎಂದು ಹೇಳಿದೆ. ಹೀಗೆ ನನ್ನ ಮನವಿ ಒಮ್ಮೆ ಹೇಗೆ ಥರ ಇರುತ್ತಿತ್ತೋ ಅಧಿಕಾರಿಗಳು ಉತ್ತರವೂ ಇರುತ್ತಿತ್ತು: ಇನ್ನೂ ಎ ಖಾತಾ ಬಿಟ್ಟಿಲ್ಲ, ಬಿಟ್ಟಾಗ ಮಾಡಿಕೊಡ್ತೀವಿ. ಹೀಗೆ ವರ್ಷ ಕಳೆದುಹೋಗಿದೆ.
ಒಂದು ವೇಳೆ ಆಸ್ತಿ ಬಾಕಿ ಉಳಿಸಿಕೊಂಡರೆ ವರ್ಷಕ್ಕೆ ಹನ್ನೆರಡು ಪರ್ಸೆಂಟ್ ಬಡ್ಡಿ ಹಾಕಿ, ಬಿಲ್ಲು ಹಣ ಕಟ್ಟಿಸಿಕೊಳ್ಳುವ ಪರಿಪಾಠ ಇದೆ. ಆದರೆ ನಾವು ಕಟ್ಟಿದ ಹಣ ಮತ್ತು ಹಾಗೆ ಕಟ್ಟಿಸಿಕೊಂಡಿದ್ದಕ್ಕೆ ಮಾಡಿಕೊಡಬೇಕಾದ ಕೆಲಸದ ಬಗ್ಗೆ ಯಾರಿಂದಲೂ ನೆಟ್ಟಗಿನ ಉತ್ತರ ಇಲ್ಲ.
ಈಚೆಗೆ, ಮಾರ್ಚ್ ಆರನೇ ತಾರೀಕು ಬೆಂಗಳೂರು ಪಶ್ಚಿಮ ವಿಭಾಗದ ಆಯಕ್ತರಾದ ರಾಜೇಂದ್ರ ಅವರ ಕಚೇರಿಗೆ ನನ್ನ ಮನವಿ ಪತ್ರವನ್ನು ಮಗನ ಕೈಲಿ ಕೊಟ್ಟು ಕಳಿಸಿದೆ. ಆ ನಂತರ ಮಾರ್ಚ್ ಹನ್ನೊಂದನೇ ತಾರೀಕು ಅರ್ಜಿಯ ಸ್ಥಿತಿ ಏನು ಅಂತ ಕೇಳಿದಾಗ, ರಾಜರಾಜೇಶ್ವರಿ ನಗರದ ಆಫೀಸ್ ಗೆ ಕಳಿಸಿದ್ದೀವಿ ಅಂತ ಹೇಳಿದರು. ಓಹ್, ನಮಗೆ ಉತ್ತರ ಸಿಗಬಹುದು ಅಂದುಕೊಂಡು, ಆರ್ಆರ್ನಲ್ಲಿ ಇರುವ ಆಫೀಸ್ಗೆ ಮಗನನ್ನು ಕಳಿಸಿದರೆ, ಅಲ್ಲಿ ಇದ್ದವರು ಆರತಿ ಆನಂದ್ ಅನ್ನೋ ಮೇಡಂ ಅಂತೆ.
ಆಗ ಕಟ್ಟಿರೋ ಹದಿನಾರು ಸಾವಿರಕ್ಕೆ ಈಗ ನಾನೇನು ಮಾಡಬೇಕು? ಕಮಿಷನರ್ ಆಫೀಸಿನಿಂದ ನನಗೆ ನೀವು ಕೊಟ್ಟ ಪತ್ರ ಬರಲಿ, ಆಗ ನಿಮಗೆ ನ್ಯಾಯ ಕೊಡಿಸತೀನಿ ಅಂತ ಹೇಳಿ, ಆ ನಂತರ ಕ್ಷಣವೂ ಅಲ್ಲಿ ನಿಲ್ಲದೆ, ತಮ್ಮ ಮನೆಗೆ ಹೊರಟರಂತೆ. ನಾವು ಸಲ್ಲಿಸಿರುವ ಅರ್ಜಿಯ ನಕಲನ್ನು, ನಾವು ಏನು ಹೇಳುತ್ತೇವೆ ಎಂದು ಕೇಳಿಸಿಕೊಳ್ಳುವ ವ್ಯವಧಾನವ ತೋರದ ಆರಂತಿ ಆನಂದ್ ಅವರಿಂದ ‘ನ್ಯಾಯ’ ಸಿಗುವುದು ಹೇಗೋ ನನಗಂತೂ ಗೊತ್ತಾಗಲಿಲ್ಲ. ನಮ್ಮ ಕುಟುಂಬದಲ್ಲಿಯೇ ಓದಿಕೊಂಡಿರುವ ಒಬ್ಬನೇ ಒಬ್ಬ, ಅದು ನನ್ನ ಮಗನಿಗೆ ಗೊತ್ತಾಗಬಹುದಾ? ಗೊತ್ತಿಲ್ಲ.
ಕೊನೆ ಪ್ರಯತ್ನ ಅನ್ನೋ ಮಾಧ್ಯಮಗಳ ಮೂಲಕ ಜನರಿಗೆ ನನ್ನ ಸಮಸ್ಯೆ ಹೇಳಿಕೊಂಡು ಬಿಡೋಣ ಎಂದು ಇದನ್ನೆಲ್ಲ ನನ್ನ ಮಗನಿಗೇ ಹೇಳಿ ಬರೆಸಿದೆ. ನಾನು ಹಣ ಪಾವತಿ ಮಾಡಿದ ರಸೀದಿ ನಿಮ್ಮೆದುರು ಇಡುತ್ತಿದ್ದೇನೆ. ದಯವಿಟ್ಟು ಕರುಣೆಯ ಕಣ್ಣುಗಳಿಂದ ನೀವಾದರೂ ಇದನ್ನು ನೋಡಿ.
ಈಗ ಬಿ ಖಾತಾದಿಂದ ಎ ಖಾತೆಗೆ ಮಾಡಿಕೊಡುವುದಕ್ಕೆ ಶೇಕಡಾ ಐದರಷ್ಟು ಹಣ ಕಟ್ಟಬೇಕಂತೆ. ನಾನು ಇರುವ ಸೈಟಿನ ಅಳತೆಗೆ ಒಂದೂಮುಕ್ಕಾಲು ಲಕ್ಷದಿಂದ ಎರಡು ಲಕ್ಷ ರೂಪಾಯಿ ಕಟ್ಟಬೇಕಂತೆ. ಎರಡು ವರ್ಷಗಳ ಹಿಂದೆ ಬೆಂಗಳೂರು ಮಹಾನಗರ ಪಾಲಿಗೆ ಎಂದಿದ್ದಾಗ ಕಟ್ಟಿದ್ದ 16,700 ರೂಪಾಯಿ ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ದಾಟಿ, ಗ್ರೇಟರ್ ಬೆಂಗಳೂರು ಅಥಾರಿಟಿ ತನಕ ಬಂದಿದೆ. ಈಗ ಶೇಕಡಾ ಐದರಷ್ಟು ಕಟ್ಟಬೇಕಾದ ಮೊತ್ತಕ್ಕೆ ಈ ಹಿಂದೆ ನಾನು ಕಟ್ಟಿದ್ದ ಹಣವನ್ನು ಪರಿಗಣಿಸಿ, ಸಂಪೂರ್ಣ ಮನ್ನಾ ಮಾಡಬೇಕು ಎಂಬುದು ನನ್ನ ಪ್ರಾರ್ಥನೆ.
ಎರಡು ವರ್ಷದ ಹಿಂದಿನ 16,700 ರೂಪಾಯಿಯ ಮೌಲ್ಯ ಏನು ಎಂದು ಡಿಕೆ ಶಿವಕುಮಾರ್ ಅವರ ದೊಡ್ಡ ಸಾಹೇಬ್ರು, ಕಮಿಷನರ್ ಸಾಹೇಬ್ರು ಎಲ್ಲ ಸೇರಿ ತೀರ್ಮಾನ ಮಾಡಲಿ ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.
ನಮ್ಮ ಆಸ್ತಿಯ ಐಪಿಐಡಿ ಸಂಖ್ಯೆ: 8849715443
ಆಸ್ತಿ ತೆರಿಗೆ ಪಾವತಿ ಅರ್ಜಿ ಸಂಖ್ಯೆ: 1600592919
ರಾಜ್ಯದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ