ಶೀರ್ಷಿಕೆ ಮತ್ತು ಕಥಾವಸ್ತು ಕಾರಣದಿಂದ ‘1979’ ಸಿನಿಮಾ (1979 ಚಲನಚಿತ್ರ) ಕೌತುಕ ಮೂಡಿಸಿದೆ. ಹೊಸ ಪ್ರತಿಭೆಗಳೇ ಈ ಸಿನಿಮಾ ಸಿದ್ದಪಡಿಸಿದ್ದಾರೆ. ‘1979’ ಸಿನಿಮಾದ ಪೋಸ್ಟರ್ ಅಂದರೆ ‘ಆ ದಿನಗಳು’ ಖ್ಯಾತಿಯ ನಟ ಚೇತನ್ (ಆ ದಿನಗಳು ಚೇತನ್) ಅವರು ಬಿಡುಗಡೆ ಮಾಡಿದರು. ಬಳಿಕ ಅವರು ತಂಡಕ್ಕೆ ಶುಭ ಕೋರಿದರು. ವೈದ್ಯರು, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಬಿಎಂ ಶ್ರೀನಿವಾಸ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ‘ಮನಂ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ಸಿನಿಮಾ ಸಿದ್ಧವಾಗಿದೆ. ಪುಷ್ಪರಾಜ್ ಅವರು ‘1979’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ.
ಅಂದಹಾಗೆ, ಇದು ನೈಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕಥೆ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಪೋಸ್ಟರ್ ಬಿಡುಗಡೆ ವೇಳೆ ನಿರ್ದೇಶಕ ಪುಷ್ಪರಾಜ್ ಅವರ ಬಗ್ಗೆ. ‘1904ರಿಂದ 1979ರವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸತ್ಯಗಳನ್ನು ಆಧಾರವಾಗಿ ಇಟ್ಟುಕೊಂಡು ಸೃಷ್ಟಿಸಿದ ಕಾಲ್ಪನಿಕ ಕಥೆ ಈ ಸಿನಿಮಾದಲ್ಲಿದೆ. ಒಂದಷ್ಟು ಅಂಶಗಳನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಅವರು ಹೇಳಿದರು.
‘ಒಂದು ನಿರಾಶ್ರಿತ ಸಮುದಾಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಹೋರಾಟ ಮಾಡುತ್ತಾರೆ. ಅಲ್ಲಿನ ದಬ್ಬಾಳಿಕೆ ವಿರುದ್ಧ ಕ್ರಾಂತಿ ಹೇಗೆ ಶುರುವಾಗಿದೆ ಎಂದು ಹೇಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಪುಷ್ಪರಾಜ್. ಹೊಸ ತಂಡದ ಪ್ರಯತ್ನವನ್ನು ನಟ ಆ ದಿನಗಳು ಚೇತನ್ ಅವರು ಮೆಚ್ಚಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ನಡೆಸಿದರು.
‘ಹೊಸಬರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿದಿತ್ತು. ಆದರೆ ಇಷ್ಟು ಪ್ರತಿಭಾವಂತರು ಎಂಬುದು ತುಣುಕುಗಳನ್ನು ನೋಡಿದಾಗ ತಿಳಿಯಿತು. ಅವರ ವಿಭಿನ್ನ ಪ್ರಯೋಗ ಕನ್ನಡ ಚಿತ್ರರಂಗಕ್ಕೆ ಹೊಸತನ ನೀಡಿದೆ. ನಿರಾಶ್ರಿತರ ಕಥೆಗಳು ಕನ್ನಡದಲ್ಲಿ ಹೆಚ್ಚು ಬಂದಿಲ್ಲದೇ ಇರಬಹುದು. ಇತಿಹಾಸದಲ್ಲಿ ಮುಚ್ಚಿ ಹಾಕಿರುವ ವಿಷಯಗಳನ್ನು ಜನತೆಗೆ ಪರಿಚಯಿಸುವ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ’ ಎಂದು ಚೇತನ್ ಹೇಳಿದರು.
ಇದನ್ನೂ ಓದಿ: ತಪ್ಪಾಗಿದೆ ಕ್ಷಮಿಸಿ: ಬೆಟ್ಟಿಂಗ್ ಆಯಪ್ ಪ್ರಚಾರ ಮಾಡಿದ್ದಕ್ಕೆ ಕ್ಷಮೆ ಕೇಳಿದ ಪ್ರಕಾಶ್ ರಾಜ್
ಅಜ್ಜು, ಪ್ರಣ್ವಿ, ಸುಜಿತ್, ಅಮೃತಾ ಅವರ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ದುರ್ಗಾ, ತಕ್ಷಾರಾಮ್, ಪ್ರೀತಿ, ನಿರಂಜನ್, ಧನುಷ್ ಮುಂತಾದವರು ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಜಸ್ವಂತ್ ಪಸುಪುಲೇಟಿ ಅವರು ಸಂಗೀತ ನೀಡಿದ್ದಾರೆ. ಚಲಾಕಿ ಚರಣ್ ಅವರ ಛಾಯಗ್ರಹಣ, ವಸಂತ್ ಅವರ ಸಂಕಲನ ಈ ಸಿನಿಮಾಗಿದೆ. ಕೋಲಾರ, ತೇರಳ್ಳಿ, ಯರಗೋಳ ಮುಂತಾದೆಡೆ ಚಿತ್ರೀಕರಣ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.