ಅಬುಧಾಬಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಮಕ್ಕಳ ಪೋಷಕರು ಮತ್ತು ಓರ್ವ ಸಹೋದರಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಬುಧಾಬಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದು, ಅವರ ಪೋಷಕರು ಹಾಗೂ ಸೋದರಿ ಗಂಭೀರ ಗಾಯಗೊಂಡಂತಹ ಆಘಾತಕಾರಿ ಘಟನೆ ನಡೆದಿದೆ. ಅಬುಧಾಬಿಯಲ್ಲಿ ಲಿವಾ ಫೆಸ್ಟಿವಲ್ನಲ್ಲಿ ಕೆಲ ಕಾಲ ಕಳೆದ ಕುಟುಂಬ ವಾಪಸ್ ದುಬೈಗೆ ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಕೇರಳದ ಮಲ್ಲಪುರಂ ಮೂಲದವರು. ಎಲ್ಲರೂ 14 ವರ್ಷದೊಳಗಿನ ಮಕ್ಕಳಾಗಿದ್ದಾರೆ. ಯುಎಇನಲ್ಲಿ ಭಾನುವಾರ ಮುಂಜಾನೆ ಈ ದುರಂತ ಸಂಭವಿಸಿದೆ.

ಈ ನಾಲ್ವರು ಮಕ್ಕಳ ಏಕೈಕ ಸೋದರಿ ಹಾಗೂ ಪೋಷಕರು ಘಟನೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಮಂಗಳವಾರ ಮಧ್ಯಾಹ್ನ ಇವರ ಮಕ್ಕಳ ಅಂತ್ಯಕ್ರಿಯೆಯನ್ನು ದುಬೈನಲ್ಲೇ ದಪನ ಕೇಂದ್ರದಲ್ಲಿ ಮಾಡಿ ಮುಗಿಸಲಾಗಿದೆ. ಮೃತರಾದ ಮಕ್ಕಳನ್ನು 14 ವರ್ಷದ ಅಶಾಝ್, 12 ವರ್ಷದ ಅಮರ್, 7 ವರ್ಷದ ಅಜಾಮ್ ಹಾಗೂ 5 ವರ್ಷದ ಅಯ್ಯಾಶ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಮಕ್ಕಳಾದ ಅಶಾಜ್, ಅಮರ್, ಅಯ್ಯಾಶ್ ಹಾಗೂ ಅವರ ಮನೆ ಕೆಲಸದಾಕೆ 49 ವರ್ಷದ ಬುಷ್ರಾ ಫಯಾಜ್ ಯಾಹು ಅವರು ಸ್ಥಳದಲ್ಲೇ ಮೃತಪಟ್ಟರೆ ಗಂಭೀರ ಗಾಯಗೊಂಡಿದ್ದ ಅಝಾಮ್ ಅವರು ಸೋಮವಾರ ಸಾವನ್ನಪ್ಪಿದ್ದಾರೆ.

ಮೃತ ಮಕ್ಕಳ ಪೋಷಕರನ್ನು ಅಬ್ದುಲ್ ಲತೀಫ್ ಹಾಗೂ ರುಕ್ಸಾನಾ ಎಂದು ಗುರುತಿಸಲಾಗಿದ್ದು, ಇವರ ಪುತ್ರಿ 10 ವರ್ಷದ ಇಜ್ಜಾ ಕೂಡ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದು, ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಮನೆಕೆಲಸದಾಕೆ ಬುಶ್ರಾ ಫಯಾಜ್ ಯಾಹು ಅವರ ಮೃತದೇಹವನ್ನು ಸೋಮವಾರ ಸಂಜೆಯೇ ಕೇರಳಕ್ಕೆ ಕಳುಹಿಸಿಕೊಡಲಾಗಿದ್ದು, ಮಂಗಳವಾರ ಕೇರಳದಲ್ಲೇ ಅಂತ್ಯಕ್ರಿಯೆ ನಡೆದಿದೆ.

ಮಕ್ಕಳ ಸಾವಿನ ಬಗ್ಗೆ ಅವರ ತಂದೆ ಅಬ್ದುಲ್ ಲತೀಫ್ ಅವರಿಗೆ ಭಾನುವಾರ ತಿಳಿಸಲಾಗಿದ್ದು, ತಾಯಿ ರುಕ್ಸನಾಗೆ ಮಂಗಳವಾರ ಹೇಳಲಾಗಿದೆ. ಮಂಗಳವಾರ ಮಧ್ಯಾಹ್ನ ದುಬೈಗೆ ಸಾಗಿಸುವ ಮೊದಲು ಆಸ್ಪತ್ರೆಯಲ್ಲಿ ಮಕ್ಕಳ ಮೃತದೇಹಗಳನ್ನು ಪೋಷಕರು ಮತ್ತು ಕಿರಿಯ ಸಹೋದರಿಗೆ ತೋರಿಸಿ ನಂತರ ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ಯಲಾಯ್ತು. ಇದರ ನಂತರ, ಸಂಜೆ 4.30 ರ ಸುಮಾರಿಗೆ ದುಬೈನ ಮುಹೈಸ್ನಾದಲ್ಲಿರುವ ಅಲ್ ಕುಸೈಸ್ ಸ್ಮಶಾನದಲ್ಲಿ ನಾಲ್ವರು ಸಹೋದರರನ್ನು ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸಮಾಧಿ ಮಾಡಲಾಯಿತು.

ಅಬ್ದುಲ್ ಲತೀಫ್ ಅವರು ಉದ್ಯಮಿಯಾಗಿದ್ದು, ರಾಸ್ ಅಲ್ ಖೈಮಾದಲ್ಲಿ ವ್ಯವಹಾರ ನಡೆಸುತ್ತಿದ್ದರೆ, ರುಖ್ಸಾನಾ ರಿಯಲ್ ಎಸ್ಟೇಟ್ ಸಲಹೆಗಾರರಾಗಿದ್ದರು. ಚಳಿಗಾಲದ ರಜೆಯ ಸಮಯದಲ್ಲಿ ಕುಟುಂಬವು ಅಬುಧಾಬಿಯಲ್ಲಿ ನಡೆದ ಲಿವಾ ಉತ್ಸವದಲ್ಲಿ ಸಮಯ ಕಳೆಯುವುದಕ್ಕೆ ಹೋಗಿತ್ತು. ಮಕ್ಕಳ ಶಾಲೆ ಪುನರಾರಂಭಕ್ಕೂ ಮುನ್ನ ಇವರು ದುಬೈಗೆ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.

Source link
ದುಬೈನಲ್ಲಿ ಭೀಕರ ಅಪಘಾತ: ಕೇರಳದ ಒಂದೇ ಕುಟುಂಬದ ನಾಲ್ವರು ಪುಟ್ಟ ಮಕ್ಕಳು ಸಾವು