ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್ ನಾಯಕರ ಕಾಳಗ
ಬೆಂಗಳೂರು, ನವೆಂಬರ್ 27: ಸಿಎಂ ಪಟ್ಟಕ್ಕಾಗಿ ಕಾಂಗ್ರೆಸ್ ನಾಯಕರ ಕಾಳಗಕ್ಕೆ ಅಹಿಂದ ನಾಯಕರ ಎಂಟ್ರಿಯಾಗಿದೆ. ಹಿಂದುಳಿದ ವರ್ಗಗಳ ನಾಯಕ ಎಂದೆಂದೂ ಪ್ರಸಿದ್ಧಿ ಪಡೆದಿರುವ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಅವರ ಬೆನ್ನಿಗೆ ನಿಂತಿದ್ದ ಅಹಿಂದ, ಅವರ ಪರ ಅಕಾಡಕ್ಕಿಳಿದಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪರ ಮಾತನಾಡಿರುವ ನಾಯಕರು, ಸ್ವಾಮೀಜಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ, ಅಹಿಂದ ವರ್ಗದವರು ಕಾಂಗ್ರೆಸ್ ಮತ್ತು ಲಿಂಗಾಯತರು ಬಿಜೆಪಿಗೆ ಮತ ಹಾಕಿದ್ದಾರೆ. ಹೀಗಿರುವಾಗ ನನ್ನಿಂದ ಸರ್ಕಾರ ಬಂತು, ನಮ್ಮ ನಾಯಕರೇ ಸರ್ಕಾರಕ್ಕೆ ಅಧಿಕಾರ ತಂದಿದ್ದಾರೆ ಅನ್ನೋದು ತಪ್ಪು. ಸದ್ಯ ಇರುವ ಗೊಂದಲಗಳಿಗೆ ಕಾರಣ ಏನು ಅನ್ನೋದು ನಮಗೆ ಅರಿವಿಲ್ಲ. ಆದರೆ ಈಗ ಇರುವಂತಹ ಸಂಘಟನೆಗಳು ನಮಗೆ ಆತಂಕವಾಗಿದೆ.
ಇದನ್ನೂ ಓದಿ: ಡಿಕೆಶಿ ಅಸ್ತ್ರಕ್ಕೆ ಸಿದ್ದರಾಮಯ್ಯ ಬಣದಿಂದ ‘ಅಹಿಂದ’ ಬ್ರಹ್ಮಾಸ್ತ್ರ
‘ಅಧಿಕಾರ ಹಂಚಿಕೆ ಬಗ್ಗೆ ವಾಗ್ದಾನ ಮಾಡಿಲ್ಲ’
ಅಹಿಂದ ವರ್ಗದ ಮತ ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ನಮ್ಮನ್ನು ರಕ್ಷಿಸುವ ಮುಖ್ಯಮಂತ್ರಿಯನ್ನು ಸೀಮಿತಗೊಳಿಸಲು ಒಪ್ಪುವುದಿಲ್ಲ. ಎರಡೂವರೆ ವರ್ಷಕ್ಕೆ ಸಿದ್ದರಾಮಯ್ಯ ಅವರಿಗೆ ಸೀಮಿತ ಮಾಡುವುದಕ್ಕೆ ನಮ್ಮ ವಿರೋಧವಿದೆ. ಹೈಕಮಾಂಡ್ ಆಗಲಿ, ಸಿಎಂ ಅಥವಾ ಡಿಸಿಎಂ ಅಧಿಕಾರ ಹಂಚಿಕೆಯ ಬಗ್ಗೆ ವಾಗ್ದಾನ ಮಾಡಿಲ್ಲ. ಅವರ ಹಿತಾಸಕ್ತಿಗಾಗಿ ಎರಡೂವರೆ ವರ್ಷ ಅಂತಾರೆ. ರಾಜ್ಯ ಒಕ್ಕಲಿಗರ ಸಂಘದಿಂದಲೂ ಸುದ್ದಿಗೋಷ್ಠಿ. ಸುದ್ದಿಗೋಷ್ಠಿಯಲ್ಲಿ ಡಿ.ಕೆ. ಅವರ ಶ್ರಮಕ್ಕೆ ಕೂಲಿಶಿವಕುಮಾರ್ ಕೇಳುತ್ತಿದ್ದಾರೆ. ಕೂಲಿ ಅಂದ್ರೆ ಏನು? ಡಿಕೆಶಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಹೀಗಾಗಿ ಯಾರೇ ಆದರೂ ಹೇಳಿಕೆ ನೀಡುವಾಗ ನೋಡಿ ಮಾತಾಡಬೇಕು ಎಂದು ರಾಮವಂದ್ರಪ್ಪ ಎಚ್ಚರಿಸಿದ್ದಾರೆ.
ಮತ್ತೊಂದೆಡೆ ಸಿದ್ದರಾಮಯ್ಯ ಸಿಎಂ ಬಣದ ಕಾಂಗ್ರೆಸ್ ನಾಯಕರಿಂದಲೂ ಅಹಿಂದ ಅಸ್ತ್ರ ಪ್ರಯೋಗಕ್ಕೆ ತಯಾರಿ ನಡೆದಿದೆ. ಅಹಿಂದ ಅಸ್ತ್ರದ ಮೂಲಕವೇ ಹೈಕಮಾಂಡ್ ಮೇಲೆ ಒತ್ತಡ ಹೇರೋಣ. ಅಹಿಂದರ ಬಿಟ್ಟರೆ ಕಾಂಗ್ರೆಸ್ ಗೆ ರಾಜ್ಯದಲ್ಲಿ ಭವಿಷ್ಯವಿಲ್ಲ ಎಂದು ವರಿಷ್ಠರಿಗೆ ಮನವರಿಕೆ ಮಾಡೋಣ ಎಂದು ಕೆಲ ಸಚಿವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 6:26 pm, ಗುರುವಾರ, 27 ನವೆಂಬರ್ 25