
ಭಟ್ಕಳ ಮಾ.8: ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ ಬಳಿಕ ಸಾರ್ವಜನಿಕವಾಗಿ ಮೌನಕ್ಕೆ ಶರಣಾಗಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಬರೋಬ್ಬರಿ ಎರಡು ವರ್ಷಗಳ ಬಳಿಕ ಇಂದು ಭಟ್ಕಳದ ಸಾರ್ವಜನಿಕ ವೇದಿಕೆಯಲ್ಲಿ ಪಾಲ್ಗೊಂಡರು. ನಗರದ ಹಳೆ ಬಸ್ ನಿಲ್ದಾಣದ ಬಳಿ ನಡೆದ ‘ಹಿಂದೂ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಅವರು ತಮ್ಮ ಎಂದಿನ ಶೈಲಿಯಲ್ಲೇ ಘರ್ಜಿಸಿದ್ದಾರೆ. “90% ಋಷಿಗಳು ಬ್ರಾಹ್ಮಣರಲ್ಲ. ವಾಲ್ಮೀಕಿ, ವಿಶ್ವಾಮಿತ್ರ ಬ್ರಾಹ್ಮಣರಲ್ಲ. ಈ ದೇಶದಲ್ಲಿ ಜಾತಿಗೆ ಎಂದಿಗೂ ಬೆಲೆಯಿಲ್ಲ, ಯೋಗ್ಯತೆಗೆ ಮಾತ್ರ ಬೆಲೆಯಿತ್ತು. ಇಂದು ಜಾತಿಗೆ ಬೆಲೆ ಕೊಟ್ಟಿದ್ದು ನಮ್ಮಂತಹ ಬುದ್ಧಿವಂತರು. ಇತಿಹಾಸವನ್ನು ಓದಿದರೆ ಸತ್ಯ ತಿಳಿಯುತ್ತದೆ” ಎಂದು ಅವರು ಹೇಳಿದರು.
“ಜಾತ್ಯತೀತತೆ ಎಂದರೆ ಅದು ಹಿಂದುತ್ವ. ಬೇರೆ ರಾಷ್ಟ್ರಗಳಿಂದ ಬಂದವರಿಗೆ ಮಸೀದಿ, ಚರ್ಚ್ ಕಟ್ಟಲು ಅವಕಾಶ ನೀಡಿದ್ದೇವೆ ಎಂದರೆ ನಮಗಿಂತ ದೊಡ್ಡ ಜಾತ್ಯತೀತರು ಯಾರಿದ್ದಾರೆ? ತಾಕತ್ತಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತೀಯತೆಯ ಪಾಠ ಮಾಡಿ” ಎಂದು ಸವಾಲು ಹಾಕಿದರು.
“ನಮ್ಮನ್ನು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಸೋಲಿಸಲಿಲ್ಲ. ಹಿಂದೂಗಳನ್ನು ಸೋಲಿಸಿದ್ದು ನಮ್ಮವರೇ ಆದ ಜಯಚಂದ ಮತ್ತು ಮಲ್ಲಪ್ಪ ಶೆಟ್ಟಿಯಂತಹ ದ್ರೋಹಿಗಳು. ನಾವು ಒಂದಾಗದಿದ್ದರೆ ನಮ್ಮ ಪರಿಸ್ಥಿತಿ ‘ಗೋವಿಂದ ಗೋವಿಂದ’ ಆಗಲಿದೆ” ಎಂದು ಎಚ್ಚರಿಸಿದರು. “ಆರ್.ಎಸ್.ಎಸ್ ಮುಗಿಸುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಹುಲಿ-ಸಿಂಹವನ್ನು ಯಾರೂ ದೇವರಿಗೆ ಬಲಿ ಕೊಡಲ್ಲ, ಕುರಿಯನ್ನಷ್ಟೇ ಬಲಿ ಕೊಡೋದು. ನಮ್ಮ ಸಂಘಟನೆಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಗುಡುಗಿದರು.
ಇದನ್ನೂ ಓದಿ: ಮತ್ತೆ ಸಕ್ರಿಯ ರಾಜಕೀಯಕ್ಕೆ ಅನಂತ್ ಕುಮಾರ್ ಹೆಗಡೆ? ಹಿಂದೂ ಸಂಗಮದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜು
“ಇಂದು ಆಫ್ರಿಕಾದಲ್ಲಿ ನಮಗಿಂತ ಸುಂದರವಾಗಿ ಗಣೇಶ ಹಬ್ಬ ಆಚರಿಸುತ್ತಾರೆ. ಚೀನಾದ ಗ್ರಾಮೀಣ ಪ್ರದೇಶಗಳಲ್ಲಿ ಭಾರತೀಯರಿಗೆ ಅಪಾರ ಗೌರವವಿದೆ. ಜಗತ್ತು ನಮ್ಮತ್ತ ನೋಡುತ್ತಿದೆ, ನಾವಿಂದು ಎದ್ದು ನಿಲ್ಲಬೇಕಾಗಿದೆ” ಎಂದು ಹೇಳಿದರು. ಸುಮಾರು 3,000ಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಿಕ್ಷಣ ಕೇವಲ ದುಡ್ಡು ಮಾಡುವುದಕ್ಕಷ್ಟೇ ಎಂಬಂತಾಗಿದೆ ವಿಷಾದ ವ್ಯಕ್ತಪಡಿಸಿದ ಅವರು, ಸಂಸ್ಕಾರಯುತ ಬದುಕಿಗೆ ಒತ್ತು ನೀಡಲಾಗಿದೆ ಎಂದು ಕರೆ ನೀಡಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ