
ಗ್ಯಾಸ್ ಸಿಲಿಂಡರ್ ಕೊರತೆಯ ನೆಪದಲ್ಲಿ ಹೋಟೆಲ್‌ಗಳು ಗ್ರಾಹಕರನ್ನು ಲೂಟಿ ಮಾಡುತ್ತಿವೆ. ಬೆಂಗಳೂರಿನ ಕೊತ್ತನೂರು ಬಳಿಯ ಕೆಫೆಯೊಂದು, ಅಡುಗೆಗೆ ಬಳಸದ ನಿಂಬೆ ಜ್ಯೂಸ್‌ಗೂ ‘ಗ್ಯಾಸ್ ಚಾರ್ಜ್’ ವಿಧಿಸಿದ್ದು, ಈ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಗ್ಯಾಸ್ ಕೊರತೆಯ ಹೆಸರಿನಲ್ಲಿ ನಡೆಯುತ್ತಿರುವ ಹಗಲು ದರೋಡೆಗೆ ಸಾಕ್ಷಿಯಾಗಿದೆ.
ಈಗ ಎಲ್ಲೆಲ್ಲೂ ಗ್ಯಾಸ್ ಸಿಲಿಂಡರ್ಗೆ ಹಾಹಾಕಾರ ಸೃಷ್ಟಿಯಾಗುತ್ತಿದೆ. ಮನೆ ಬಳಕೆಯ ಗ್ಯಾಸ್ ಮೇಲೆ ಇದು ಪರಿಣಾಮ ಅಷ್ಟೊಂದು ಬೀರದಿದ್ದರೂ ಹೋಟೆಲ್ಗಳ ಸ್ಥಿತಿ ಚಿಂತಾಜನಕವಾಗಿದೆ. ಕೆಲವೊಂದು ಹೋಟೆಲ್ನವರು ಡಬಲ್ ದುಡ್ಡು ಕೊಟ್ಟು ಕಾಳಸಂತೆಯಲ್ಲಿ ಸಿಲಿಂಡರ್ ಪಡೆಯುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಕಾಳಸಂತೆಯಲ್ಲಿ ಸಿಲಿಂಡರ್ ಮಾರುತ್ತಿದ್ದಾರೆ. ಇದಾಗಲೇ ಕರ್ನಾಟಕ ಸೇರಿದಂತೆ ರಾಜಕೀಯ ಮುಖಂಡರ ಮೇಲೆ ದಾಳಿ ನಡೆದಿದೆ. ಏನೇ ರೂಲ್ಸ್ ಮಾಡಿದರೂ, ಇಂಥ ಸಮಯಕ್ಕಾಗಿಯೇ ಕಾಯುತ್ತಿರುವ ಒಂದಷ್ಟು ಮಂದಿ ಕೊರತೆ ಸೃಷ್ಟಿಸಿ ದುಡ್ಡು ಮಾಡಲು ನೋಡಿಕೊಳ್ಳುತ್ತಾರೆ.
ಗ್ರಾಹಕರ ಲೂಟಿ
ಅದೇ ಇನ್ನೊಂದೆಡೆ, ಹೋಟೆಲ್ಗಳಲ್ಲಿ ಗ್ಯಾಸ್ ಕೊರತೆಯಿಂದಾಗಿ ಆಹಾರ ಪದಾರ್ಥಗಳ ಬೆಲೆಯನ್ನು ಏರಿಸಿದ್ದರೆ, ಬಿಲ್ ನೀಡುವಾಗ ಗ್ಯಾಸ್ ಚಾರ್ಜ್ ಎಂದು ಎಕ್ಸ್ಟ್ರಾ ಬಿಲ್ ಹಾಕುತ್ತಿದ್ದಾರೆ. ಹೋಟೆಲ್ಗಳಲ್ಲಿ ತಿನಿಸು, ಪಾನೀಯ ಬೇಕು ಎನ್ನುವವರು ಇದನ್ನೆಲ್ಲ ಸದ್ಯದ ಮಟ್ಟಿಗೆ ಸಹಿಸಿಕೊಳ್ಳಲೇಬೇಕು. ಹಾಗೆಂದು ಜ್ಯೂಸ್ಗಳಿಗೂ ಗ್ಯಾಸ್ ಚಾರ್ಜ್ ಹಾಕೋದಾ? ಗ್ರಾಹಕರನ್ನು ಪೆಂಗರನ್ನಾಗಿ ಮಾಡಲು, ಗ್ರಾಹಕರನ್ನು ಲೂಟಿ ಮಾಡಲು, ಹಗಲು ದರೋಡೆ ಎಂಬಂತೆ ಬೇಕಾಬಿಟ್ಟೆಯಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಹೋಟೆಲ್‌ಗಳು ಸದ್ಯದ ಸ್ಥಿತಿಯಲ್ಲಿ, ಆಹಾರ ಪದಾರ್ಥಗಳ ಮೇಲಿನ ರೇಟ್ ಸ್ವಲ್ಪ ಹೆಚ್ಚು ಮಾಡುವುದು ಅನಿವಾರ್ಯವೇ ಆಗಿದೆ. ಹಾಗೆಂದು ಸಿಕ್ಕ ಸಿಕ್ಕಂತೆ ಬಾಯಿಗೆ ಬಂದಂತೆ ಗ್ಯಾಸ್ ಬಿಲ್ ಹಾಕಿ ಗ್ರಾಹಕರಿಗೆ ಮರುಳು ಮಾಡುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಅಂಥದ್ದೇ ಒಂದು ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರಿನ ಕೊತ್ತನೂರು ಬಳಿ ಇರುವ ಥಿಯೋ ಕೆಫೆಯ ಬಿಲ್ ಒಂದರ ಫೋಟೋ ಅನ್ನು ಸೋಷಿಯಲ್ ಮೀಡಿಯಾ ಬಳಕೆದಾರರು ಶೇರ್ ಮಾಡಿದ್ದಾರೆ. ಅದರಲ್ಲಿ ಮಿಂಟ್ ಲಿಂಬೆ ಹಣ್ಣಿನ ಜ್ಯೂಸ್ ಒಂದಕ್ಕೆ 179 ರೂಪಾಯಿ ಬಿಲ್ ಮಾಡಿದ್ದಾರೆ. 30-40 ರೂಪಾಯಿ ಒಳಗೆ ರೋಡ್ ಸೈಡ್ಗಳಲ್ಲಿ ಸಿಗುವ ಈ ಜ್ಯೂಸ್ಗೆ ಇಂಥ ಕೆಫೆಗಳಲ್ಲಿ ಐದಾರು ಪಟ್ಟು ಹೆಚ್ಚಿಗೆ ಹಣ ಕೊಟ್ಟು ಕುಡಿಯುವುದು ಕೆಲವರಿಗೆ ಒಗ್ಗಿರತ್ತೆ, ಕೆಲವರಿಗೆ ಪ್ರತಿಷ್ಠೆಯ ಮಾತಾಗಿರುತ್ತದೆ ಎನ್ನುವುದು ಬೇರೆ ಮಾತು ಬಿಡಿ.
ಗ್ಯಾಸ್ನಲ್ಲಿ ನಿಂಬೆ ಜ್ಯೂಸ್
ಆದರೆ ಇಲ್ಲಿ ಇರುವ ವಿಚಿತ್ರ ಎಂದರೆ, ಎರಡು ಜ್ಯೂಸ್ಗೆ ಜಿಎಸ್ಟಿ ಅದೂ ಇದೂ ಎಲ್ಲಾ ಸೇರಿ 358 ರೂಪಾಯಿ ಆಗಿದೆ. ಇದಕ್ಕೆ ಗ್ಯಾಸ್ ಚಾರ್ಜ್ ಎಂದು 17 ರೂಪಾಯಿ ಎಕ್ಸ್ಟ್ರಾ ಬಿಲ್ನಲ್ಲಿ ಸೇರಿಸಲಾಗಿದೆ. ಅಂದರೆ ಈ ಕೆಫೆಯಲ್ಲಿ ಲಿಂಬೆ ಹಣ್ಣಿನ ಜ್ಯೂಸ್ ಅನ್ನೂ ಗ್ಯಾಸ್ನಲ್ಲಿ ಮಾಡ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಕೆಲವರು ಅತ್ಯಂತ ಕಡಿಮೆ ಬೆಲೆಗೆ ಸಿಗುವ ಜ್ಯೂಸ್ಗೆ 179 ರೂಪಾಯಿ ಕೊಟ್ಟಿರುವಾಗ 17 ರೂಪಾಯಿ ಎಕ್ಸ್ಟ್ರಾ ಕೊಟ್ಟರೆ ತಪ್ಪಿಲ್ಲ ಬಿಡಿ ಎಂದು ಟೀಕೆಯನ್ನೂ ಮಾಡುತ್ತಿದ್ದಾರೆ. ಆದರೆ ಗ್ರಾಹಕರನ್ನು ಹೇಗೆ ಗ್ಯಾಸ್ ಸಿಲಿಂಡರ್ ಹೆಸರಿನಲ್ಲಿ ಮೋಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಈ ಬಿಲ್ ಸಾಕ್ಷಿಯಾಗಿದೆ.