
ರಾಜ್ಯ ಸರ್ಕಾರವು ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ಸೇರಿದ 22 ಮಠಗಳು ಮತ್ತು ಸಂಘ-ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ 52 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿರುವ ಈ ಗೋಮಾಳ ಭೂಮಿಯ ಬಳಕೆಗೆ ಸರ್ಕಾರವು ಒಂಬತ್ತು ಕಠಿಣ ಷರತ್ತುಗಳನ್ನು ವಿಧಿಸಿದೆ.
ಬೆಂಗಳೂರು: ಹಿಂದುಳಿದ ಹಾಗೂ ದಲಿತ ಸಮಯದಾಯಗಳಿಗೆ ಸೇರಿ ರಾಜ್ಯದ 22 ಮಠಗಳು, ಕೆಲ ಟ್ರಸ್ಟ್ ಹಾಗೂ ಸಂಘ-ಸಂಸ್ಥೆಗಳಿಗೆ ರಾಜಧಾನಿ ಬೆಂಗಳೂರಿನಲ್ಲಿ ಒಟ್ಟಾರೆ 52 ಎಕರೆ ಭೂಮಿ ಮಂಜೂರು ಮಾಡಿ ರಾಜ್ಯ ಸರ್ಕಾರ ಅಧಿಕೃತ ರಾಜ್ಯಪತ್ರ ಹೊರಡಿಸಿದೆ. ಕಳೆದ ಜನವರಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿದಂತೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದ ಸರ್ವೆ ನಂ.57ರಲ್ಲಿನ 34.09 ಎಕರೆ ಮತ್ತು ಸ.ನಂ.58ರಲ್ಲಿನ 18.05 ಎಕರೆ ಗೋಮಾಳ ಭೂಮಿಯನ್ನು ವಿವಿಧ ಮಠಗಳಿಗೆ ಮಂಜೂರು ಮಾಡಲಾಗಿದೆ.
ಕೃಷಿ ಮಾರ್ಗಸೂಚಿ ಬೆಲೆಯ ಶೇ.10 ದರವನ್ನು ಮಠಗಳು ತಮಗೆ ಮಂಜೂರಾಗಿರುವ ಜಮೀನಿಗೆ ಪಾವತಿಸಬೇಕೆಂದು ಸೂಚಿಸಿರುವ ಸರ್ಕಾರ, ಈ ಭೂಮಿ ಬಳಕೆಗೆ ಒಂಬತ್ತು ಷರತ್ತುಗಳನ್ನು ವಿಧಿಸಿದ್ದು, ಉಲ್ಲಂಘಿಸಿದರೆ ವಾಪಸ್ ಪಡೆಯುವ ಎಚ್ಚರಿಕೆ ನೀಡಿದೆ.
-ಷರತ್ತು ವಿಧಿಸಿ ರಾಜ್ಯಪತ್ರ ಹೊರಡಿಸಿದ ಸರ್ಕಾರ
ಈ ಪೈಕಿ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠಕ್ಕೆ 4.18 ಎಕರೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಅಖಿಲ ಕುಂಚಿಟಿಗ ಮಹಾಸಂಸ್ಥಾನ (ಹೊಸ ದುರ್ಗ) 4.01 ಎಕರೆ, ಚಿತ್ರದುರ್ಗದ ಎಂ.ಕೆ.ಹಟ್ಟಿಯ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠ 4 ಎಕರೆ, ಮಾದಾರ ಚೆನ್ನಯ್ಯ ಗುರುಪೀಠಕ್ಕೆ 4.30 ಎಕರೆ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ 4.18 ಎಕರೆ,
ಹೊಸದುರ್ಗ ತಾಲ್ಲೂಕಿನ ಮಧುರೆಯ ಉಪವೀರ ಜಗದ್ಗುರು ವಿದ್ಯಾಸಂಸ್ಥೆಗೆ 4 ಎಕರೆ, ಗೊಲ್ಲಗಿರಿಯ ಅಖಿಲ ಭಾರತ ಶ್ರೀ ಕೃಷ್ಣ ಯಾದವ ಮಹಾಸಂಸ್ಥಾನಕ್ಕೆ 31 ಗುಂಟೆ, ಬೆಂಗಳೂರಿನ ಶೇಷಾದ್ರಿಪುರದ ಕರ್ನಾಟಕ ರಾಜ್ಯ ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ಹಳೇ ವಿದ್ಯಾರ್ಥಿ ಸಂಘಕ್ಕೆ 2 ಎಕರೆ, ಶಿವಮೊಗ್ಗ ಜಿಲ್ಲೆಯ ನಿಟ್ಟೂರಿನ ನಾರಾಯಣ ಗುರು ಮಹಾಸಂಸ್ಥಾನಕ್ಕೆ 31.08 ಗುಂಟೆ, ಚಿತ್ರದುರ್ಗದ ಮಾಚಿದೇವ ಮಹಾಸಂಸ್ಥಾನ ಮಠಕ್ಕೆ (ಮಡಿವಾಳ ಗುರುಪೀಠ) 32 ಗುಂಟೆ
ಚಲವಾದಿ ಗುರುಪೀಠಕ್ಕೆ 32 ಗುಂಟೆ, ಅಖಿಲ ಕರ್ನಾಟಕ ಶ್ರೀಗುರು ಮೇದರ ಕೇತೇಶ್ವರ ಟ್ರಸ್ಟ್‌ಗೆ 30 ಗುಂಟೆ, ಹಾವೇರಿ ಜಿಲ್ಲೆ ನರಸೀಪುರ ತಾಲ್ಲೂಕಿನ ನಿಜಗುಣ ಅಂಬಿಗರ ಚೌಡಯ್ಯನವರ ಗುರುಪೀಠಕ್ಕೆ 32 ಗುಂಟೆ, ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ಹಡಪದ ಅಪ್ಪಣ್ಣ ದೇವರ ಮಠ ಹಾಗೂ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಕುಂಬಾರ ಗುಂಡಯ್ಯಮಠಕ್ಕೆ ತಲಾ 31 ಗುಂಟೆ, ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಸವಿತಾ ಪೀಠ ಚಾರಿಟಬಲ್ ಟ್ರಸ್ಟ್‌ಗೆ 30 ಗುಂಟೆ, ಹರಿಹರ ತಾಲ್ಲೂಕಿನ ಹೇಮಾ-ಮೇವಾ ಸದ್ಭಾವನ ಗುರುಪೀಠಕ್ಕೆ 23.12 ಗುಂಟೆ, ಬೆಂಗಳೂರಿನ ನಿಕೇತನ ಎಜುಕೇಷ್ ಟ್ರಸ್ಟ್‌ಗೆ 1.24 ಎಕರೆ
ತುಮಕೂರಿನ ಎಸ್.ವಿ.ಎಸ್. ಊರುಗೊಲು ವೃದ್ಧಾಶ್ರಮ ಚಾರಿಟೇಬಲ್ ಟ್ರಸ್ಟ್‌ಗೆ 35.08 ಗುಂಟೆ, ಬೆಂಗಳೂರಿನ ವಿಜಯನಗರದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟಕ್ಕೆ 35 ಗುಂಟೆ, ಅಹಲ್ಯಾ ಬಾಯಿ ಹೋಲ್ಕರ್ ಮಹಿಳಾ ಸಂಘಕ್ಕೆ 1 ಎಕರೆ, ಮಾಗಡಿ ರಸ್ತೆ ತಾವರೆಕೆರೆಯ ಹಠಯೋಗಿ ಕಾಳಪ್ಪ ಸ್ವಾಮಿಗಳ ಮಠದ ಸೇವಾ ಟ್ರಸ್ಟ್‌ಗೆ 32 ಗುಂಟೆ ಜಮೀನು ಮಂಜೂರು ಮಾಡಲಾಗಿದೆ.
ಇದನ್ನೂ ಓದಿ: ಸಂತೋಷ್ ಲಾಡ್-ಜಕ್ಕಪ್ಪನವರ ಜಟಾಪಟಿ; ಕೊನೆಗೂ ಪತ್ತೆಯಾಯ್ತು ನಿಗೂಢ 120 ಎಕರೆ ಜಮೀನು
ಕಠಿಣ 9 ಷರತ್ತುಗಳೇನು?
ಮಂಜೂರಾದ ಜಮೀನನ್ನು ಮಾರಾಟ, ಅಡಮಾನ ಅಥವಾ ಪರಭಾರೆ ಮಾಡುವಂತಿಲ್ಲ. ಭೂಮಿ ಪಡೆದ 2 ವರ್ಷದೊಳಗಾಗಿ ಉದ್ದೇಶಿತ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು. ನಿಗದಿತ ಕಾಲಮಿತಿಯೊಳಗೆ ಜಮೀನು ಬಳಕೆಯಾಗದಿದ್ದಲ್ಲಿ ಭೂಮಿ ವಾಪಸ್ ನೀಡಬೇಕು. ಸರ್ಕಾರದ ಅನುಮತಿ ಇಲ್ಲದೆ ಜಮೀನಿನ ಸ್ವರೂಪ ಬಸಲಿಸುವುದು ಅಥವಾ ಮೂರನೇ ವ್ಯಕ್ತಿಗೆ ವರ್ಗಾಹಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿದೆ.
ಇದನ್ನೂ ಓದಿ: ಶ್ರೀಶೈಲ ಯುಗಾದಿ ಜಾತ್ರೆ: 10 ದಿನ 4 ಹಂತಗಳಲ್ಲಿ ಮಾತ್ರ ಸ್ಪರ್ಶ ದರ್ಶನಕ್ಕೆ ಅವಕಾಶ